ಆಸ್ಕರ್ ರೇಸ್ ನಿಂದ ಭಾರತೀಯ ಚಿತ್ರ ‘ಲಾಪತಾ ಲೇಡೀಸ್’ ಹೊರಕ್ಕೆ
ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದ ಬ್ರಿಟನ್ ನ ಹಿಂದಿ ಚಿತ್ರ ‘ಸಂತೋಷ್’
Photo source: X
ಲಾಸ್ ಏಂಜಲೀಸ್: 79ನೇ ಅಕಾಡೆಮಿ ಪ್ರಶಸ್ತಿಗಳ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದ್ದ ‘ಲಾಪತಾ ಲೇಡೀಸ್’ ಚಿತ್ರ ಆಸ್ಕರ್ ಪ್ರಶಸ್ತಿ ರೇಸ್ ನಿಂದ ಹೊರ ಬಿದ್ದಿದೆ.
ಅಂತಿಮ ಐದರ ಘಟಕ್ಕೆ ತಲುಪುವ ಚಿತ್ರಗಳಿಗೂ ಮುನ್ನ ಸಿದ್ಧವಾಗಿರುವ 15 ಚಲನಚಿತ್ರಗಳ ಕಿರು ಪಟ್ಟಿಯಲ್ಲಿ ಕಿರಣ್ ರಾವ್ ನಿರ್ದೇಶಿಸಿರುವ ಹಿಂದಿ ಚಲನಚಿತ್ರ ‘ಲಾಪತಾ ಲೇಡೀಸ್’ ಸ್ಥಾನ ಪಡೆದಿಲ್ಲ ಎಂದು ದಿ ಅಕಾಡೆಮಿ ಆಫ್ ಮೋಶನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಬುಧವಾರ ಬೆಳಗ್ಗೆ ಪ್ರಕಟಿಸಿದೆ.
ಆದರೆ, ಭಾರತೀಯ ಸಂಜಾತ ಬ್ರಿಟಿಷ್ ಪ್ರಜೆ ಸಂಧ್ಯಾ ಸೂರಿ ನಿರ್ದೇಶಿಸಿರುವ, ಭಾರತೀಯ ನಟರಾದ ಸಹನಾ ಗೋಸ್ವಾಮಿ ಮತ್ತು ಸುನೀತಾ ರಾಜ್ವಾರ್ ನಟಿಸಿರುವ ಬ್ರಿಟನ್ ಅನ್ನು ಪ್ರತಿನಿಧಿಸುತ್ತಿರುವ ಸಂತೋಷ್ ಚಿತ್ರ 15ರ ಕಿರುಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದರೊಂದಿಗೆ ಫ್ರಾನ್ಸ್ ನ ‘ಎಮಿಲಿಯ ಪೆರೇಝ್’, ಬ್ರೆಝಿಲ್ ನ ‘ಐ ಆ್ಯಮ್ ಸ್ಟಿಲ್ ಹಿಯರ್’, ಕೆನಡಾದ ‘ಯೂನಿರ್ಸಲ್ ಲ್ಯಾಂಗ್ವೇಜ್’, ಝೆಕೊಸ್ಲಾವಿಯಾದ ‘ವೇವ್ಸ್’, ಡೆನ್ಮಾರ್ಕ್ ನ ‘ದಿ ಗರ್ಲ್ ವಿತ್ ದಿ ನೀಡಲ್ ಹಾಗೂ ಜರ್ಮನಿಯ ‘ದಿ ಸೀಡ್ ಆಫ್ ದಿ ಸೇಕ್ರೆಡ್ ಫಿಗ್’ ಚಲನಚಿತ್ರಗಳೂ ಸ್ಥಾನ ಪಡೆದಿವೆ.
ಈ ಚಿತ್ರಗಳಲ್ಲದೆ, ಐಸ್ ಲ್ಯಾಂಡ್ ನ ‘ಟಚ್’, ಐರ್ಲೆಂಡ್ ನ ‘ನೀಕ್ಯಾಪ್’, ಇಟಲಿಯ ವರ್ಮಿಗ್ಲಿಯೊ, ಲಾತ್ವಿಯಾದ ‘ಫ್ಲೋ’, ನಾರ್ವೆಯ ‘ಅರ್ಮಂಡ್’, ಫೆಲೆಸ್ತೀನ್ ನ ‘ಫ್ರಮ್ ಗ್ರೌಂಡ್ ಝೀರೊ’, ಸೆನೆಗಲ್ ನ ‘ದಹೋಮೆ’ ಹಾಗೂ ಥಾಯ್ಲೆಂಡ್ ನ ‘ಹೌ ಟು ಮೇಕ್ ಮಿಲಿಯನ್ಸ್ ಬಿಫೋರ್ ಗ್ರ್ಯಾಡ್ ಮಾ ಡೈಸ್’ ಚಿತ್ರಗಳೂ ಸ್ಪರ್ಧಾಕಣದಲ್ಲಿವೆ.