ನೋಡಬಹುದಾದ ಒಂದು ಕ್ರೈಂ ಥ್ರಿಲ್ಲರ್ ಚಲನಚಿತ್ರ 'ಲವಿಂಗ್ ಅಡಲ್ಟ್ಸ್'
ಮೊದಲ ದೃಶ್ಯದಿಂದಲೇ ಪ್ರೇಕ್ಷಕನನ್ನು ಕುರ್ಚಿಯ ಅಂಚಿನಲ್ಲಿ ಕೂರಿಸುವ 2022 ರಲ್ಲಿ ತೆರೆಕಂಡ ಡ್ಯಾನಿಶ್ ಮೂಲದ ಚಿತ್ರ ‘ಲವಿಂಗ್ ಅಡಲ್ಟ್ಸ್’ ( ಮೂಲ ಹೆಸರು- kaerlighed for voksne) ಕೊನೆವರೆಗೂ ಪ್ರೇಕ್ಷಕರನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ.
ಗಂಡ ಹೆಂಡತಿ ಮಧ್ಯೆ ಮನಸ್ತಾಪ, ಅಪನಂಬಿಕೆ... ಗಂಡನ ವಿವಾಹೇತರ ಸಂಬಂಧ..ಈಗಷ್ಟೇ ಚೇತರಿಸಿ ಕೊಳ್ಳುತ್ತಿರುವ ರೋಗಗ್ರಸ್ಥ ಹದಿಹರೆಯದ ಮಗ..ಹೆಂಡತಿಯ ಜಿಗುಟುತನ.. ಅದರ ನಡುವೆ ಘಟಿಸುವ ಒಂದು ಕೊಲೆ.. ಕೊಲೆಯ ಜಾಡು ಹಿಡಿದು ಹೊರಟ ಪೊಲೀಸರು.. ಪ್ರೇಯಸಿಯ ಆಷಾಢಭೂತಿತನ... ನಾಯಕನ ಕ್ರೌರ್ಯ.. ಅಸಹಾಯಕತೆ.. ಇವೆಲ್ಲವುಗಳನ್ನು ನಿರ್ದೇಶಕಿ ಬಾರ್ಬರಾ ತೋಪ್ಸೆ ರೋಥನ್‌ಬರ್ಗ್ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಪ್ರೀತಿ ಮತ್ತು ದ್ವೇಷದ ಸುತ್ತ ತಿರುಗುವ ಕಥೆ ಕೊನೆಗೆ ಪ್ರೀತಿಯನ್ನು ಎತ್ತಿ ಹಿಡಿಯುತ್ತದೆ. ವಿವಾಹೇತರ ಸಂಬಂಧಗಳ ಕ್ಷಣಿಕ ಸುಖವನ್ನು ಚಿತ್ರ ಆಳದಲ್ಲಿ ಖಂಡಿಸುತ್ತದೆ.
ಅನ್ನಾ ಎಕ್‌ಬರ್ಗ್ ಅವರ ಕಾದಂಬರಿ ಆಧರಿಸಿ ತೆಗೆದ ಚಿತ್ರ ತಾಂತ್ರಿಕವಾಗಿ ಉತ್ಕೃಷ್ಟವಾಗಿದೆ. ಕ್ರಿಶ್ಚಿಯನ್ ಎಡೆನ್ಸ್ ಆ್ಯಂಡರ್ಸನ್ ಮತ್ತು ರಸ್ಮುಸ್ ಕ್ರಿಶ್ಚೆನ್ಸನ್ ರವರ ಸಂಗೀತ ಜುಗಲ್ಬಂದಿ ಚಿತ್ರದ ಓಟಕ್ಕೆ, ಥ್ರಿಲ್ಲರ್ ಎಲಿಮೆಂಟ್‌ಗೆ ಪೂರಕ ವಾಗಿದೆ. ಫಿಲಿಫ್ ಕ್ರೆಸ್‌ರವರ ಛಾಯಾಗ್ರಹಣ ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದು. ಒಳಾಂಗಣ ಮತ್ತು ಹೊರಾಂಗಣದ ಚಿತ್ರವನ್ನು ಫಿಲಿಫ್ ಅತ್ಯಂತ ರಮಣೀಯವಾಗಿ ಚಿತ್ರಿಸಿದ್ದಾರೆ ಮತ್ತು ದೃಶ್ಯಗಳನ್ನು ಅತ್ಯಂತ ಶ್ರೀಮಂತವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಎಡಿಟರ್ ಲಾರ್ಸ್ ವಿಸ್ಸಿಂಗ್ ಕೇವಲ ೧೦೪ ನಿಮಿಷಗಳಲ್ಲಿ ತನ್ನ ಕಟ್ಸ್ ಮೂಲಕ ಚಿತ್ರವನ್ನು ಬೇಗನೆ ಮುಗಿಸಿ ಬಿಟ್ಟು ತಮ್ಮ ಕೈ ಚಳಕ ತೋರಿದ್ದಾರೆ.
ಇರಾಕ್ ಮೂಲದ ಡ್ಯಾನಿಶ್( ಡೆನ್ಮಾರ್ಕ್ ) ನಟ ದಾರ್ ಸಲೀಮ್ , ನಟಿ ಸೋನಿಯಾ ರೀಚರ್ ಮತ್ತು ಇತರ ಎಲ್ಲಾ ಸಹನಟರು ಅದ್ಭುತವಾಗಿ ನಟಿಸಿ ದ್ದಾರೆ. ‘ಲವಿಂಗ್ ಅಡಲ್ಟ್ಸ್’ ನೋಡಲೇಬೇಕಾದ ಒಂದು ಥ್ರಿಲ್ಲರ್ ಚಿತ್ರ.
ಚಿತ್ರ ಇಂಗ್ಲಿಷ್ ಡಬ್ಬಿಂಗ್ ಮತ್ತು ಸಬ್ ಟೈಟಲ್ ನೊಂದಿಗೆ ನೆಟ್ ಫ್ಲಿಕ್‌ನಲ್ಲಿ ಲಭ್ಯವಿದೆ. ಚಿತ್ರದ IMDb ರೇಟಿಂಗ್ 6.5/10