ಮಾದಕ ವಸ್ತು ಹೊಂದಿದ್ದ ಆರೋಪ: ಇಬ್ಬರು ಮಲಯಾಳಂ ಚಿತ್ರ ನಿರ್ದೇಶಕರ ಬಂಧನ

ಖಾಲಿದ್ ರಹಮಾನ್, ಅಶ್ರಫ್ ಹಂಝ (Facebook)
ಕೊಚ್ಚಿ: ರವಿವಾರ ಮುಂಜಾನೆ ಅಬಕಾರಿ ಇಲಾಖೆ ನಡೆಸಿದ ತಡರಾತ್ರಿ ಕಾರ್ಯಾಚರಣೆಯಲ್ಲಿ ಸಂಕರ ಗಾಂಜಾವನ್ನು ಹೊಂದಿದ್ದ ಆರೋಪದ ಮೇಲೆ ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಖಾಲಿದ್ ರಹಮಾನ್, ಅಶ್ರಫ್ ಹಂಝ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಗಾಸ್ರೀ ಸೇತುವೆ ಬಳಿಯಿರುವ ಸಿನಿಮಾ ಛಾಯಾಗ್ರಾಹಕ ಸಮೀರ್ ತಾಹಿರ್ ಮಾಲಕತ್ವದ ಅಪಾರ್ಟ್ ಮೆಂಟ್ ಒಂದರ ಮೇಲೆ ನಡೆಸಿದ ದಾಳಿಯ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಖಚಿತ ಸುಳಿವನ್ನಾಧರಿಸಿ, ರವಿವಾರ ಮುಂಜಾನೆ ಸುಮಾರು 2.30ರ ವೇಳೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದು, ಬಂಧಿತ ಆರೋಪಿಗಳಿಂದ ಸುಮಾರು 1.6 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಈ ಮೂವರು ಆರೋಪಿಗಳು ಗಾಂಜಾ ಸೇದಲು ಸಿದ್ಧತೆ ನಡೆಸುವಾಗ ಅಬಕಾರಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ತಕ್ಷಣವೇ ಅವರನ್ನು ವಶಕ್ಕೆ ಪಡೆಯಲಾಗಿದ್ದು, ನಂತರ, ಠಾಣಾ ಜಾಮೀನಿನ ಮೇಲೆ ಅವರೆಲ್ಲರನ್ನೂ ಬಿಡುಗಡೆಗೊಳಿಸಲಾಗಿದೆ.
ನಿರ್ದೇಶಕರಾದ ರಹಮಾನ್ ಹಾಗೂ ಹಂಝ ನಿಯಮಿತ ಮಾದಕ ವಸ್ತುಗಳ ಬಳಕೆದಾರರಾಗಿದ್ದಾರೆ ಎಂದು ಅಬಕಾರಿ ಇಲಾಖೆ ಬಹಿರಂಗ ಪಡಿಸಿದೆ.
ಅವರು ಹೊಂದಿದ್ದ ಮಾದಕ ದ್ರವ್ಯಗಳ ಮೂಲವನ್ನು ಕಂಡುಹಿಡಿಯಲು ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.