ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದ ನಟನ ಮೆಡಿಕಲ್ ಬಿಲ್ ಭರಿಸಿದ್ದ ಸಲ್ಮಾನ್ ಖಾನ್
ಸಲ್ಮಾನ್ ಖಾನ್ (PTI) / ರಾಹುಲ್ ರಾಯ್ (instagram)
ಮುಂಬೈ: 'ಆಶಿಕಿ' ಚಿತ್ರದ ನಟ ರಾಹುಲ್ ರಾಯ್ ಅವರಿಗೆ 2020 ರಲ್ಲಿ ಬ್ರೈನ್ ಸ್ಟ್ರೋಕ್ಗೆ ಒಳಗಾಗಿದ್ದಾಗ ನಟ ಸಲ್ಮಾನ್ ಖಾನ್ ಅವರು ಸಹಾಯ ಮಾಡಿರುವುದನ್ನು ರಾಯ್ ಅವರ ಸಹೋದರಿ ಹರಿ ಮಾ ಪ್ರಿಯಾಂಕಾ ನೆನಪಿಸಿಕೊಂಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದ ಹರಿ ಮಾ ಪ್ರಿಯಾಂಕಾ ಅವರು, ಸಲ್ಮಾನ್ ಖಾನ್ ಅವರು ರಾಹುಲ್ ರಾಯ್ ಅವರ ಬಾಕಿಯಿದ್ದ ಮೆಡಿಕಲ್ ಬಿಲ್ ಗಳನ್ನು ಭರಿಸಿದ್ದಾರೆ ಎಂದು ತಿಳಿಸಿದ್ದಾರೆ.
"ನಾನು ಸಲ್ಮಾನ್ (ಖಾನ್) ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ಯಾವುದೇ ಬಿಲ್ ಬಾಕಿ ಉಳಿಯದಂತೆ, ಸಲ್ಮಾನ್ ಫೆಬ್ರವರಿಯಲ್ಲಿ ಅದನ್ನು ಭರಿಸಿದರು. ಸಲ್ಮಾನ್ (ರಾಹುಲ್) ಅವರಿಗೆ ಕರೆ ಮಾಡಿ, ಏನಾದರೂ ಸಹಾಯ ಮಾಡಬೇಕೆ ಎಂದು ಕೇಳಿದ್ದರು, ಮಾತ್ರವಲ್ಲ ಸಹಾಯವನ್ನೂ ಮಾಡಿದ್ದಾರೆ.” ಎಂದು ಪ್ರಿಯಾಂಕಾ ಹೇಳಿದ್ದಾರೆ.
"ಸಲ್ಮಾನ್ ಮಾಧ್ಯಮಗಳ ಮುಂದೆ ಅದರ ಬಗ್ಗೆ ಎಂದೂ ಮಾತನಾಡಿರಲಿಲ್ಲ. ಇದು ನನ್ನ ಹೃದಯವನ್ನು ಮುಟ್ಟಿತು. ಈ ಮನುಷ್ಯ ಅಮೂಲ್ಯ ರತ್ನ " ಎಂದು ಪ್ರಿಯಾಂಕಾ ಹೇಳಿದರು.
2020 ರಲ್ಲಿ LAC - ಲೈವ್ ದಿ ಬ್ಯಾಟಲ್ ಇನ್ ಕಾರ್ಗಿಲ್ ಚಿತ್ರದ ಚಿತ್ರೀಕರಣದ ವೇಳೆ ರಾಹುಲ್ ರಾಯ್ ಬ್ರೈನ್ ಸ್ಟ್ರೋಕ್ಗೆ ಒಳಗಾಗಿದ್ದರು. ಅದರ ನಂತರ, ಅವರನ್ನು ತಕ್ಷಣವೇ ವೊಕಾರ್ಡ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.