ಫೆಲೆಸ್ತೀನ್ ಪರ ಹೇಳಿಕೆ ನೀಡಿದ್ದ ಹಾಲಿವುಡ್ ನಟಿಯನ್ನು ಚಿತ್ರದಿಂದ ಕೈಬಿಟ್ಟ ಸಿನೆಮಾ ತಂಡ
ಸೂಸನ್ ಸಾರಂಡೊನ್ (Photo credit: ianslive.in)
ಲಾಸ್ ಏಂಜಲಿಸ್: ಯಹೂದಿಗಳ ವಿರುದ್ಧ ಹಾಗೂ ಫೆಲೆಸ್ತೀನ್ ಪರ ನೀಡಿದ ಹೇಳಿಕೆಗಳಿಂದ ಸುದ್ದಿಯಾಗಿದ್ದ ಹಾಲಿವುಡ್ ನಟಿ ಸೂಸನ್ ಸಾರಂಡೊನ್ ಅವರನ್ನು ಥ್ರಿಲ್ಲರ್ ಸಿನಿಮಾ “ಸ್ಲಿಪ್ಪಿಂಗ್ ಅವೇ”ದಿಂದ ಕೈಬಿಡಲಾಗಿದೆ.
ಮಾನಸಿಕ ಸಮಸ್ಯೆಯಿರುವ ವ್ಯಕ್ತಿಯ ಹೋರಾಟಗಳು ಮತ್ತು ಆತನ ಪತ್ನಿಯ ಅಕ್ರಮ ಸಂಬಂಧದ ಸುತ್ತದ ಕಥೆಯನ್ನು ಈ ಸಿನೆಮಾ ಹೊಂದಿದೆ.
“ಅಮೆರಿಕಾದಲ್ಲಿ ಮುಸ್ಲಿಂ ಆಗಿರುವುದು ಹೇಗನಿಸುತ್ತದೆ ಎಂಬುದರ ರುಚಿಯನ್ನು ಯಹೂದಿಗಳು ಪಡೆಯುತ್ತಿದ್ದಾರೆ,” ಎಂದು ಸೂಸನ್ ಹೇಳಿ ವಿವಾದಕ್ಕೀಡಾಗಿದ್ದರು.
“ಸೂಸನ್ ಅವರ ಹೇಳಿಕೆಗಳು ನಮ್ಮ ಸಂಸ್ಥೆಯ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ, ನಾವು ನಮ್ಮ ಕಿರುಚಿತ್ರಕ್ಕೆ ಆಕೆಯನ್ನು ಆಯ್ಕೆಮಾಡಲು ಪರಿಗಣಿಸಿದ್ದೆವು, ಆದರೆ ಆಕೆಯ ಇತ್ತೀಚಿಗಿನ ಹೇಳಿಕೆಗಳಿಂದಾಗಿ ನಾವು ಬೇರೆ ಆಯ್ಕೆಗಳನ್ನು ಹೊಂದಲು ನಿರ್ಧರಿಸಿದ್ದೇವೆ,” ಎಂದು “ಸ್ಲಿಪ್ಪಿಂಗ್ ಅವೇ” ನಿರ್ಮಾಣ ಸಂಸ್ಥೆಯಾದ ಪಿಟಿಒ ಫಿಲ್ಮ್ಸ್ ಹೇಳಿದೆ.
ಈ ಸಿನೆಮಾದಲ್ಲಿ ಸೂಸನ್ ಅವರು ಡಾ ಸಿಲ್ವಿಯಾ ಮ್ಯಾನ್ಸ್ಫೀಲ್ಡ್ ಪಾತ್ರ ನಿರ್ವಹಿಸಲಿದ್ದರು.
ಸೂಸನ್ ಅವರನ್ನು ಆಕೆಯ ಯುಟಿಎ ಏಜನ್ಸಿ ಕೂಡ ಕೈಬಿಟ್ಟಿದೆ. ಇಸ್ರೇಲ್-ಹಮಾಸ್ ಸಂಘರ್ಷದ ಕುರಿತ ಆಕೆಯ ಹೇಳಿಕೆಗಳು ಸಂಸ್ಥೆಯ ಹಲವಾರು ಉದ್ಯೋಗಿಗಳಿಗೆ ತೀವ್ರ ನೋವು ತಂದಿದೆ ಎಂದು ಸಂಸ್ಥೆ ಹೇಳಿದೆ.