ಬಾಲಿವುಡ್ ಚಿತ್ರ ‘ಮಹಾರಾಜ್’ ಬಿಡುಗಡೆಗೆ ಗುಜರಾತ್ ಹೈಕೋರ್ಟ್ ನಿಂದ ತಡೆಯಾಜ್ಞೆ
ಬಾಲಿವುಡ್ ಚಿತ್ರ‘ಮಹಾರಾಜ್ʼ | PC : PTI
ಹೊಸದಿಲ್ಲಿ: ಬಾಲಿವುಡ್ ಚಿತ್ರ‘ಮಹಾರಾಜ್’ನ ಬಿಡುಗಡೆಗೆ ಗುರುವಾರ ತಡೆಯಾಜ್ಞೆ ನೀಡಿರುವ ಗುಜರಾತ್ ಉಚ್ಚ ನ್ಯಾಯಾಲಯವು, ಚಿತ್ರನಿರ್ಮಾಣ ಸಂಸ್ಥೆ ಯಶರಾಜ್ ಫಿಲ್ಮ್ಸ್ ಮತ್ತು ಒಟಿಟಿ ಪ್ಲ್ಯಾಟ್ಫಾರ್ಮ್ ನೆಟ್ಫ್ಲಿಕ್ಸ್ ಗೆ ನೋಟಿಸ್ ಗಳನ್ನು ಹೊರಡಿಸಿದೆ.
ಸಿದ್ಧಾರ್ಥ ಪಿ.ಮಲ್ಹೋತ್ರಾ ನಿರ್ದೇಶನದ ಮತ್ತು ನಟ ಆಮಿರ್ ಖಾನ್ ಅವರ ಪುತ್ರ ಜುನೈದ್ ಖಾನ್ ಅವರ ಮೊದಲ ಚಿತ್ರವಾಗಿರುವ ‘ಮಹಾರಾಜ್’ ನೆಟ್ಫ್ಲಿಕ್ಸ್ ನಲ್ಲಿ ಶುಕ್ರವಾರ ಬಿಡುಗಡೆಗೊಳ್ಳಬೇಕಿತ್ತು. ಚಿತ್ರವು 1862ರ ಮಹಾರಾಜ್ ಮಾನನಷ್ಟ ಪ್ರಕರಣವನ್ನು ಆಧರಿಸಿದೆ.
ವೈಷ್ಣವ ಪಂಥದ ಧಾರ್ಮಿಕ ಗುರು ಜಾದುನಾಥಜಿ ಬೃಜರತನ್ಜಿ ಮಹಾರಾಜ್ ಅವರು 1862ರಲ್ಲಿ ಸಮಾಜ ಸುಧಾರಕ ಕರ್ಸನದಾಸ್ ಮುಲ್ಜಿ ಅವರ ವಿರುದ್ಧ ದಾಖಲಿಸಿದ್ದ ಪ್ರಕರಣದ ವಿಚಾರಣೆಯನ್ನು ಚಿತ್ರವು ಆಧರಿಸಿದೆ. ಮುಲ್ಜಿಯವರು ಆಗಿನ ಬಾಂಬೆಯಲ್ಲಿ ಪ್ರಸಾರಗೊಳ್ಳುತ್ತಿದ್ದ ‘ಸತ್ಯಪ್ರಕಾಶ ’ಗುಜರಾತಿ ಸಾಪ್ತಾಹಿಕದಲ್ಲಿಯ ಲೇಖನದಲ್ಲಿ ಜಾದುನಾಥಜಿ ತನ್ನ ಮಹಿಳಾ ಭಕ್ತರೊಂದಿಗೆ ಲೈಂಗಿಕ ಸಂಪರ್ಕಗಳನ್ನು ಹೊಂದಿದ್ದಾರೆ ಎಂಬ ಆರೋಪಗಳ ಮೇಲೆ ಬೆಳಕು ಚೆಲ್ಲಿದ್ದರು. ಅಂತಿಮವಾಗಿ ಪ್ರಕರಣವನ್ನು ಅಂದಿನ ಬಾಂಬೆಯ ಸರ್ವೋಚ್ಚ ನ್ಯಾಯಾಲಯದ ಇಬ್ಬರು ಬ್ರಿಟಿಷ್ ನ್ಯಾಯಾಧೀಶರು ವಜಾಗೊಳಿಸಿದ್ದರು.
ತಮ್ಮನ್ನು ಶ್ರೀಕೃಷ್ಣನ ಭಕ್ತರೆಂದು ಗುರುತಿಸಿಕೊಳ್ಳುವ ವೈಷ್ಣವ ಪಂಥದ ಪುಷ್ಟಿಮಾರ್ಗ ಪಂಗಡದ ಅನುಯಾಯಿಗಳು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆಗೆತ್ತಿಕೊಂಡಿದ್ದ ನ್ಯಾ.ಸಂಗೀತಾ ವಿಶೇನ್ ಅವರು ಚಿತ್ರದ ಬಿಡುಗಡೆಗೆ ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡಿದರು.
ಚಿತ್ರದ ಆಯ್ದ ಭಾಗಗಳು ಅಪನಿಂದನೆಯ ಮತ್ತು ಮಾನಹಾನಿಕರ ಭಾಷೆಯನ್ನು ಒಳಗೊಂಡಿದ್ದು,ಇದು ಒಟ್ಟಾರೆಯಾಗಿ ಪುಷ್ಟಿಮಾರ್ಗ ಪಂಥದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಚಿತ್ರದ ಬಿಡುಗಡೆಯು ತಮ್ಮ ಪಂಥದ ವಿರುದ್ಧ ದ್ವೇಷ ಮತ್ತು ಹಿಂಸೆಯ ಭಾವನೆಗಳನ್ನು ಪ್ರಚೋದಿಸುವ ಸಾಧ್ಯತೆಯಿದ್ದು,ಇದು ಮಾಹಿತಿ ತಂತ್ರಜ್ಞಾನ(ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ನೀತಿ ಸಂಹಿತೆ) ನಿಯಮಗಳು,2021ರಡಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಚಿತ್ರದ ಖಾಸಗಿ ಪ್ರದರ್ಶನವನ್ನು ಅಥವಾ ಸ್ಪಷ್ಟೀಕರಣವನ್ನು ಕೋರಿ ಎಪ್ರಿಲ್ನಲ್ಲಿ ಇನ್ನೊಂದು ಸಂಸ್ಥೆಯ ಸಲ್ಲಿಸಿದ್ದ ಮನವಿಯನ್ನು ಯಶರಾಜ್ ಫಿಲ್ಮ್ಸ್ ಮತ್ತು ನೆಟ್ಫ್ಲಿಕ್ಸ್ ನಿರಾಕರಿಸಿದ್ದವು ಎಂದು ತಿಳಿಸಿರುವ ಅರ್ಜಿಯು,ಈ ನಿರಾಕರಣೆಯು ಅರ್ಜಿದಾರರ ಆತಂಕಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ ಎಂದು ಹೇಳಿದೆ.
ಚಿತ್ರದ ಬಿಡುಗಡೆಯನ್ನು ತಡೆಹಿಡಿಯುವಂತೆ ಕೋರಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಧಿಕೃತ ಅಧಿಕಾರಿಗೆ ಸಲ್ಲಿಸಲಾಗಿರುವ ಅರ್ಜಿಯ ಕುರಿತು ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ ಎಂದೂ ಅರ್ಜಿಯು ತಿಳಿಸಿದೆ.
ಗುರುವಾರ ಉಚ್ಚ ನ್ಯಾಯಾಲಯವು ಯಶರಾಜ್ ಫಿಲ್ಮ್ಸ್ ಮತ್ತು ನೆಟ್ಫ್ಲಿಕ್ಸ್ ಜೊತೆಗೆ ಕೇಂದ್ರೀಯ ಸೆನ್ಸಾರ್ ಮಂಡಳಿ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೂ ನೋಟಿಸ್ಗಳನ್ನು ಹೊರಡಿಸಿದೆ.
ಮುಂದಿನ ವಿಚಾರಣೆಯನ್ನು ಜೂ.18ಕ್ಕೆ ನಿಗದಿಗೊಳಿಸಲಾಗಿದೆ.
ಮುಸ್ಲಿಮ್ ವಿರೋಧಿ ಮಾತುಗಳನ್ನು ಒಳಗೊಂಡಿದೆ ಎಂದು ಆರೋಪಿಸಲಾಗಿರುವ ಇನ್ನೊಂದು ಚಿತ್ರ ‘ಹಮಾರೆ ಬಾರಾ’ದ ಬಿಡುಗಡೆಗೆ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿದ ದಿನವೇ ಗುಜರಾತ್ ಉಚ್ಚ ನ್ಯಾಯಾಲಯವು ‘ಮಹಾರಾಜ್’ ಚಿತ್ರ ಬಿಡುಗಡೆಯನ್ನು ತಾತ್ಕಾಲಿವಾಗಿ ನಿರ್ಬಂಧಿಸಿದೆ.
ಕಮಲ ಚಂದ್ರ ನಿರ್ದೇಶನದ ‘ಹಮಾರೆ ಬಾರಾ’ ಕೂಡ ಶುಕ್ರವಾರವೇ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಬೇಕಿತ್ತು. ಚಿತ್ರವು ಇಸ್ಲಾಮ್ ಧರ್ಮ ಮತ್ತು ವಿವಾಹಿತ ಮುಸ್ಲಿಮ್ ಮಹಿಳೆಯರಿಗೆ ಅವಹೇಳನಕಾರಿಯಾಗಿದೆ ಹಾಗೂ ಚಿತ್ರದ ಟ್ರೇಲರ್ನಲ್ಲಿಯೂ ಕುರ್ಆನ್ನ ಶ್ಲೋಕವನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಅರ್ಜಿಯು ಆಪಾದಿಸಿತ್ತು.