‘ಗುಣ’ ಚಿತ್ರದ ಗೀತೆ ಬಳಕೆ: ‘ಮಂಜುಮ್ಮೆಲ್ ಬಾಯ್ಸ್’ ಚಿತ್ರತಂಡಕ್ಕೆ ಕಾನೂನು ನೋಟಿಸ್ ನೀಡಿದ ಇಳಯರಾಜ
ಇಳಯರಾಜ(PTI) , ಮಂಜುಮ್ಮೆಲ್ ಬಾಯ್ಸ್ (X)
ಚೆನ್ನೈ: ಹಕ್ಕು ಸ್ವಾಮ್ಯ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸಂಗೀತ ದಿಗ್ಗಜ ಹಾಗೂ ರಾಜ್ಯಸಭಾ ಸದಸ್ಯ ಇಳಯರಾಜ ಅವರು ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದ ನಿರ್ಮಾಪಕರಾದ ಸೌಬಿನ್ ಶಾಹಿರ್, ಬಾಬು ಶಾಹಿರ್ ಹಾಗೂ ಶಾನ್ ಆ್ಯಂಟನಿ ಅವರಿಗೆ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ.
‘ಮಂಜುಮ್ಮೆಲ್ ಬಾಯ್ಸ್’ ಚಿತ್ರ ತಂಡವು ಚಿತ್ರದ ಪ್ರಮುಖ ಘಟ್ಟದಲ್ಲಿ ಕಮಲ್ ಹಾಸನ್ ನಟಿಸಿದ್ದ ‘ಗುಣ’ ಚಿತ್ರದಲ್ಲಿನ ಇಳಯರಾಜ ಅವರ ಪ್ರಸಿದ್ಧ ‘ಕಣ್ಮಣಿ ಅನ್ಬೊಡು’ ಗೀತೆಯನ್ನು ಅನಧಿಕೃತವಾಗಿ ಬಳಸಿಕೊಂಡಿದೆ ಎಂದು ಇಳಯರಾಜರ ಕಾನೂನು ತಂಡವು ಆರೋಪಿಸಿದೆ. ಚಿದಂಬರಂ ನಿರ್ದೇಶಿಸಿರುವ ಈ ಮಲಯಾಳಂ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಈ ಗೀತೆಯನ್ನು ಬಳಸಿಕೊಂಡಿದ್ದ ವಿಧಾನಕ್ಕೆ ವ್ಯಾಪಕ ಪ್ರಶಂಸೆಗಳು ಕೇಳಿ ಬಂದಿದ್ದವು.
ಹಕ್ಕು ಸ್ವಾಮ್ಯವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿರುವ ಇಳಯರಾಜ, ಚಿತ್ರದಲ್ಲಿ ಆ ಗೀತೆಯ ಬಳಕೆಯು ಮುಂದುವರಿಯಬೇಕಾದರೆ ಚಿತ್ರದ ನಿರ್ಮಾಪಕರು ನನ್ನಿಂದ ಸಮರ್ಪಕ ಅನುಮತಿ ಪಡೆಯಬೇಕು ಇಲ್ಲವೆ ಆ ಗೀತೆಯನ್ನು ತೆಗೆದು ಹಾಕಬೇಕು ಎಂದು ಸೂಚಿಸಿದ್ದಾರೆ.
ಇದಕ್ಕೂ ಮುನ್ನ, ರಜನೀಕಾಂತ್ ನಟಿಸಿದ್ದ ‘ಕೂಲಿ’ ಚಿತ್ರದ ಪ್ರೊಮೊದಲ್ಲಿ ಚಿತ್ರ ತಂಡವು ತಮ್ಮ ಒಂದು ಗೀತೆಯನ್ನು ಬಳಸಿಕೊಂಡಿದ್ದ ಕಾರಣಕ್ಕೆ ಇಳಯರಾಜ ಅವರು ಸನ್ ಪಿಕ್ಚರ್ಸ್ ಗೂ ಕಾನೂನು ನೋಟಿಸ್ ಜಾರಿಗೊಳಿಸಿದ್ದರು.
ಇಳಯರಾಜ ಈ ಹಿಂದಿನಿಂದಲೂ ಹಕ್ಕು ಸ್ವಾಮ್ಯ ಪರವಾದ ಹೋರಾಟಕ್ಕೆ ತಮ್ಮ ಮೌಖಿಕ ಬೆಂಬಲ ವ್ಯಕ್ತಪಡಿಸುತ್ತಾ ಬಂದಿದ್ದಾರೆ.