ತೆರಿಗೆ ವಿನಾಯಿತಿ ನೀಡಿದರೂ ರೂ. 10 ಕೋಟಿ ಗಳಿಕೆ ದಾಟಲೂ ಕಷ್ಟಪಡುತ್ತಿರುವ ವಿಕ್ರಾಂತ್ ಮ್ಯಾಸ್ಸಿಯ ‘ದಿ ಸಾಬರಮತಿ ರಿಪೋರ್ಟ್’ ಚಿತ್ರ: ವರದಿ
Photo credit: indiatoday.in
ಮುಂಬೈ: ವಿಕ್ರಾಂತ್ ಮ್ಯಾಸಿ ನಟಿಸಿರುವ ಇತ್ತೀಚಿನ ‘ದಿ ಸಾಬರಮತಿ ರಿಪೋರ್ಟ್’ ಚಲನಚಿತ್ರಕ್ಕೆ ಹಲವು ರಾಜ್ಯಗಳು ತೆರಿಗೆ ವಿನಾಯಿತಿ ಘೋಷಿಸಿದ್ದರೂ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಗಮನಾರ್ಹ ಸವಾಲು ಎದುರಿಸುತ್ತಿದೆ ಎಂದು ವರದಿಯಾಗಿದೆ. ಗೋಧ್ರಾ ಹತ್ಯಾಕಾಂಡದ ಕುರಿತು ನಿರ್ಮಿಸಲಾಗಿರುವ ಈ ಚಿತ್ರವು ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲಗೊಂಡಿದೆ.
ಧೀರಜ್ ಸರಣ್ ನಿರ್ದೇಶಿಸಿ, ಅವಿನಾಶ್ ಸಿಂಗ್ ಮತ್ತು ಅರ್ಜುನ್ ಭಂಡೇಗಾಂವ್ಕರ್ ಕತೆ ರಚಿಸಿರುವ ‘ದಿ ಸಾಬರಮತಿ ರಿಪೋರ್ಟ್’ ಚಲನಚಿತ್ರವು ನವೆಂಬರ್ 15ರಂದು ಬಿಡುಗಡೆಯಾಗಿತ್ತು. ಆದರೆ, ಗಲ್ಲಾಪೆಟ್ಟಿಗೆಯಲ್ಲಿನ ಸಂಗ್ರಹವು ನಿರೀಕ್ಷೆಗಿಂತ ಕಡಿಮೆ ಇದೆ. Sacnilk ಟ್ರೆಂಡ್ ಪ್ರಕಾರ, ವಿಕ್ರಾಂತ್ ಮ್ಯಾಸಿ ನಟಿಸಿರುವ ‘ದಿ ಸಾಬರಮತಿ ರಿಪೋರ್ಟ್’ ಚಲನಚಿತ್ರವು ಬಿಡುಗಡೆಯಾದ ಐದನೆಯ ದಿನದಂದು ರೂ. 1.25 ಕೋಟಿ ಗಳಿಕೆ ಮಾಡಿದ್ದು, ಇದರಿಂದ ಕಳೆದ ಐದು ದಿನಗಳಲ್ಲಿನ ಗಳಿಕೆ ಪ್ರಮಾಣ ಒಟ್ಟು ರೂ. 8.75 ಕೋಟಿ ಆಗಿದೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ. ಚಿತ್ರದ ದೈನಂದಿನ ಗಳಿಕೆ ಅಸ್ಥಿರವಾಗಿದ್ದು, ಬಿಡುಗಡೆಯಾದ ಮೊದಲ ದಿನ (ಶುಕ್ರವಾರ) ರೂ. 1.25 ಕೋಟಿ ಗಳಿಸಿದರೆ, ಎರಡನೆ ದಿನ (ಶನಿವಾರ) ರೂ. 2.1 ಕೋಟಿ, ಮೂರನೆ ದಿನ (ರವಿವಾರ) ರೂ. 3 ಕೋಟಿ ಹಾಗೂ ನಾಲ್ಕನೆ ದಿನ (ಸೋಮವಾರ) ರೂ. 1.15 ಕೋಟಿ ಮಾತ್ರ ಗಳಿಕೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ರಿಂದ ಶ್ಲಾಘನೆಗೆ ಒಳಗಾಗಿದ್ದರೂ, ಈ ಚಿತ್ರ ಪ್ರೇಕ್ಷಕರ ಮೇಲೆ ಗಮನಾರ್ಹ ಪ್ರಭಾವ ಬೀರುವಲ್ಲಿ ವಿಫಲಗೊಂಡಿದೆ. ಇತ್ತೀಚೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ರೊಂದಿಗಿನ ತಮ್ಮ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ವಿಕ್ರಮ್ ಮ್ಯಾಸ್ಸಿ, ತಮ್ಮ ಭೇಟಿಯ ಸಂದರ್ಭದಲ್ಲಿ ಚಿತ್ರವನ್ನು ಪ್ರಶಂಸಿಸಿದ್ದ ಅವರಿಗೆ ಕೃತಜ್ಞತೆ ಸಲ್ಲಿಸಿದ್ದರು. “ಇಂದು ನನಗೆ ಗೌರವಾನ್ವಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಭೇಟಿ ಮಾಡುವ ಅವಕಾಶ ದೊರೆಯಿತು. ಅವರ ಪ್ರಶಂಸೆಯು ‘ದಿ ಸಾಬರಮತಿ ರಿಪೋರ್ಟ್’ ಚಿತ್ರ ತಂಡಕ್ಕೆ ಸ್ಫೂರ್ತಿ ತುಂಬಿದೆ. ಈ ಗೌರವ ಮತ್ತು ಪ್ರೀತಿಗೆ ಹೃದಯಪೂರ್ವಕ ಧನ್ಯವಾದಗಳು” ಎಂದು ಅವರು ಬರೆದುಕೊಂಡಿದ್ದರು.
‘ದಿ ಸಾಬರಮತಿ ರಿಪೋರ್ಟ್’ ಚಿತ್ರದ ಸಾಧನೆಯನ್ನು ಉತ್ತೇಜಿಸಲು ಇತ್ತೀಚೆಗೆ ಹರ್ಯಾಣ ಮುಖ್ಯಮಂತ್ರಿ ನಯಾಬ್ ಸೈನಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದರು. ಇತರ ಬಿಜೆಪಿ ಆಡಳಿತಾರೂಢ ರಾಜ್ಯಗಳಾದ ಛತ್ತೀಸ್ ಗಢ ಮತ್ತು ಮಧ್ಯಪ್ರದೇಶ ಸರಕಾರಗಳೂ ಈ ಚಿತ್ರವನ್ನು ತೆರಿಗೆ ಮುಕ್ತಗೊಳಿಸಿದ್ದವು. ಆದರೆ, ಈ ಪ್ರಯತ್ನಗಳಿಂದ ಗಲ್ಲಾಪೆಟ್ಟಿಗೆಯಲ್ಲಿನ ಗಳಿಕೆಯು ಇನ್ನಷ್ಟೇ ಸುಧಾರಿಸಬೇಕಿದೆ.