ಸಮೋಸಾ ಮಾರಾಟ ಮಾಡುತ್ತಿದ್ದ ಬಗ್ಗೆ ಕಾಮಿಡಿಯನ್ ಮುನವ್ವರ್ ಫಾರೂಕಿ ಹೇಳಿದ್ದೇನು?
Photo: ಮುನವ್ವರ್ ಫಾರೂಕಿ | PTI
ಯೂಟ್ಯೂಬ್ನಲ್ಲಿ ಹಾಸ್ಯ ತುಣಕುಗಳ ವಿಡಿಯೊ ಮೂಲಕ ಮನೆಮಾತಾಗಿರುವ ಖ್ಯಾತ ಕಾಮಿಡಿಯನ್ ಮುನವ್ವರ್ ಫಾರೂಕಿ ತಮ್ಮ ಬದುಕಿನ ‘ತೇದೆ ಮೇಧೆ ಕಾಮ್' ಬಗ್ಗೆ ಬಿಚ್ಚಿಟ್ಟಿದ್ದಾರೆ. 2007ರಲ್ಲಿ ಮುಂಬೈಗೆ ತೆರಳುವ ಮುನ್ನ ಗುಜರಾತ್ನಲ್ಲಿ ಬೆಳೆಯುವ ಹಂತದಲ್ಲಿ ಎದುರಿಸಿದ ಆರ್ಥಿಕ ಸಂಕಷ್ಟಗಳ ಬಗ್ಗೆಯೂ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಸಣ್ಣ ಲಾಭಕ್ಕಾಗಿ ವಿದೇಶಿ ಹಣವನ್ನು ಕಾನೂನುಬಾಹಿರವಾಗಿ ವಿನಿಮಯ ಮಾಡುತ್ತಿದ್ದರು; ವಿದೇಶಿ ಪ್ರವಾಸಿಗಳು ಹೆಚ್ಚಾಗಿ ಬರುವ ಪ್ರದೇಶದಲ್ಲಿ ಓಡಾಡುತ್ತಿದ್ದರು, ಸ್ಥಳೀಯ ಕರೆನ್ಸಿಗೆ ತಮ್ಮ ಹಣವನ್ನು ಬದಲಾಯಿಸಲು ಇವರ ಬಳಿಗೆ ಬರುತ್ತಿದ್ದರು. ಇದರಿಂದ ದಿನಕ್ಕೆ 700 ರೂಪಾಯಿ ಆದಾಯ ಗಳಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.
ಅಂತೆಯೇ ಮುನವ್ವರ್ ಸಮೋಸಾ ಅಂಗಡಿಯಲ್ಲೂ ಕೆಲಸ ಮಾಡಿದ್ದರು. "ನಮ್ಮದೊಂದು ಹೋಟೆಲ್ ಇತ್ತು. ಆದರೆ ಅದು ಕಾರ್ಯಸಾಧುವಾಗಲಿಲ್ಲ. ತಂದೆ ಹಣ ಕಳೆದುಕೊಂಡರು. ದೊಡ್ಡ ಮೊತ್ತದ ಸಾಲದ ಹೊರೆ ಇರುವಾಗ, ಗಿಫ್ಟ್ ಶಾಪ್ನಲ್ಲೂ ಕೆಲಸ ಮಾಡಿದ್ದೆ. ದಿನಕ್ಕೆ 11 ಗಂಟೆ ಕೆಲಸ ಮಾಡಿ 850 ರೂಪಾಯಿ ಸಂಬಳ ಪಡೆಯುತ್ತಿದ್ದೆ. ಅದು ಇಷ್ಟವಾಗದೇ ಬೇರೆಡೆ ಹೋಗಲು ಬಯಸಿದೆ. ನನ್ನ ತಂದೆ ಹಾಗೂ ಅಜ್ಜಿ ಮನೆಯಲ್ಲಿ ಸಮೋಸಾ ಮಾಡಿಕೊಡುತ್ತಿದ್ದರು. ಮನೆಯ ಮುಂದೆಯೇ ಒಂದು ಅಂಗಡಿ ತೆರೆದು ಮಾರಾಟ ಆರಂಭಿಸಿದೆ.. ನನ್ನ ಬೆರಳುಗಳು ಸುಟ್ಟಿವೆ. ಕಾದ ಎಣ್ಣೆ ಸಿಡಿದಿದೆ.. ಪ್ರತಿಯೊಂದೂ ಅನುಭವವಾಗಿದೆ" ಎಂದು ಬಣ್ಣಿಸಿದರು.