ನಟ ಸಲ್ಮಾನ್ ಖಾನ್ ಗೆ ಮತ್ತೆ ಕೊಲೆ ಬೆದರಿಕೆ; ಕಾರನ್ನು ಸ್ಫೋಟಿಸುವುದಾಗಿ ವಾಟ್ಸ್ ಆ್ಯಪ್ ಸಂದೇಶ

ನಟ ಸಲ್ಮಾನ್ ಖಾನ್ (PTI)
ಮುಂಬೈ: ತಮ್ಮ ಬಾಂದ್ರಾದಲ್ಲಿನ ನಿವಾಸದ ಮೇಲೆ ದುಷ್ಕರ್ಮಿಗಳು ನಡೆಸಿದ್ದ ಹಲವು ಸುತ್ತಿನ ಗುಂಡಿನ ದಾಳಿಯ ಘಟನೆಗೆ ನಿಖರವಾಗಿ ಒಂದು ವರ್ಷವಾಗುತ್ತಿರುವಂತೆಯೆ, ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತೊಮ್ಮೆ ಜೀವ ಬೆದರಿಕೆ ಸಂದೇಶವನ್ನು ಸ್ವೀಕರಿಸಿದ್ದಾರೆ. ಈ ಬಾರಿ ವೊರ್ಲಿಯಲ್ಲಿರುವ ಮುಂಬೈ ಸಾರಿಗೆ ಇಲಾಖೆಯ ವಾಟ್ಸ್ ಆ್ಯಪ್ ಸಂಖ್ಯೆಗೆ ರವಾನಿಸಲಾಗಿರುವ ಸಂದೇಶದಲ್ಲಿ, ನಟ ಸಲ್ಮಾನ್ ಖಾನ್ರ ನಿವಾಸಕ್ಕೆ ನುಗ್ಗಿ ಅವರನ್ನು ಹತ್ಯೆಗೈಯ್ಯಲಾಗುವುದು ಹಾಗೂ ಅವರ ಕಾರನ್ನು ಬಾಂಬ್ನಿಂದ ಸ್ಫೋಟಿಸಲಾಗುವುದು ಎಂದು ಬೆದರಿಕೆ ಒಡ್ಡಲಾಗಿದೆ.
ಈ ಘಟನೆಯ ಬೆನ್ನಿಗೇ ಅಪರಿಚಿತ ವ್ಯಕ್ತಿಗಳ ವಿರುದ್ಧ ವೊರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಬೆದರಿಕೆ ಸಂದೇಶದ ಮೂಲ ಹಾಗೂ ನೈಜತೆ ಕುರಿತು ತನಿಖೆ ನಡೆಸುತ್ತಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗುಂಪಿನಿಂದ ಕಳೆದ ಹಲವು ವರ್ಷಗಳಿಂದ ಪ್ರತ್ಯಕ್ಷ ಹಾಗೂ ಪರೋಕ್ಷ ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. 1998ರಲ್ಲಿ ಬಿಷ್ಣೋಯಿ ಸಮುದಾಯದ ಪಾಲಿಗೆ ಧಾರ್ಮಿಕವಾಗಿ ಮಹತ್ವದ್ದಾಗಿರುವ ಕೃಷ್ಣಮೃಗ ಬೇಟೆಯಾಡಿದ ಆರೋಪಕ್ಕೆ ಸಲ್ಮಾನ್ ಖಾನ್ ಗುರಿಯಾದಾಗಿನಿಂದ, ಅವರನ್ನು ಲಾರೆನ್ಸ್ ಬಿಷ್ಣೋಯಿ ಗುಂಪು ಗುರಿಯಾಗಿಸಿಕೊಂಡಿದೆ.
ಕೃಷ್ಣ ಮೃಗವನ್ನು ಬೇಟೆಯಾಡಿದ ಆರೋಪಕ್ಕಾಗಿ ದೇವಾಲಯವೊಂದಕ್ಕೆ ಭೇಟಿ ನೀಡಿ, ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಇಲ್ಲವೆ, 5 ಕೋಟಿ ರೂ. ಮೊತ್ತವನ್ನು ಪಾವತಿಸಬೇಕು ಎಂದು 2024ರಲ್ಲಿ ಲಾರೆನ್ಸ್ ಬಿಷ್ಣೋಯಿ ಗುಂಪು ಮತ್ತೊಮ್ಮೆ ನಟ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಒಡ್ಡಿತ್ತು. ಕಳೆದ ವರ್ಷದ ಅಕ್ಟೋಬರ್ 30ರಂದು 2 ಕೋಟಿ ರೂ. ಸುಲಿಗೆ ಮೊತ್ತ ಪಾವತಿಸುವಂತೆ ಅಪರಿಚಿತ ದುಷ್ಕರ್ಮಿಯೊಬ್ಬ ಅವರಿಗೆ ಬೆದರಿಕೆ ಒಡ್ಡಿದ್ದ.
ಇದಕ್ಕೂ ಮುನ್ನ, 2024ರಲ್ಲಿ ಇಬ್ಬರು ಅಪರಿಚಿತರು ಪನ್ವೇಲ್ನಲ್ಲಿರುವ ನಟ ಸಲ್ಮಾನ್ ಖಾನ್ ಅವರ ತೋಟದ ಮನೆಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದರು. 2023ರಲ್ಲಿ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ನಿಂದ ಜೀವ ಬೆದರಿಕೆ ಇಮೇಲ್ ಅನ್ನು ಸಲ್ಮಾನ್ ಖಾನ್ ಸ್ವೀಕರಿಸಿದ್ದರು. 2022ರಲ್ಲಿ ಅವರ ನಿವಾಸದ ಎದುರಿನ ಮೇಜೊಂದರ ಮೇಲೆ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪತ್ರವೊಂದು ಪತ್ತೆಯಾಗಿತ್ತು.