ಕಾಡುಕುರುಬರ ಪಲ್ಲಟಗಳ ಅನಾವರಣದ ‘ಕಾಕನಕೋಟೆ’
ಕರಿಹೈದನೆಂಬೋರು ಮಾದೇಶ್ವರಗೆ ಶರಣು
ಮಾದೇಶ್ವರಗೆ ಶರಣು, ಮಾದೇಶ್ವರಗೆ ಶರಣು
-ಹೀಗೆ ಶುರುವಾಗುವ ‘ಕಾಕನಕೋಟೆ’ ನಾಟಕದ ಹಾಡು ಗುಣುಗುಣಿಸುವಂತಿದೆ. ಹೀಗೆಯೇ ಮೈಸೂರು ರಂಗಾಯಣದ ವನರಂಗವು ಈಗ ಕುರುಬರ ಹಾಡಿಯಾಗಿದೆ. ಅಂದರೆ ನಾಟಕಕ್ಕೆ ನಿರ್ಮಾಣಗೊಂಡಿದೆ. ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಈ ನಾಟಕ ಚೆನ್ನಾಗಿದೆ. ಕಲಾವಿದರೇ ಹಾಡುಗಳನ್ನು ಹಾಡುತ್ತ, ಸಂಗೀತ ನೀಡುತ್ತಾರೆ. ಸಂಗೀತಕ್ಕೆ ಬಳಸಿದ ಪರಿಕರಗಳೂ ಭಿನ್ನ. ದ್ವಾರಕಾನಾಥ್ ಅವರ ವಿನ್ಯಾಸ ಆಕರ್ಷಕ. ಆದರೆ ವಿದ್ಯಾರ್ಥಿಗಳ ಅಭಿನಯ ಮಾಗಬೇಕಿದೆ. ಸಂಭಾಷಣೆ ತಪ್ಪದಿರಲಿ. ಅಂದರೆ ಕಂಠಪಾಠ ಮಾಡಿ ಒಪ್ಪಿಸದೆ ಅನುಭವಿಸಿ ಅಭಿನಯಿಸುವ ಮೂಲಕ ಪಾತ್ರಗಳಿಗೆ ಇನ್ನಷ್ಟು ಜೀವ ತುಂಬುವ ಅಗತ್ಯವಿದೆ.
1938ರಲ್ಲಿ ಮಾಸ್ತಿ ಅವರು ರಚಿಸಿದ ಈ ನಾಟಕ ಈಗಲೂ ಪ್ರಸ್ತುತವಾಗುತ್ತಿದೆ. ಇದನ್ನು ನಾಟಕವಾಗಿ ನಿರ್ದೇಶಿಸಿದ ರಾಮನಾಥ ಅವರನ್ನು ಅಭಿನಂದಿಸುವೆ.
ಈ ನಾಟಕ ರೂಪುಗೊಂಡ ಬಗೆಯನ್ನು ಮಾಸ್ತಿ ಅವರ ಮೊದಲನೆಯ ಮುದ್ರಣದ ಮುನ್ನುಡಿ ಆಸಕ್ತಿಕರವಾಗಿದೆ. ಅದು ಹೀಗಿದೆ; ‘‘ಕಾಕನಕೋಟೆ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನಲ್ಲಿ ಒಂದು ಸ್ಥಳ. ಈ ಪ್ರಾಂತ ಮಲೆನಾಡು. ಇದರ ಸುತ್ತಿನ ಕಾಡನ್ನು ‘ಕಾಕನಕೋಟೆ ಕಾಡು’ ಎಂದು ಕರೆಯುತ್ತಾರೆ. ಕಾಡುಕುರುಬರೆಂಬ ಜನಕ್ಕೆ ಇದೂ ನೆರೆಯ ಕಾಡುಗಳೂ ವಾಸಸ್ಥಾನಗಳು. ನಾನು ಈ ಪ್ರಾಂತದಲ್ಲಿ ಹತ್ತು ವರ್ಷದ ಹಿಂದೆ ಸುತ್ತಿದಾಗ, ಕಾಕ ಯಾರು, ಕೋಟೆ ಎಲ್ಲಿ, ಹೆಗ್ಗಡೆ ದೇವಣ್ಣ ಯಾರು, ಎಂದು ಮುಂತಾಗಿ ತೋರಿದ ಪ್ರಶ್ನೆಗಳಿಗೆ ಉತ್ತರವಾಗಿ ಒಂದು ಕತೆ ಬರೆಯಬೇಕೆಂದು ಮೂಲ ಪುರುಷನೊಬ್ಬನ ಮಾತನ್ನು ಕೇಳಿ ‘ಕರಿಹೈದ’ ಎಂಬ ಒಂದು ಕಾವ್ಯವನ್ನು ಬರೆಯಬೇಕೆಂದು ತೋರಿತು. ಆಮೇಲೆ ಈ ಜನರ ರೀತಿ ನೀತಿಯನ್ನು ಕುರಿತು ಒಂದು ಲೇಖನ ಬರೆಯುವ ಯೋಚನೆ ಮಾಡಿದೆನು. ಇದೆಲ್ಲ ಕಲೆತು ಕಳೆದ ಫಾಲ್ಗುಣದಲ್ಲಿ ಪ್ರಸ್ತುತ ನಾಟಕವಾಗಿ ಪರಿಣಮಿಸಿತು. ಅದನ್ನು ಪರಿಷ್ಕರಿಸಿ ಈಗ ಪ್ರಕಟಿಸುವುದಾಗಿದೆ.
ನಾಟಕಕಾರನು ಪ್ರಸಿದ್ಧವಾದ ಇತಿವೃತ್ತವನ್ನು ವಸ್ತುವಾಗಿ ತೆಗೆದುಕೊಳ್ಳಬೇಕೆಂದು ನಮ್ಮ ಪೂರ್ವಿಕರ ಸೂತ್ರವೊಂದಿದೆ. ಇದರ ಕತೆ ಹಾಗೆ ಪ್ರಸಿದ್ಧ ಇತಿವೃತ್ತವಲ್ಲದ್ದರಿಂದ ಎರಡು ಮಾತಿನಲ್ಲಿ ಇದರ ಕಲ್ಪನೆ ಏನೆಂದು ತಿಳಿಸಬಹುದು. ಈಗ ಕಾಡುಕುರುಬರೆಂದು ನಮಗೆ ಕಾಣುವ ಜನ ಹಿಂದೆ ಇನ್ನೂ ಹೆಚ್ಚು ಸಂಖ್ಯೆಯದಾಗಿತ್ತೆಂದೂ ಇವರದೊಂದು ಸಂಸ್ಕೃತಿಯಿತ್ತೆಂದೂ ಶ್ರೀಮನ್ಮಹಾರಾಜ ಶ್ರೀ ರಣಧೀರ ಕಂಠೀರವ ನರಸರಾಜರ ಆಳ್ವಿಕೆಯಲ್ಲಿ ಈ ಜನರಿಗೂ ಹೆಗ್ಗಡದೇವನಕೋಟೆಯ ಹೆಗ್ಗಡೆಗೂ ಇವರು ಕೊಡಬೇಕಾದ ಕಪ್ಪದ ವಿಷಯದಲ್ಲಿ ವಿವಾದ ಬಂದಿತೆಂದೂ ಈ ಜನರ ಮುಖಂಡನಾದ ಕಾಚನೆಂಬುವನು ಮೈಸೂರಿನಲ್ಲಿದ್ದಿದ್ದು ರಾಜರನ್ನು ಬಲ್ಲವನಾಗಿದ್ದ ಕಾರಣದಿಂದ ಅವರ ಸಹಾಯವನ್ನು ಬೇಡಿ ತನ್ನ ಜನರನ್ನು ಆ ಕಷ್ಟದಿಂದ ಪಾರು ಮಾಡಿಸಿದನೆಂದೂ ಇಲ್ಲಿ ಕಥಾವಸ್ತು. ಇದನ್ನು ಇತಿಹಾಸದ ಆಧಾರದಿಂದ ಬರೆದಿಲ್ಲ. ಇಲ್ಲಿ ಇತಿಹಾಸದ ವ್ಯಕ್ತಿ ರಣಧೀರ ರಾಜರಲ್ಲದೆ ಮತ್ತೊಬ್ಬ ರಿಲ್ಲ. ಹೀಗೆಂದ ಮಾತ್ರಕ್ಕೆ ಇದನ್ನು ಒಪ್ಪಿಕೊಂಡ ಒಂದು ತಪ್ಪೆಂದಾಗಲಿ ಕೊಚ್ಚಿದ ಜಂಭವೆಂದಾಗಲಿ ಯಾರೂ ಎಣಿಸಬಾರದೆಂದು ನಾನು ಪ್ರಾರ್ಥಿಸುತ್ತೇನೆ’’ ಎನ್ನುವ ಅವರ ಮಾತು ಗಮನಾರ್ಹ.
ಈ ನಾಟಕದಲ್ಲಿ ಕಾಚ ಹೇಳುವ ಮಾತು- ‘‘ಮನಸು ಕಾಯಬೇಕು, ಮನಸು ಬೆರೆಯಬೇಕು. ಮನಸು ಬೆರೆತ ಮೇಲೆ ಕಾಡಿಗೆ ಹೋಗಬೇಕು. ಕಾಡಿಗೆ ಹೋಗಿದ್ದು ಬೂಡಿಗೆ ಬರಬೇಕು. ಬೂಡಿಗೆ ಬಂದ ಮೇಲೆ ಜೊತೆಯಾಗಿ ನಡೀಬೇಕು. ಒಬ್ಬರು ಮೆಚ್ಚಿದೀವಿ ಅಂದರೆ ಸಾಲದು ಇಬ್ಬರೂ ಮೆಚ್ಚಬೇಕು. ಇಬ್ಬರೂ ಮೆಚ್ಚಿದ ಮೇಲೆ ಮೈ ಕೂಡಬೇಕು’’ ಹೀಗೆ ಕಾಡುಕುರುಬರ ಜೀವನ ವಿಧಾನ, ಅವರ ಸಂಸ್ಕೃತಿಯ ಪಲ್ಲಟ, ನಗರೀಕರಣ ಪ್ರವೇಶವನ್ನು ನಾಟಕ ಕಟ್ಟಿಕೊಡುತ್ತದೆ. ಈ ಸಂಬಂಧ ನಾಟಕದ ಕೊನೆಗೆ ಕಾಚ ಹೇಳುವ ಮಾತು- ‘‘ಹಿರಿಯರು ಅಂದಿದಾರೆ ಕಾಡು ನಾಡಾಗಬೇಡ ನಾಡು ಬಯಲಾಗಬೇಡ ಅಂತ. ಕಾಡ ದೇವರು ಒಲಿದಿರೋ ಮಂದಿ ಊರ ಕಟ್ಟತೀವಿ ಅನಬಾರದಂತೆ’’ ಎನ್ನುವುದು ಗಮನಿಸಬೇಕಾದುದು. ಇದಕ್ಕೆ ಪೂರಕವಾಗಿ ಗೌಡ ಹೇಳುವ ಮಾತು- ‘‘ಈಗ ನಮ್ಮ ಮಕ್ಕಳು ಕಾಡಾಗೆ ನಡೀತಿರಲೀಕೆ ಹರಿದಾರೀಲಿರೋ ಆನೆ ಕಂಪು ಮೂಗಿಗೆ ತಿಳೀತದೆ. ತರಗಿನೊಳಗೆ ತೆಕ್ಕೆ ಬಿದ್ದಿರೋ ಸರಪಾ (ಸರ್ಪ) ಕಣ್ಣಿಗೆ ಕಾಣುತದೆ. ಜಿಂಕೆ ಹಿಂದೆ ನಡಿಯೋ ಹುಲಿ ಹೆಜ್ಜೆ ಸಪ್ಪಳ ಕೊಂಬಿನ ದೂರದಲ್ಲಿ ಕಿವಿಗೆ ಕೇಳತದೆ. ಜೇನ ಹುಡುಕುತಾ ಹೋಗತಿದ್ರೆ ನೊಣ ಬಂದು ದಾರಿ ತೋರತದೆ’’ ಎನ್ನುವುದು ಎಷ್ಟೊಂದು ಮಾರ್ಮಿಕ. ಇದಕ್ಕೆ ಕಾಚ ‘‘ಗೋಡೇಲಿ ಮಾಡಿದ ಕೋಟೆ ಏಸು ದಿನ ತಡದಾತು ನನ್ನೊಡೆಯ?’’ ಎನ್ನುವುದು ಗಮನಾರ್ಹ. ಇದರೊಂದಿಗೆ ಹೆಗ್ಗಡೆ ದೇವಣ್ಣನವರ ಮಗ ಚಿಕ್ಕಯ್ಯ ಹಾಗೂ ಕಾಚನ ಮಗಳು ಮೊಲ್ಲೆ ಅವರ ಪ್ರೇಮ ಅರಳುವ ದೃಶ್ಯಗಳು ಆಕರ್ಷಕ. ಇವರಿಬ್ಬರು ಓಡಿಹೋಗಬೇಕೆಂದುಕೊಂಡಾಗ ರಣಧೀರರ ಪ್ರವೇಶವಾಗಿ ಆಮೇಲೆ ಹೆಗ್ಗಡೆ ಹಾಗೂ ಕಾಚನ ಎದುರೇ ಅವರಿಬ್ಬರ ಪ್ರೇಮಾಂಕುರ ಸಂಗತಿಯನ್ನು ತಿಳಿಸುತ್ತಾರೆ. ಹೀಗೆ ಕಾಡಿನ ಕುರುಬರು ನಾಡಿನ ಕುರುಬರೊಟ್ಟಿಗೆ ಒಂದಾಗುತ್ತಾರೆ. ಇದಕ್ಕೂ ಮೊದಲು ಕಾಡುಕುರುಬರ ಮುಖಂಡನಾದ ಕಾಚ, ಹುಡುಗನಾಗಿದ್ದಾಗಲೇ ಮೈಸೂರಿಗೆ ಬಂದಿದ್ದು, ಪ್ರಾಯದಲ್ಲಿ ಕೆಲವು ವರ್ಷ ಮರಳಿ ಕಾಡಿಗೆ ಹೋಗಿರುತ್ತಾನೆ. ಮತ್ತೆ ಮೈಸೂರಿಗೆ ಬಂದು ಮಧ್ಯವಯಸ್ಸಿನಲ್ಲಿ ಮತ್ತೆ ತನ್ನ ಜನರನ್ನು ಸೇರಿಕೊಂಡು ಬುದ್ಧಿವಂತ, ದೇವರಗುಡ್ಡ ಆಗಿರುತ್ತಾನೆ. ಇದರೊಂದಿಗೆ ಮಾಸ್ತಿಯವರು ನಾಟಕಕ್ಕೆ ಬಳಸಿದ ಕಾಡುಕುರುಬರ ಭಾಷೆ ಗಮನ ಸೆಳೆಯುತ್ತದೆ. ಹಾಗೆಯೇ ಮೈಸೂರು ಮಹಾರಾಜರು ಪಾಳೆಗಾರಿಕೆ ಬಗ್ಗು ಬಡಿದುದರ ಕುರಿತು ನಾಟಕ ಹೇಳುತ್ತದೆ.
ಇನ್ನು ಈ ನಾಟಕದ ಕಲಾವಿದರು; ಪ್ರಜ್ವಲ್ ಭಾರದ್ವಾಜ್, ಎಸ್.ದರ್ಶನ್, ಟಿ.ರಾಮಕುಮಾರ್, ಎಂ.ಪುನೀತ್‌ಕುಮಾರ್, ಕೆ.ಸುಬ್ರಹ್ಮಣ್ಯ, ನಿಶಾಂತ ಪಾಟೀಲ, ಪ್ರಮೋದ್, ಕೀರ್ತನ್ ಸೋಮಣ್ಣ, ಚರಿತ್ ಗುಜರಾನ್, ಏಂಜಲ್, ಚೈತ್ರಾ ಕೋಟ್ಯಾನ್, ಶ್ರುತಿ, ಕಾವೇರಿ, ಪಿ.ಯಶಸ್, ಎಂ.ಬಾಷಾ ಸಾಬ್, ಆನಂದ ಸುಲದಾಳ, ಶ್ರೀವತ್ಸ ಹಾಗೂ ಸಿ.ಎಂ.ಮಾನಸ್.
ಇಂದಿಗೂ ಕನ್ನಡದ ಮಹತ್ವದ ಈ ನಾಟಕವನ್ನು ಬೆಂಗಳೂರಿನ ನಟರಂಗ ತಂಡವು 1972ರ ಮೇ 22ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೊದಲು ಪ್ರದರ್ಶಿಸಿತು. ಈ ನಾಟಕದ ನಿರ್ದೇಶಕರು ಸಿ.ಆರ್.ಸಿಂಹ. ನಟರಾದ ಶ್ರೀನಾಥ್, ಲೋಕೇಶ್, ಗಿರಿಜಾ ಲೋಕೇಶ್, ಲೋಕನಾಥ್, ಎಂ.ಪಿ.ವೆಂಕಟರಾವ್ ಅಭಿನಯಿಸಿದ್ದರು. ಸಿ.ಅಶ್ವಥ್ ಅವರ ಸಂಗೀತ, ಕಪ್ಪಣ್ಣ ಅವರ ಬೆಳಕು ಹಾಗೂ ಸಂಘಟನೆಯಾಗಿತ್ತು. ರಾಜ್ಯವಲ್ಲದೆ ಇತರ ರಾಜ್ಯಗಳಲ್ಲೂ ಒಟ್ಟು 120 ಪ್ರದರ್ಶನಗಳನ್ನು ಈ ನಾಟಕ ಕಂಡಿತು. ಈ ನಾಟಕದಲ್ಲಿ ಪಾತ್ರ ನಿರ್ವಹಿಸಿದ ಕಲಾವಿದರೇ ‘ಕಾಕನಕೋಟೆ’ ಹೆಸರಲ್ಲಿ ಸಿನೆಮಾದಲ್ಲಿ ಅಭಿನಯಿಸಿದ್ದರು. ಮಾಸ್ತಿ ಹಾಗೂ ಗಿರೀಶ್ ಕಾರ್ನಾಡ್ ಅವರ ಚಿತ್ರಕಥೆ, ಸಿ.ಅಶ್ವಥ್ ಅವರ ಸಂಗೀತವಿತ್ತು. ಸಿ.ಅರ್.ಸಿಂಹ ಅವರದೇ ನಿರ್ದೇಶನದ ಸಿನೆಮಾ 1977ರಲ್ಲಿ ತೆರೆ ಕಂಡಿತು.
ಅಂದ ಹಾಗೆ, ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ಮುಖ್ಯಸ್ಥರೂ ಆದ ರಂಗನಾಥ ಅವರಿಗೆ ಬಹಳ ಇಷ್ಟವಾದ ನಾಟಕವಿದು. ಹೀಗಾಗಿ ಐದಾರು ವರ್ಷಗಳಿಂದ ಈ ನಾಟಕ ನಿರ್ದೇಶಿಸಲು ಹಂಬಲಿಸುತ್ತಿದ್ದರು. ಅದೀಗ ನೆರವೇರಿದೆ. ಮೈಸೂರಿನ ರಂಗಾಯಣದ ವನರಂಗದಲ್ಲಿ ಇದೇ ಜನವರಿ 7, 14, 20, 27 ಹಾಗೂ 28ರಂದು ಸಂಜೆ 6:30ಕ್ಕೆ ಈ ನಾಟಕದ ಮರುಪ್ರದರ್ಶನಗಳಿವೆ.