ದೂರುದಾರ ಪೂರ್ಣೇಶ್ ಮೋದಿಯ ಮೂಲ ಉಪ ನಾಮ ಮೋದಿ ಅಲ್ಲ: ಸುಪ್ರೀಂಕೋರ್ಟ್ ನಲ್ಲಿ ರಾಹುಲ್ ಪರ ವಕೀಲರು ನಡೆಸಿದ ವಾದ ಏನು?
ಹೊಸದಿಲ್ಲಿ: ಮಾಜಿ ಸಂಸದರ ವಿರುದ್ಧದ ಮಾನನಷ್ಟ ಮೊಕದ್ದಮೆಯ ದೂರುದಾರ ಪೂರ್ಣೇಶ್ ಮೋದಿ ಅವರ ಮೂಲ ಉಪನಾಮ ಮೋದಿ ಅಲ್ಲ. ಅವರು (ಪೂರ್ಣೇಶ್) ಮೋದ್ ವನಿಕಾ ಸಮಾಜಕ್ಕೆ ಸೇರಿದವರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರ ವಕೀಲರು ಶುಕ್ರವಾರ ಸುಪ್ರೀಂ ಕೋರ್ಟ್ನಲ್ಲಿ ವಾದಿಸಿದ್ದಾರೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಪಿ.ಎಸ್. ನರಸಿಂಹ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕನ ಶಿಕ್ಷೆಯನ್ನು ಎತ್ತಿಹಿಡಿದ ಗುಜರಾತ್ ಹೈಕೋರ್ಟ್ ತೀರ್ಪಿನ ವಿರುದ್ಧ ರಾಹುಲ್ ಗಾಂಧಿ ಸಲ್ಲಿಸಿದ ಮನವಿಯನ್ನು ಆಲಿಸಿ, ರಾಹುಲ್ ಗಾಂಧಿ ಅವರಿಗೆ ನೀಡಲಾಗಿರುವ ಶಿಕ್ಷೆಗೆ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಮಾನನಷ್ಟ ಪ್ರಕರಣದಲ್ಲಿ ಗಾಂಧಿಯವರ ಶಿಕ್ಷೆಯಿಂದಾಗಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಯಿತು ಹಾಗೂ ಈ ತೀರ್ಪನ್ನು ಪ್ರಶ್ನಿಸುವ ಈ ವಿಚಾರಣೆಯು ಮುಂಬರುವ 2024 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವರ ಅರ್ಹತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸಂಸತ್ತಿಗೆ ಹಾಜರಾಗಲು ಹಾಗೂ ಚುನಾವಣೆಗೆ ಸ್ಪರ್ಧಿಸಲು ರಾಹುಲ್ ಗಾಂಧಿ ಅವರನ್ನು ಖುಲಾಸೆಗೊಳಿಸಲು ಇದು ಕೊನೆಯ ಅವಕಾಶವಾಗಿದೆ ಎಂದು ಕಾಂಗ್ರೆಸ್ ನಾಯಕನ ಪರ ವಕೀಲರು ಇಂದು ಸುಪ್ರೀಂ ಕೋರ್ಟ್ ನಲ್ಲಿ 'ಮೋದಿ ಉಪ ನಾಮ ಕುರಿತ ಹೇಳಿಕೆಗೆ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ವಾದಿಸಿದರು.
ಹೈಕೋರ್ಟ್ ತನ್ನ ತೀರ್ಪನ್ನು 66 ದಿನಗಳವರೆಗೆ ಕಾಯ್ದಿರಿಸಿತ್ತು. ಪ್ರಕರಣದಲ್ಲಿ ಶಿಕ್ಷೆ ಎದುರಿಸುತ್ತಿರುವ ಕಾರಣ ರಾಹುಲ್ ಗಾಂಧಿ ಅವರು ಈಗಾಗಲೇ ಎರಡು ಸಂಸತ್ತು ಅಧಿವೇಶನಗಳನ್ನು ಕಳೆದುಕೊಂಡಿದ್ದಾರೆ ಎಂದು ಅವರ ವಕೀಲರು ಹೇಳಿದರು.
ರಾಹುಲ್ ಗಾಂಧಿಯನ್ನು ಪ್ರತಿನಿಧಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ವಿಚಾರಣೆ ಪೂರ್ಣಗೊಂಡಿದೆ ಹಾಗೂ ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಲಾಗಿದೆ, ಆದರೂ ಇದುವರೆಗೆ ಯಾವುದೇ ಪುರಾವೆಗಳಿಲ್ಲ. ದೂರುದಾರ ಪೂರ್ಣೇಶ್ ಮೋದಿ ಅವರ ಮೂಲ ಉಪನಾಮ ಮೋದಿ ಅಲ್ಲ, ಅವರು ಅದನ್ನು ಬದಲಾಯಿಸಿದ್ದಾರೆ ಎಂದು ವಾದಿಸಿದರು
ಮೊದಲನೆಯದಾಗಿ ಪೂರ್ಣೇಶ್ ಮೋದಿಯವರ (ದೂರುದಾರರ) ಮೂಲ ಉಪನಾಮ ಮೋದಿ ಅಲ್ಲ ... ಅವರು ತಮ್ಮ ಉಪನಾಮವನ್ನು ಬದಲಾಯಿಸಿದ್ದಾರೆ ... ರಾಹುಲ್ ಗಾಂಧಿಯವರು ತಮ್ಮ ಭಾಷಣದ ಸಮಯದಲ್ಲಿ ಹೆಸರಿಸಿದ ವ್ಯಕ್ತಿಗಳಲ್ಲಿ ಒಬ್ಬರೂ ಕೂಡ ಮೊಕದ್ದಮೆ ಹೂಡಲಿಲ್ಲ. ಕುತೂಹಲಕಾರಿಯೆಂದರೆ ನೊಂದಿರುವ 13 ಕೋಟಿಯ ಈ ‘ಸಣ್ಣ’ ಸಮುದಾಯದಲ್ಲಿ ಮೊಕದ್ದಮೆ ಹೂಡುವವರು ಮಾತ್ರ ಬಿಜೆಪಿ ಕಚೇರಿಯಲ್ಲಿರುವವರು ”ಎಂದು ರಾಹುಲ್ ಗಾಂಧಿ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಸುಪ್ರೀಂಕೋರ್ಟ್ ಗೆ ತಿಳಿಸಿರುವುದಾಗಿ Live Law ಉಲ್ಲೇಖಿಸಿದೆ.
►ಈ ಪ್ರಕರಣದಲ್ಲಿ ಕೆಳಗಿನ ಹಂತದ ನ್ಯಾಯಾಲಯ ರಾಹುಲ್ ಅವರನ್ನು ಅಪರಾಧಿ ಎಂದು ಘೋಷಿಸಿದ ಆದೇಶಕ್ಕೆ ತಡೆ ಹೋರಲು ಇದು ಅಪರೂಪದ ಪ್ರಕರಣವಾಗಿರಬೇಕು ಎಂದು ಜಸ್ಟಿಸ್ ಗವಾಯಿ ಹೇಳಿದಾಗ ಉತ್ತರಿಸಿದ ಸಿಂಘ್ವಿ ದೂರುದಾರ ಪೂರ್ಣೇಶ್ ಮೋದಿಯ ಮೂಲ ಉಪನಾಮೆ ಮೋದಿ ಅಲ್ಲ, ಆತ ಅದನ್ನು ಬದಲಾಯಿಸಿದ್ದರು ಎಂದು ಹೇಳಿದರು.
► “ದೂರುದಾರ ಪೂರ್ಣೇಶ್ ಮೋದಿ ಸ್ವತಃ ತಮ್ಮ ಮೂಲ ಉಪನಾಮೆ ಮೋದಿ ಅಲ್ಲ, ತಾವು ಮೋಧ್ ವನಿಕಾ ಸಮಾಜಕ್ಕೆ ಸೇರಿದವರೆಂದು ಹೇಳಿದ್ದರು,” ಎಂದು ಸಿಂಘ್ವಿ ಹೇಳಿದರಲ್ಲದೆ ಭಾಷಣದಲ್ಲಿ ರಾಹುಲ್ ಉಲ್ಲೇಖಿಸಿದ ಯಾವುದೇ ವ್ಯಕ್ತಿ ದೂರು ದಾಖಲಿಸಿಲ್ಲ ಎಂದರು.
► ಇಂತಹ ಪ್ರಕರಣದಲ್ಲಿ ಎರಡು ವರ್ಷದ ಜೈಲು ಶಿಕ್ಷೆ ವಿಧಿಸಿದ ಒಂದೇ ಒಂದು ಹಿಂದಿನ ಪ್ರಕರಣವಿಲ್ಲ ಎಂದೂ ಸಿಂಘ್ವಿ ಹೇಳಿದರು.
► ರಾಹುಲ್ ಗಾಂಧಿ ಅವರು ಎಪ್ರಿಲ್ 2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಪರೋಕ್ಷವಾಗಿ ಟೀಕಿಸಿ,” ಅದು ಹೇಗೆ ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮೆಯಿದೆ?,” ಎಂದು ಪ್ರಶ್ನಿಸಿದ್ದರು.
► ತಮ್ಮನ್ನು ದೋಷಿ ಎಂದು ಘೋಷಿಸಿದ್ದ ಆದೇಶವನ್ನು ಪ್ರಶ್ನಿಸಿ ರಾಹಲ್ ಗಾಂಧಿ ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೂ ಅದಿನ್ನೂ ಬಾಕಿಯಿದೆ.
► 2019ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ತಮ್ಮ ವಿರುದ್ಧ ಈ ಮಾನನಷ್ಟ ಪ್ರಕರಣದಲ್ಲಿ ಹೊರಡಿಸಿದ ಆದೇಶವು ತಮ್ಮನ್ನು ಸಂಸದನ ಸ್ಥಾನದಿಂದ ಅನರ್ಹಗೊಳಿಸುವಂತೆ ಮಾಡುವ ರೀತಿಯ ಶಿಕ್ಷೆ ವಿಧಿಸಿತ್ತು. ವಿಚಾರಣಾ ನ್ಯಾಯಾಲಯವು ತಮ್ಮನ್ನು ಕಠಿಣವಾಗಿ ನಡೆಸಿಕೊಂಡಿತ್ತು ಎಂದು ರಾಹುಲ್ ದೂರಿದ್ದರು.