COP-28: ಧರೆಗೆ ದ್ರೋಹ ಬಗೆದ ಕಾರ್ಪೊರೇಟ್ ಕುಲದ ಮತ್ತೊಂದು ನಾಟಕ
Photo: twitter.com/XRNottm
ಜಾಗತಿಕ ತಾಪಮಾನವನ್ನು ತುರ್ತಾಗಿ ಕಡಿಮೆ ಮಾಡದಿದ್ದರೆ ಮಾನವಕುಲವನ್ನೂ ಒಳಗೊಂಡಂತೆ ಭೂಮಿಯ ಮೇಲಿನ ಸಕಲ ಜೀವರಾಶಿಗಳು ಸರ್ವಾನಾಶವಾಗುವ ಹವಾಮಾನ ತುರ್ತುಸ್ಥಿತಿಯನ್ನು ಇಂದು ಜಗತ್ತು ಎದುರಿಸುತ್ತಿದೆ. ಆದರೆ ಅದನ್ನು ತಡೆದು ಭೂಮಿಯನ್ನು ಉಳಿಸುವ ಜವಾಬ್ದಾರಿ ಮತ್ತು ಉತ್ತರದಾಯಿತ್ವವನ್ನು ಹೊಂದಿರುವ ಜಗತ್ತಿನ 200 ದೇಶಗಳ ಸರಕಾರಗಳು 28ನೇ ಬಾರಿ ದುಬೈಯಲ್ಲಿ 2023 ನವಂಬರ್ 30-ಡಿಸೆಂಬರ್ 13ರ ತನಕ COP ಸಮ್ಮೇಳನ ನಡೆಸಿದ್ದರೂ (COP-Conference Of Parties- ಸಮಭಾಗಿ ದೇಶಗಳ ಸಮ್ಮೇಳನ) ಮತ್ತೊಮ್ಮೆ ಭೂಮಿತಾಯಿಗೆ ಮತ್ತು ಮನುಷ್ಯರನ್ನೂ ಒಳಗೊಂಡಂತೆ ಭೂಮಿಯ ಮೇಲಿನ ಸಕಲ ಚರಾಚರ ಜೀವಿಗಳಿಗೆ ದ್ರೋಹ ಬಗೆದಿವೆ.
ಜಾಗತಿಕ ಬಂಡವಾಳಶಾಹಿ ವ್ಯವಸ್ಥೆ ತನ್ನ ಮುಗಿಯದ ಲಾಭದ ಲಾಲಸೆಯಿಂದ ಭೂಮಿಗೆ ಬೆಂಕಿ ಹಚ್ಚಿದೆ. ಬಂಡವಾಳಶಾಹಿ ವ್ಯವಸ್ಥೆಯ ಲಾಭವನ್ನು ಹೆಚ್ಚಿಸಲು ಬೇಕಾದ ಉತ್ಪಾದಕ ಶಕ್ತಿಯನ್ನು ಒದಗಿಸುವ ಇಂಧನ ಮೂಲಗಳಾದ ಪೆಟ್ರೋಲಿಯಂ ಉತ್ಪನ್ನಗಳು, ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲುಗಳು ವಾತಾವರಣಕ್ಕೆ ಹೊರಬಿಡುವ ಕಾರ್ಬನ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಮಿಥೇನ್, ನೈಟ್ರಸ್ ಆಕ್ಸೈಡ್ ಇತ್ಯಾದಿಗಳು ಅದರಲ್ಲೂ ಮುಖ್ಯವಾಗಿ ಕಾರ್ಬನ್ ಡೈಆಕ್ಸೈಡ್ ಅನಿಲವು ವಾತಾವರಣದಲ್ಲಿ ಹೆಚ್ಚುತ್ತಾ ಭೂಮಿಯ ತಾಪಮಾನವನ್ನು ಹೆಚ್ಚಿಸುತ್ತಿದೆ. ಬಂಡವಾಳಶಾಹಿ ವ್ಯವಸ್ಥೆಯ ಲಾಭದ ಲೋಭ ಹೆಚ್ಚಿದಷ್ಟೂ ಕಾರ್ಬನ್ ಮಾಲಿನ್ಯ ಹೆಚ್ಚುತ್ತಿದೆ. ಇದರಿಂದ ಜಾಗತಿಕ ತಾಪಮಾನ ಹೆಚ್ಚುತ್ತಾ ಇಂದು ಜಗತ್ತು ಅಳಿವಿನ ಅಂಚಿಗೆ ಬಂದು ನಿಂತಿದೆ. ಹೀಗಾಗಿ ಜಗತ್ತನ್ನು ಅಪಾಯದ ಅಂಚಿನಿಂದ ಉಳಿಸುವ ಪ್ರಧಾನ ಜವಾಬ್ದಾರಿ ಬಂಡವಾಳಶಾಹಿ ದೇಶಗಳ ಮತ್ತು ಜಗತ್ತಿನ ಎಲ್ಲಾ ಬಂಡವಾಳಿಗರ ಹಾಗೂ ಅದರ ಎಲ್ಲಾ ಲಾನುಭವಿಗಳ ಜವಾಬ್ದಾರಿಯಾಗಿತ್ತು. ಅದಕ್ಕೆಂದೇ 1995ರಿಂದ ಪ್ರತಿವರ್ಷ ‘COP ಸಮಾವೇಶ’ಗಳ ನಾಟಕ ನಡೆಸುತ್ತಾ ಬರಲಾಗಿದೆ. ಈ ವರ್ಷ ನಡೆದದ್ದು ಅದರ ೨೮ನೇ ಸಮ್ಮೇಳನ. ಆದರೆ ಎಲ್ಲಾ COP ಸಮ್ಮೇಳನಗಳಂತೆ ಈ COP-28 ಕೂಡ ಶ್ರೀಮಂತ ದೇಶಗಳ ಸ್ವಾರ್ಥ, ಲಾಭಕೋರತನ ಮತ್ತು ಕುತಂತ್ರಗಳಿಂದಾಗಿ ವಿಫಲಗೊಂಡಿದೆ. ಹಾಗೆ ನೋಡಿದರೆ ಭೂತಾಯಿಗೆ ಹಚ್ಚಿರುವ ಬೆಂಕಿಯಲ್ಲಿ ಶೇ.೮೦ರಷ್ಟು ಪಾಲು ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಜಪಾನ್ನಂತಹ ಶ್ರೀಮಂತ ದೇಶಗಳದ್ದೇ.
ಬಂಡವಾಳಶಾಹಿ ದೇಶಗಳು ಮತ್ತು ಕಾರ್ಪೊರೇಟ್ ಬಂಡವಾಳಶಾಹಿಗಳು ಧರೆಗೆ ಮತ್ತು ಇಡೀ ಜೀವ ಸಂಕುಲಕ್ಕೆ ಬಗೆಯುತ್ತಿರುವ ದ್ರೋಹದ ಸ್ವರೂಪವನ್ನು ಅರ್ಥಮಾಡಿ ಕೊಳ್ಳಬೇಕೆಂದರೆ ಭೂಮಿಗೆ ಎದುರಾಗಿರುವ ಕ್ಲೈಮೆಟ್ ಎಮರ್ಜೆನ್ಸಿಯನ್ನು ಮೊದಲು ಅರ್ಥಮಾಡಿಕೊಳ್ಳಬೇಕು.
ಜೀವಾನಿಲ ಇಂಗಾಲವನ್ನು ಜೀವಕಂಟಕ ಮಾಡಿದ್ದು ಯಾರು?
ನಭೋಮಂಡಲದಲ್ಲಿ ಕೋಟ್ಯಂತರ ಆಕಾಶಕಾಯಗಳಿದ್ದರೂ ಭೂಮಿಯಲ್ಲಿ ಮಾತ್ರ ಜೀವಸೃಷ್ಟಿಯಾಗಲು ಕೆಲವು ನಿರ್ದಿಷ್ಟ ಕಾರಣಗಳಿವೆ. ಭೂಮಿಯನ್ನು ಬಿಟ್ಟಂತೆ ಉಳಿದ ಅವಕಾಶಕಾಯಗಳೊಳಗೆ ಇರುವ ತಾಪಮಾನ ಒಂದೋ ಅತಿ ಕಡಿಮೆ (-40 ಡಿಗ್ರಿ ಸೆಂಟಿಗ್ರೇಡ್ಗಿಂತಲೂ ಕಡಿಮೆ) ಅಥವಾ ಅತಿಹೆಚ್ಚು (300 ಡಿಗ್ರಿಗಳ ಆಸುಪಾಸು). ಈ ಎರಡು ಸಂದರ್ಭಗಳಲ್ಲೂ ಜೀವ ಸೃಷ್ಟಿಯಾಗಲು ಸಾಧ್ಯವೇ ಇಲ್ಲ. ಮೊದಲು ಭೂಮಿಯ ಮೇಲ್ಮೈ ತಾಪಮಾನ ಸಹ -20ರಷ್ಟಿತ್ತು. ಆಗ ಭೂಗೋಳದಲ್ಲಿ ಶೇ.೭೫ರಷ್ಟು ಸಾರಜನಕ ಮತ್ತು ಶೇ.20ರಷ್ಟು ಆಮ್ಲಜನಕವಿತ್ತು. ಆಮ್ಲಜನಕ ಜೀವವಾಯುವಾದರೂ ಜೀವ ಸೃಷ್ಟಿಗೆ ಬೇಕಾದಷ್ಟು ತಾಪಮಾನ ಆಗಿನ್ನೂ ಭೂಮಿಯ ಮೇಲ್ಮೈನಲ್ಲಿರಲಿಲ್ಲ. ಆದರೆ ಭೂಮಿಯ ವಾತಾವರಣದಲ್ಲಿ ಈ ಎರಡು ಅನಿಲಗಳ ಜೊತೆಜೊತೆಗೆ ಕಾರ್ಬನ್ ಡೈಆಕ್ಸೈಡ್, ಮಿಥೇನ್ನಂತಹ ಅನಿಲಗಳೂ ಇದ್ದವು. ಈ ಅನಿಲಗಳು ಸೂರ್ಯನ ಬೆಳಕಿನ ವಿಕಿರಣದ ಮೂಲಕ ಭೂಪದರವನ್ನು ಪ್ರವೇಶಿಸುವ ಶಾಖವನ್ನು ಹೀರಿಕೊಳ್ಳುತ್ತಿದ್ದವು ಮತ್ತು ಅದನ್ನು ಭೂಮಂಡಲದ ವಾತಾವರಣಕ್ಕೆ ಮರುಹಾಯಿಸಿದವು. ಇದರಿಂದ ಭೂಮಿಯ ಮೇಲ್ಮೈ ತಾಪಮಾನ ನಿಧಾನವಾಗಿ -20ರಿಂದ 10 ಡಿಗ್ರಿಗೆ ತಲುಪಿತು. ಈ ಸಂದರ್ಭದಲ್ಲಿ ಜೀವವಾಯುವಿನ ಸಹಾಯದೊಂದಿಗೆ ಈ ಭೂಗ್ರಹದಲ್ಲಿ ಜೀವಸೃಷ್ಟಿಯಾಯಿತು.
ಈ ಪರಿಸ್ಥಿತಿಯೇ ಹೆಚ್ಚೂಕಡಿಮೆ ಲಕ್ಷಾಂತರ ವರ್ಷಗಳ ಕಾಲ ಉಳಿದುಕೊಂಡು ಬಂದು ಭೂಗ್ರಹದಲ್ಲಿನ ಜೀವವಿಕಾಸಕ್ಕೆ ಹಾಗೂ ಕ್ರಮೇಣ ಮನುಷ್ಯ ಜೀವಿಯ ಸೃಷ್ಟಿಗೂ ಕಾರಣವಾಯಿತು. ಮನುಷ್ಯ ಸಮಾಜ ಹೊಟ್ಟೆ ಪಾಡಿಗೆ ಮತ್ತು ತನ್ನ ಅತ್ಯಗತ್ಯಗಳಿಗೆ ಬೇಕಾದಂತೆ ಪ್ರಕೃತಿಯಲ್ಲಿನ ಸಂಪನ್ಮೂಲಗಳ ಬಳಕೆ ಮಾಡುತ್ತಾ ನಾಗರಿಕತೆಯಲ್ಲಿ ದಾಪುಗಾಲಿಡುತ್ತಿದ್ದಾಗಲೂ ಭೂತಾಯಿಗೆ ಮುನಿಸೇನೂ ಬಂದಿರಲಿಲ್ಲ.
ಆದರೆ ಕೈಗಾರಿಕಾ ಕ್ರಾಂತಿ ಸಂಭವಿಸಿ ಮನುಷ್ಯ ಸಮಾಜದಲ್ಲಿ ಲಾಭದ ದುರಾಸೆಗೆ ಇತರರನ್ನು ಮತ್ತು ಪ್ರಕೃತಿಯನ್ನೂ ಶೋಷಿಸುವ ಬಂಡವಾಳ ಶಾಹಿ ವರ್ಗವೊಂದು ಸೃಷ್ಟಿಯಾಯಿತು. ಈ ಬಂಡವಾಳಶಾಹಿ ತನ್ನ ದೇಶದ ಮಿತಿಯಲ್ಲಿ ಮಾತ್ರವಲ್ಲದೆ ಪ್ರಪಂಚದೆಲ್ಲೆಡೆ ಎಲ್ಲೆಲ್ಲಿ ಸಂಪನ್ಮೂಲಗಳಿವೆಯೋ ಅಲ್ಲೆಲ್ಲಾ ಲೂಟಿ ಮಾಡಲು ಪ್ರಾರಂಭಿಸಿತು. ಅದರಲ್ಲೂ ತನ್ನ ಕೈಗಾರಿಕೆ ಗಳಿಗಾಗಿ ಇಂಧನಮೂಲವಾಗಿ ಭೂಗರ್ಭದ ಪೆಟ್ರೋಲಿಯಂ ಉತ್ಪನ್ನಗಳನ್ನು ಬೇಕಾಬಿಟ್ಟಿಯಾಗಿ ಬಳಸಲು ಪ್ರಾರಂಭಿಸಿತು.
ಆದರೆ ಈ ಪೆಟ್ರೋಲಿಯಂನಂತಹ ಇಂಧನಗಳನ್ನು ಉರಿಸಿದಾಗ ಅಪಾರ ಪ್ರಮಾಣದಲ್ಲಿ ಕಾರ್ಬನ್ ಡೈಆಕ್ಸೈಡ್ನಂತಹ ಅನಿಲಗಳು ಉತ್ಪಾದನೆಯಾಗುತ್ತವೆ. ಇದು ವಾತಾವರಣದಲ್ಲಿ ಹೆಚ್ಚೆಚ್ಚು ಶೇಖರವಾಗುತ್ತಿದ್ದಂತೆ ಸೂರ್ಯನ ಶಾಖವನ್ನು ಹೆಚ್ಚೆಚ್ಚು ಹೀರಿಕೊಳ್ಳುವ ಅನಿಲವೂ ಸೇರಿ ಕೊಳ್ಳುತ್ತದೆ. ಇಂಥ ಅನಿಲಗಳನ್ನೇ ‘ಹಸಿರು ಮನೆ ಅನಿಲ’ವೆಂದು ಕರೆಯುತ್ತಾರೆ. ಅವು ಸೂರ್ಯನ ಶಾಖವನ್ನು ಹೀರಿ ಮರಳಿ ವಾತಾವರಣಕ್ಕೆ ಬಿಡುವುದನ್ನು ‘ಹಸಿರು ಮನೆ ಪರಿಣಾಮ’ವೆಂದು ಕರೆಯುತ್ತಾರೆ. ಹೀಗಾಗಿ ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್ನಂತಹ ಅನಿಲಗಳು ಹೆಚ್ಚಾಗುತ್ತಿದ್ದಂತೆ ಭೂಮಿಯ ತಾಪಮಾನವೂ ಹೆಚ್ಚಾಗಲು ಪ್ರಾರಂಭವಾಯಿತು.
ಮೊದಲು ಇದು ಗೋಚರವಾದದ್ದು ಧ್ರುವ ಪ್ರದೇಶಗಳಲ್ಲಿ ದಿನೇದಿನೇ ಹಿಮಗಡ್ಡೆಗಳ ಪ್ರಮಾಣ ಕುಸಿಯುವುದರ ಮೂಲಕ. ೧೮೦೦ರಿಂದ ಭೂಮಿಯ ತಾಪಮಾನ ಮತ್ತು ಸಾಗರದ ಮೇಲ್ಮೈ ತಾಪಮಾನವನ್ನು ವೈಜ್ಞಾನಿಕವಾಗಿ ಅಂದಾಜು ಮಾಡುವುದು ಸಾಧ್ಯವಾಗಿತ್ತು. ಇದರಲ್ಲೂ ಹೆಚ್ಚಳವಾಗಿರುವುದು ಕಂಡುಬರತೊಡಗಿತು.
ಬಂಡವಾಳಶಾಹಿ ಪಾತಕಗಳ ಘೋರ ಪರಿಣಾಮ
ವಿಶ್ವಸಂಸ್ಥೆಯು ಜಾಗತಿಕ ತಾಪಮಾನ ಏರಿಕೆಯ ಸತ್ಯಾಸತ್ಯತೆ ಮತ್ತು ತೀವ್ರತೆಯನ್ನು ಪರಿಶೀಲಿಸಲು ೧೯೯೫ರಲ್ಲಿ ಅಂತರ್ರಾಷ್ಟ್ರೀಯ ವಿಜ್ಞಾನಿಗಳ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಸಕಲ ವೈಜ್ಞಾನಿಕ ಆಧಾರಗಳೊಂದಿಗೆ ಈ ಕೆಲವು ಅಂಶಗಳನ್ನು ಜಗತ್ತಿನ ಮುಂದಿರಿಸಿತು:
1. ಜಾಗತಿಕ ತಾಪಮಾನ ಕಳೆದ ಮೂರು ದಶಕಗಳಿಂದ ಒಂದೇ ಸಮನೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಭೂಮಿಯ ತಾಪಮಾನ ೦.೭೪ ಡಿಗ್ರಿಯಷ್ಟು ಏರಿದೆ.
2. ಈ ತಾಪಮಾನ ಏರಿಕೆಗೆ ಪ್ರಧಾನ ಕಾರಣ ವಾತಾವರಣದಲ್ಲಿ ಹೆಚ್ಚುತ್ತಿರುವ ಇಂಗಾಲದ ಡೈಆಕ್ಸೈಡ್ನಂತಹ ‘ಹಸಿರು ಮನೆ ಅನಿಲಗಳು’ ಮತ್ತು ಅದರಿಂದ ಉಂಟಾಗುತ್ತಿರುವ ‘ಹಸಿರು ಮನೆ ಪರಿಣಾಮ’.
3. ವಾತಾವರಣದಲ್ಲಿ ಈ ಪ್ರಮಾಣದಲ್ಲಿ ಹಸಿರು ಮನೆ ಅನಿಲಗಳು ಹೆಚ್ಚಾಗಲು ಕಾರಣ ಅಭಿವೃದ್ಧಿ ಹೊಂದಿದ ದೇಶಗಳ ಕೈಗಾರಿಕಾ ಚಟುವಟಿಕೆಗಳು(ಅರ್ಥಾತ್ ಬಂಡವಾಳಶಾಹಿ ದೇಶಗಳ ಲಾಭದ ಅಭಿವೃದ್ಧಿಗಾಗಿ ಭೂಮಿಯ ಮೇಲೆ ನಡೆಸುವ ದೌರ್ಜನ್ಯಗಳು), ಪೆಟ್ರೋಲಿಯಂನಂತಹ ಇಂಧನ ಬಳಕೆ ಮತ್ತು ಜಗತ್ತಿನ ಧಾರಣಾ ಶಕ್ತಿಯ ಪರಿವಿಲ್ಲದ ಅಭಿವೃದ್ಧಿ ಹೊಂದಿದ ದೇಶಗಳ ಜನತೆಯ ಜೀವನ ವಿಧಾನ.
4. ಭೂಮಂಡಲದ ವಾತಾವರಣದಲ್ಲಿರುವ ಹಸಿರುಮನೆ ಅನಿಲಗಳಲ್ಲಿ ಶೇ.೮೦ರಷ್ಟು ಪಾಲು ಅಮೆರಿಕ, ಐರೋಪ್ಯ ಒಕ್ಕೂಟ, ಜಪಾನ್ನಂತಹ ಅಭಿವೃದ್ಧಿ ಹೊಂದಿದ ದೇಶಗಳದ್ದೇ ಆಗಿದೆ.
5. ಇನ್ನಾದರೂ ಈ ಹಸಿರುಮನೆ ಅನಿಲಗಳ ಉತ್ಪಾದನೆಯನ್ನು ಈ ಅಭಿವೃದ್ಧಿ ಹೊಂದಿದ ದೇಶಗಳು ಕಡಿಮೆ ಮಾಡಿಕೊಳ್ಳದೇ ಹೋದರೆ ಜಗತ್ತಿನ ತಾಪಮಾನ ಇನ್ನು ಐವತ್ತು ವರ್ಷಗಳಲ್ಲಿ ೬ ಡಿಗ್ರಿಯಷ್ಟು ಏರುತ್ತದೆ.
6. ಇದರ ಪರಿಣಾಮವಾಗಿ ಸಾಗರದ ಮಟ್ಟ ಒಂದು ಮೀಟರ್ಗಿಂತಲೂ ಹೆಚ್ಚಾಗುತ್ತದೆ. ಸಾಗರದ ಮೇಲ್ಮೈ ತಾಪಮಾನ ಹೆಚ್ಚಾಗುತ್ತದೆ. ಇದರಿಂದಾಗಿ ಮಾಲ್ದೀವ್ಸ್ ಇನ್ನಿತ್ಯಾದಿ ದೇಶಗಳು ಸಂಪೂರ್ಣವಾಗಿ ಮುಳುಗಿ ಹೋಗುತ್ತವೆ. ತಾಪಮಾನದ ಏರುಪೇರಿನಿಂದ ಹವಾಮಾನ ವೈಪರೀತ್ಯ ಸಂಭವಿಸುತ್ತದೆ. ನೆರೆ, ಪ್ರವಾಹ, ಸುನಾಮಿ, ಬರದ ಸಂಭವಗಳು ಹೆಚ್ಚಾಗುತ್ತವೆ.
7. ಭೂ ತಾಪಮಾನ ಏರಿಕೆಯಿಂದ ಕೃಷಿ ಹಾಳಾಗುತ್ತದೆ. ಹೀಗಾಗಿ ಅದನ್ನೇ ಆಧರಿಸಿದ ಬಡದೇಶಗಳ ಬಡಜನರ ಬದುಕಿನ ಮೇಲೆ ಪ್ರಭಾವ ಬೀರುತ್ತದೆ ಮತ್ತು ಸಾಗರ ತಾಪಮಾನ ಏರಿಕೆಯಿಂದಾಗಿ ಮೀನುಗಾರಿಕೆಗೆ ದೊಡ್ಡ ಪೆಟ್ಟು ಬೀಳುತ್ತದೆ.
ಅಂತರ್ ರಾಷ್ಟ್ರೀಯ ವಿಜ್ಞಾನಿಗಳ ಸಮಿತಿ ಅನುಮಾನಕ್ಕೆಡೆಯಿಲ್ಲದಂತೆ ರುಜುವಾತು ಪಡಿಸಿದಂತೆ ಜಾಗತಿಕ ತಾಪಮಾನ ಏರಿಕೆಗೆ ಬಂಡವಾಳಶಾಹಿ ದೇಶಗಳು ಕಾರಣವಾದರೂ ಅದರ ಪರಿಣಾಮವನ್ನು ಅನುಭವಿಸುತ್ತಿರುವವರು ಮಾತ್ರ ಬಡದೇಶಗಳು ಮತ್ತು ಆ ದೇಶಗಳಲ್ಲಿರುವ ಬಡಜನರು!
ಇದನ್ನೇ ಕಾರ್ಲ್ಮಾರ್ಕ್ಸ್ 1850 ರ ಸುಮಾರಿನ ತಮ್ಮ ಬರಹಗಳಲ್ಲಿ ಬಂಡವಾಳಶಾಹಿ ವ್ಯವಸ್ಥೆ ಶ್ರಮಿಕರ ಹಾಗೂ ಪ್ರಕೃತಿಯ ಮೇಲೆ ದೌರ್ಜನ್ಯ ಮಾಡುವ ವ್ಯವಸ್ಥೆಯೆಂದೂ ಸ್ಪಷ್ಟವಾಗಿ ಬಣ್ಣಿಸಿದ್ದರು. ಅದನ್ನು ಬೋಳೆಬೋಳೆಯಾಗಿ ಮನುಷ್ಯರ ಕೃತ್ಯಗಳು ಎಂದು ಕರೆಯಲಿಲ್ಲ. ಪ್ರಕೃತಿಯೊಂದಿಗೆ ಏರ್ಪಟ್ಟಿರುವ ಈ ಬಿರುಕನ್ನು ‘ಮೆಟಬಾಲಿಕ್ ರಿಫ್ಟ್’ ಎಂದು ಕರೆದು ಲಾಭಾಸಕ್ತಿಯನ್ನು ಮಾತ್ರ ಪ್ರಧಾನವಾಗಿರಿಸಿಕೊಂಡಿರುವ ಬಂಡವಾಳಶಾಹಿಯಿಂದ ಈ ಬಿರುಕು ಮುಚ್ಚುವುದು ಅಸಾಧ್ಯ ಎಂದು ವಿವರಿಸಿದ್ದರು.
ಆದರೂ ಇರುವ ಭೂಮಿ ಒಂದೇ ಆದ್ದರಿಂದ ತಾಪಮಾನದ ಅಪಾಯವನ್ನು ಅನಿವಾರ್ಯವಾಗಿ ಬಂಡವಾಳಶಾಹಿ ಜಗತ್ತು ಒಪ್ಪಿಕೊಳ್ಳಲೇ ಬೇಕಾಯಿತು. 1997ರಲ್ಲಿ ಜಪಾನಿನ ಕ್ಯೋಟೋದಲ್ಲಿ ಜಗತ್ತಿನ ರಾಷ್ಟ್ರಗಳೆಲ್ಲಾ ಈ ಅಪಾಯವನ್ನು ಪರಿಗಣಿಸಿ ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವ ಒಪ್ಪಂದಕ್ಕೆ ಸಹಿಹಾಕಿದವು. ಅಮೆರಿಕ ಹೊರತುಪಡಿಸಿ!
ಅದಕ್ಕೆ ಅಮೆರಿಕ ಕೊಟ್ಟ ಕಾರಣ ಅದು ಅಮೆರಿಕದ ಹಿತಾಸಕ್ತಿಗೆ ಮತ್ತು ಅಲ್ಲಿನ ಜನರ ಜೀವನಶೈಲಿಯ ಹಿತಾಸಕ್ತಿಗೆ ವಿರುದ್ಧವಾಗಿದೆಯೆಂದು.
ಕ್ಯೋಟೋ ಒಪ್ಪಂದ ಪ್ರತಿಯೊಂದು ರಾಷ್ಟ್ರವು ತನ್ನ ಇಂಗಾಲದ ಉತ್ಪಾದನೆಯನ್ನು ಕಡಿಮೆ ಮಾಡಲು ತಾಕೀತು ಮಾಡುತ್ತದೆ. ಏಕೆಂದರೆ ಅದಾಗದೆ ಭೂತಾಯಿಯ ಒಡಲ ಉರಿ ಕಡಿಮೆಯಾಗುವುದಿಲ್ಲ. ಇಂಗಾಲದ ಬಳಕೆ ಕಡಿಮೆಯಾಗಬೇಕೆಂದರೆ ಪೆಟ್ರೋಲಿಯಂ ಬಳಕೆ ಕಡಿಮೆ ಮಾಡಿಕೊಳ್ಳಬೇಕು ಅಥವಾ ಇಂಗಾಲವನ್ನು ಹೊರಹಾಕದ ಬದಲೀ ಇಂಧನ ಮೂಲವನ್ನು ಬಳಸಿಕೊಳ್ಳಬೇಕು. ಆದರೆ ವಿಶ್ವದಲ್ಲಿ ಈ ಬಂಡವಾಳಶಾಹಿ ದೇಶಗಳು ನಡೆಸುತ್ತಿರುವ ಕೈಗಾರಿಕೋದ್ಯಮಗಳ ಶಕ್ತಿಯ ಎಲ್ಲಾ ಅಗತ್ಯವನ್ನು ಪೂರೈಸಬಲ್ಲಷ್ಟು ಬದಲೀ ಇಂಧನಮೂಲ ಸದ್ಯಕ್ಕಂತೂ ಇಲ್ಲ.
ಹೀಗಾಗಿ ಅಲ್ಲಿಯ ತನಕ ಜಗತ್ತಿನ ತಾಪಮಾನ ಕಡಿಮೆ ಮಾಡಬೇಕೆಂದರೆ ಈ ಬಂಡವಾಳಶಾಹಿಗಳು ತಮ್ಮ ಉತ್ಪಾದನಾ ಚಟುವಟಿಕೆಯನ್ನು ಕಡಿಮೆ ಮಾಡಬೇಕಷ್ಟೆ. ತಮ್ಮ ಐಷಾರಾಮಿ ಬದುಕಲ್ಲಿ ಸರಳತೆ ತಂದುಕೊಳ್ಳಬೇಕು. ಅರ್ಥಾತ್ ಅವು ಲಾಭದ ದುರಾಸೆಯನ್ನು ಮತ್ತು ಅದಕ್ಕಾಗಿ ಪ್ರಪಂಚದ ಮೇಲೆ ಅವು ನಡೆಸುತ್ತಿರುವ ಆಕ್ರಮಣವನ್ನು ನಿಲ್ಲಿಸಬೇಕು. ಇಲ್ಲವೇ ಕಡಿಮೆಯಾಗಬೇಕು.
ಆದರೆ ಬಂಡವಾಳಶಾಹಿ ಜಗತ್ತು ನಡೆಯುವುದೇ ಲಾಭವೆಂಬ ಇಂಧನದ ಮೇಲೆ. ದುರಾಸೆಯೆಂಬ ಪ್ರೇರಣೆಯಿಂದ ಹಾಗೂ ಐಷಾರಾಮಿ ಬದುಕೆಂಬ ಗುರಿಗಾಗಿ.
ಕಪಟ COP ನಾಟಕಗಳು
ಆದ್ದರಿಂದಲೇ ಕ್ಯೋಟೋ ಒಪ್ಪಂದವನ್ನು ಸಾರಾಂಶದಲ್ಲಿ ಯಾವ ಬಂಡವಾಳಶಾಹಿ ದೇಶಗಳೂ ಮಾನ್ಯ ಮಾಡಲೇ ಇಲ್ಲ. ಬದಲಿಗೆ ಹೆಚ್ಚೆಚ್ಚು ವಿಷವನ್ನು ವಾತಾವರಣಕ್ಕೆ ಸೇರಿಸುತ್ತಲೇ ಹೋದವು. ಆದರೆ ಪ್ರಕೃತಿ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆಯನ್ನು ಸುನಾಮಿ, ಚಂಡ ಮಾರುತ, ಹಿಮಗಡ್ಡೆಗಳ ಕುಸಿತ, ಸಾಗರದ ಮಟ್ಟ ಏರಿಕೆಯಲ್ಲಿ, ವಿವಿಧ, ಅನೂಹ್ಯ ಹಾಗೂ ಸಾಂಕ್ರಾಮಿಕ ರೋಗ ರುಜಿನಗಳಿಗೆ ಕಾರಣವಾಗಿರುವ ವೈರಸ್ ಬ್ಯಾಕ್ಟೀರಿಯಾಗಳ ಸೃಷ್ಟಿಯಲ್ಲಿ ತೋರುತ್ತಾ ಹೋದಂತೆ ಜಾಗತಿಕ ತಾಪಮಾನವನ್ನು ನಿಯಂತ್ರಿಸಲೇಬೇಕಾದ ತುರ್ತು ಅಜೆಂಡಾವನ್ನು ಅದು ಜಾಗತಿಕ ಸಮುದಾಯದ ಎದುರು ಇರಿಸಿದೆ. ಹೀಗಾಗಿಯೇ ಈ COP ನಾಟಕಗಳು ಪ್ರಾರಂಭವಾದವು.
2008ರ ಕೂಪನ್ ಹೇಗನ್ ಸಮ್ಮೇಳನದಲ್ಲಿ ಜಗತ್ತು ಉಳಿಯಬೇಕೆಂದರೆ
1. ಜಗತ್ತಿನ ತಾಪಮಾನವನ್ನು ಇನ್ನು 1.5 ಡಿಗ್ರಿಗಿಂತ ಹೆಚ್ಚಾಗದಂತೆ ತಡೆಹಿಡಿಯಲು ಬಂಡವಾಳಶಾಹಿ ಉತ್ಪಾದಕತೆ ಮತ್ತು ಕಾರ್ಬನ್ ಇಂಧನ ಮೂಲಗಳ ನಿಗ್ರಹ ಕಾರ್ಯಸೂಚಿ.
2. ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಇಂಗಾಲದ ಹೊರಸೂಸುವಿಕೆಗೆ ಗರಿಷ್ಠ ಮಿತಿಯನ್ನು ಹಾಕಿಕೊಳ್ಳಬೇಕು. ಅದೇ ರೀತಿ ಇತರ ದೇಶಗಳು ಸಹ ತಮ್ಮ ಪಾಲು ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಇಂಗಾಲದ ಪ್ರಮಾಣದ ಗರಿಷ್ಠ ಮಿತಿಯನ್ನು ಹಾಕಿಕೊಳ್ಳಬೇಕು.
3. ಶ್ರೀಮಂತ ದೇಶಗಳು ಬಡದೇಶಗಳು ಸಹ ತಮ್ಮ ಇಂಗಾಲದ ಹೊರಸೂಸುವಿಕೆಯ ಪ್ರಮಾಣ ತಡೆಗಟ್ಟಲು ಪರ್ಯಾಯ ತಂತ್ರಜ್ಞಾನವನ್ನು ಬಳಸಲು ಬೇಕಾದ ಹಣಕಾಸನ್ನು ಕೊಡಬೇಕು.
4. ಅಮೆರಿಕ ಹಾಗೂ ಶ್ರೀಮಂತ ದೇಶಗಳು ೨೦೨೦ರೊಳಗೆ ತಮ್ಮ ಇಂಗಾಲದ ಪ್ರಮಾಣವನ್ನು 1990ರ ಪ್ರಮಾಣಕ್ಕೆ ಇಳಿಸಿಕೊಳ್ಳಬೇಕು.
ಎಂಬ ತೀರ್ಮಾನಕ್ಕೆ ಬರಲಾಯಿತು. ಆದರೆ ಅಮೆರಿಕ ಪ್ರಾರಂಭದಿಂದಲೇ ಇದರಿಂದ ಹೊರಗುಳಿದದ್ದು ಮಾತ್ರವಲ್ಲದೆ ಇತರ ಶ್ರೀಮಂತ ದೇಶಗಳು ಬದ್ಧತೆ ತೋರಲಿಲ್ಲ.
ಮತ್ತೆ 2015ರಲ್ಲಿ ಪ್ಯಾರಿಸ್ನಲ್ಲಿ ನಡೆದ ಸಮ್ಮೇಳನದಲ್ಲಿ
- ಎಲ್ಲಾ ದೇಶಗಳು ತಾವೆಷ್ಟು ಕಾರ್ಬನ್ ಮಾಲಿನ್ಯ ತಡೆಗಟ್ಟುತ್ತೇವೆ ಎಂದು ತಾವೇ ತೀರ್ಮಾನಿಸಿ ಆ ನಿಟ್ಟಿನಲ್ಲಿ ಕಾರ್ಯಸೂಚಿಯನ್ನು ಸಿದ್ಧಗೊಳಿಸಿಕೊಳ್ಳಬೇಕು.
- ಒಟ್ಟಾರೆಯಾಗಿ 2030ರ ವೇಳೆಗೆ ಜಗತ್ತು ತನ್ನ ಈಗಿನ ಕಾರ್ಬನ್ ಮಾಲಿನ್ಯವನ್ನು ಅರ್ಧಕ್ಕೆ ಇಳಿಸಿ 2050ರ ವೇಳೆಗೆ ಒಟ್ಟಾರೆ ಕಾರ್ಬನ್ ಮಾಲಿನ್ಯವನ್ನು ಸಗಟು ಸೊನ್ನೆಗೆ ಇಳಿಸಬೇಕು.
-ಕಲ್ಲಿದ್ದಲು ಮತ್ತಿತರ ಇಂಧನ ಮೂಲಗಳ ಬಳಕೆಯನ್ನು ಕಡಿಮೆ ಮಾಡುತ್ತಾ ಪರ್ಯಾಯ ಇಂಧನ ಮೂಲಗಳ ಬಳಕೆಯನ್ನು ಹೆಚ್ಚು ಮಾಡಬೇಕು.
- ಈಗಾಗಲೇ ಜಾಗತಿಕ ತಾಪಮಾನಕ್ಕೆ ಬಲಿಯಾದ ದೇಶಗಳ ಮತ್ತು ಇಂಧನಗಳ ಬಳಕೆಯಿಲ್ಲದೆ ಅಭಿವೃದ್ಧಿ ಹೊಂದಲಾಗದ ಬಡದೇಶಗಳು ಪರ್ಯಾಯ ಇಂಧನ ಹಾಗೂ ಮಾಲಿನ್ಯ ನಿವಾರಕ ತಂತ್ರಜ್ಞಾನ ಬಳಸಲು ಅನುಕೂಲವಾಗುವಂತೆ ಹಣಕಾಸು ಸಹಾಯ ಒದಗಿಸಬೇಕು ಮತ್ತು ಈ ದಿಕ್ಕಿನಲ್ಲಿ ಎಷ್ಟು ಪ್ರಗತಿಯಾಗಿದೆ ಎಂಬುದರ ಬಗ್ಗೆ ಪ್ರತೀ ಎರಡು ವರ್ಷಗಳಿಗೊಮ್ಮೆ ಮರುಪರಿಶೀಲನೆ ಮಾಡಬೇಕು ಎಂದು ತೀರ್ಮಾನಿಸಲಾಯಿತು.
ಅದರೆ ಯಥಾ ಪ್ರಕಾರ ಸಮ್ಮೇಳನಗಳು ನಡೆದವಾಗಲೀ ಯಾವ ಪರಿಣಾಮಕಾರಿ ಪ್ರಯತ್ನಗಳೂ ನಡೆಯಲಿಲ್ಲ. 2021ರಲ್ಲಿ ಗ್ಲಾಸ್ಗೋದಲ್ಲಿ ನಡೆದ COP-26 ಸಮ್ಮೇಳನದಲ್ಲಿ ಭಾರತದ ಮೋದಿ ಸರಕಾರವು ಜಗತ್ತಿನ ಇತರ ಬಂಡವಾಳಶಾಹಿ ಮಾಲಿನ್ಯಕಾರರ ಜೊತೆ ಸೇರಿ ಕಲ್ಲಿದ್ದಲು ಬಳಕೆ ನಿಷೇಧದ ಬಗ್ಗೆ ತೀರ್ಮಾನವಾಗದಂತೆ ತಡೆಹಿಡಿಯಿತು.
ಕಾರ್ಬನ್ ಸೃಷ್ಟಿಸಿದಷ್ಟು ಮತ್ತೊಂದು ಕಡೆ ಇಂಗುತ್ತಿರುವುದರಿಂದ ನೆಟ್ ಜೀರೋ - ಸಗಟು ಸೊನ್ನೆ ಕಾರ್ಬನ್ ಆಗುತ್ತಿದೆ ಎಂಬುದು ಈ ಕಾಲದಲ್ಲಿ ಬಂಡವಾಳಶಾಹಿ ದೇಶಗಳು ಇಡೀ ಜಗತ್ತಿಗೆ ಎರಚುತ್ತಿರುವ ದೊಡ್ಡ ಮಂಕುಬೂದಿಯಾಗಿದೆ.
ಮತ್ತೊಂದು ಕಡೆ ಇದೇ ಜಾಗತಿಕ ತಾಪಮಾನ ಇನ್ನು ಇಪ್ಪತ್ತು ವರ್ಷಗಳಲ್ಲಿ ೩-೪ ಡಿಗ್ರಿ ಏರಿ ಬರ, ಕ್ಷಾಮ, ಕಾಡ್ಗಿಚ್ಚು, ಅಸಹನೀಯ ಬೇಸಿಗೆ, ದ್ವೀಪಗಳ ಮುಳುಗಡೆ, ಕೃಷಿ ಮತ್ತು ಮೀನುಗಳ ಇಳುವರಿ ಕುಸಿತ, ರೋಗ ರುಜಿನಗಳಿಗೆ ಜಗತ್ತಿನ ಬಡಜನರು ತುತ್ತಾಗಲಿದ್ದಾರೆ.
ಅಪರಾಧ ಶ್ರೀಮಂತರದು ಶಿಕ್ಷೆ ಬಡವರಿಗೆ.
ಇದೇ ನವೆಂಬರ್ 30-ಡಿಸೆಂಬರ್ 13ರ ವರೆಗೆ ನಡೆದ COP- 28 ಸಮ್ಮೇಳನದಲ್ಲಿ 1) ಪ್ಯಾರಿಸ್ ಸಮ್ಮೇಳನದಲ್ಲಿ ತೆಗೆದುಕೊಂಡ ತೀರ್ಮಾನಗಳಲ್ಲಿ ಎಷ್ಟು ಅಭಿವೃದ್ಧಿ ಸಾಧಿಸಲಾಗಿದೆ 2) ಅದನ್ನು ಆಧರಿಸಿ ಮುಂದಿನ ಕಾರ್ಯಸಾಧು ಗುರಿಗಳು 3) ಮತ್ತು ಈಗಾಗಲೇ ಜಾಗತಿಕ ತಾಪಮಾನಕ್ಕೆ ಬಲಿಯಾಗಿರುವ ದೇಶಗಳಿಗೆ ನಷ್ಟ ಮತ್ತು ಹಾನಿ ಪರಿಹಾರ ನಿಧಿ ಸ್ಥಾಪಿಸುವುದು ಎಂಬ ಮೂರು ಗುರಿಗಳನ್ನು ಇಟ್ಟುಕೊಳ್ಳಲಾಗಿತ್ತು.
ಆದರೆ ಈ ಸಭೆ ನಡೆದದ್ದೇ ಜಗತ್ತಿನಲ್ಲಿ ಅತಿ ಹೆಚ್ಚು ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟ ಮಾಡುವ ಪೆಟ್ರೋ ರಾಷ್ಟ್ರವಾದ ದುಬೈನಲ್ಲಿ. COP- 28 ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದು ಜಗತ್ತಿನ ಅತ್ಯಂತ ದೊಡ್ಡ ಪೆಟ್ರೋಲಿಯಂ ಕಂಪೆನಿಯ ಮಾಲಕ ಮತ್ತು ಆತ ಪೆಟ್ರೋಲಿಯಂ ಉತ್ಪನ್ನಗಳನ್ನು ಕಡಿಮೆ ಮಾಡಬೇಕು ಎನ್ನುವುದರ ಹಿಂದೆ ವಿಜ್ಞಾನವೇ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದ ಭೂಪ. ಅಷ್ಟು ಮಾತ್ರವಲ್ಲ. ಈ ಸಮ್ಮೇಳನಕ್ಕೆ 2,500ಕ್ಕೂ ಹೆಚ್ಚು ಪೆಟ್ರೋಲಿಯಂ ಕಂಪೆನಿಗಳ ಲಾಬಿಯಿಸ್ಟ್ಗಳು ಬಂದಿದ್ದರು. ಹಲವು ದೇಶಗಳ ಪ್ರತಿನಿಧಿತ್ವವನ್ನು ಅವರೇ ವಹಿಸಿಕೊಂಡಿದ್ದರು. ಹೀಗಾಗಿ ಸಮ್ಮೇಳನದ ಪ್ರಾರಂಭದ ದಿನದಿಂದಲೇ ವಾಸ್ತವಿಕವಾದಿಗಳಿಗೆ ಹೆಚ್ಚೇನು ನಿರೀಕ್ಷೆ ಇರಲಿಲ್ಲ.
ಅದೇನೆ ಇರಲಿ. ಪ್ಯಾರಿಸ್ ಸಮ್ಮೇಳನದ ನಂತರ ಜಗತ್ತು ಎತ್ತ ಸಾಗುತ್ತಿದೆ ಎಂಬುದರ ಬಗ್ಗೆ ಈ ಸಮ್ಮೇಳನದಲ್ಲಿ ಅಳವಡಿಸಿಕೊಳ್ಳಲಾದ ವರದಿ ಗಾಬರಿಗೊಳಿಸುತ್ತದೆ. ಈ ಕಾರ್ಬನ್ ಇಂಧನಗಳ ಬಳಕೆಯನ್ನು 2030ರ ಒಳಗೆ ಎಷ್ಟು ಇಳಿಸಬೇಕಿತ್ತು ಎಂದು ತೀರ್ಮಾನಿಸಲಾಗಿತ್ತೋ ಅದರ ಶೇ.೫ರಷ್ಟು ಕೂಡ ಸಾಧಿಸಲಾಗಿಲ್ಲ. ಇದು ಹೀಗೆ ಮುಂದುವರಿದರೆ 2050ರ ವೇಳೆಗೆ ಜಾಗತಿಕ ತಾಪಮಾನ 1750ರಲ್ಲಿ ಇದ್ದದ್ದಕ್ಕಿಂತ 1.5 ಡಿಗ್ರಿ ಗಿಂತ ಹೆಚ್ಚಾಗದಂತೆ ತಡೆಯುವುದಿರಲಿ, 5 ಡಿಗ್ರಿಯಷ್ಟು ಏರಿಕೆಯನ್ನು ತಡೆಯಲಾಗುವುದಿಲ್ಲ ಹಾಗೂ ಬಡರಾಷ್ಟ್ರಗಳಿಗೆ ಹೊಂದಾಣಿಕೆ ಮತ್ತು ಬದಲಿ ಇಂಧನಮೂಲಗಳಿಗಾಗಿ ಕೊಡಬೇಕಿದ್ದ ವಾರ್ಷಿಕ ೧೦೦ ಬಿಲಿಯನ್ ಡಾಲರ್ ಗುರಿಯನ್ನು ಯಾವೊಂದು ವರ್ಷವೂ ಮುಟ್ಟಲಾಗಲಿಲ್ಲ.
ಈ ಹಿನ್ನೆಲೆಯಲ್ಲಿ COP- 28 ಸಮ್ಮೇಳನ: 2030ರ ಒಳಗೆ 2019ರಲ್ಲಿ ಎಷ್ಟು ಕಾರ್ಬನ್ ಮಾಲಿನ್ಯ ಸೃಷ್ಟಿಯಾಗುತ್ತಿತ್ತೋ ಅದರ ಶೇ. 45ರಷ್ಟು ಕಡಿಮೆ ಮಾಡಿ 2050ರಲ್ಲಿ ಸಗಟು ಸೊನ್ನೆ ಕಾರ್ಬನ್ ಹೊರಸೂಸುವಿಕೆ ಸಾಧಿಸಬೇಕೆಂದು ತೀರ್ಮಾನಿಸಿದೆ.
ಆದರೆ ಅದಾಗಬೇಕೆಂದರೆ ಕಲ್ಲಿದ್ದಲು, ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆ ಮತ್ತು ಬಳಕೆಯನ್ನು ಹಂತಹಂತವಾಗಿ ಯಾದರೂ ನಿಷೇಧಿಸಬೇಕು. ಆದರೆ ಆ ತೀರ್ಮಾನವೇ ಸಮ್ಮೇಳನದಲ್ಲಿ ಆಗಲಿಲ್ಲ. ಬದಲಿಗೆ ಈ ಮಾಲಿನ್ಯಕಾರಿ ಇಂಧನ ಮೂಲಗಳಿಂದ ಪರ್ಯಾಯ ಇಂಧನ ಮೂಲಗಳಿಗೆ ಪರಿವರ್ತನೆಗೊಳ್ಳಬೇಕು ಎಂಬ ತೀರ್ಮಾನವನ್ನು ಮಾಡಲಾಗಿದೆ ಮತ್ತು ಆ ಪರಿವರ್ತನೆಗೆ ಮಾಲಿನ್ಯಕಾರಿ ನೈಸರ್ಗಿಕ ಅನಿಲವನ್ನೇ ಪರಿವರ್ತನಾ ಇಂಧನ ಮೂಲವೆಂದು ಪರಿಗಣಿಸುವಂತೆ ಪೆಟ್ರೋ ಕಂಪೆನಿಗಳು ಮಾಡುವಲ್ಲಿ ಯಶಸ್ವಿಯಾಗಿವೆ.
ಹೀಗಾಗಿಯೇ ಆ ಸಮ್ಮೇಳನದಲ್ಲಿ ಭಾಗವಹಿಸಿದ್ದ ದ್ವೀಪರಾಷ್ಟ್ರವೊಂದರ ಪ್ರತಿನಿಧಿ ಹೇಳಿದಂತೆ ‘‘ಈ ಸಮ್ಮೇಳನದಲ್ಲಿ ಭಾಗವಹಿಸಿ ನಮ್ಮ ಸಾಮೂಹಿಕ ಆತ್ಮಹತ್ಯೆಗೆ ನಾವೇ ಸಹಿ ಹಾಕುವಂತಾಯಿತು.’’
ಸಗಟು ಸೊನ್ನೆಯೆಂಬ ಮಹಾವಂಚನೆ
ಕಾರ್ಬನ್ ಮಾಲಿನ್ಯ ಹೆಚ್ಚಿಸುತ್ತಲೇ 2050ಕ್ಕೆ ಕಾರ್ಬನ್ ಮಾಲಿನ್ಯವನ್ನು ಸಗಟು ಸೊನ್ನೆಗೆ ತರಲು ಹೇಗೆ ಸಾಧ್ಯ? ಬಂಡವಾಳಶಾಹಿ ವ್ಯವಸ್ಥೆಯು ಹೇಗೆ ಸಾವನ್ನು, ಹೆಣದ ವಿಲೇವಾರಿಯನ್ನು ಒಂದು ಮಾರುಕಟ್ಟೆ ಮಾಡಿಕೊಳ್ಳುತ್ತದೆ ಎಂಬುದು ಈ ಪವಾಡ ಸದೃಶ ಪರಿಹಾರದಲ್ಲೂ ವ್ಯಕ್ತವಾಗಿದೆ. ಇದಕ್ಕೆ ಕಾರ್ಪೊರೇಟ್ ಕಂಪೆನಿಗಳು ಮತ್ತು ಬಂಡವಾಳಶಾಹಿ ದೇಶಗಳು ಕಾರ್ಬನ್ ಕ್ರೆಡಿಟ್ ಮತ್ತು ಕಾರ್ಬನ್ ಟ್ರೇಡಿಂಗ್ ಎಂಬ ಹೊಸ ವ್ಯವಸ್ಥೆಯನ್ನು ಕಂಡುಕೊಂಡಿವೆ. ಇದೊಂದು ಹಣದ ಆಮಿಷ ತೋರಿ ತನ್ನ ಸಾವು ಮತ್ತು ರೋಗವನ್ನು ಮತ್ತೊಬ್ಬರಿಗೆ ವರ್ಗಾಯಿಸುವ ಸಾವಿನ ಹಾಗೂ ವಿನಾಶದ ಮಾರುಕಟ್ಟೆ.
ಜಗತ್ತಿನಲ್ಲಿ ಕಾರ್ಬನ್ ಅನ್ನು ವಾತಾವರಣದಿಂದ ಹೀರಿಕೊಳ್ಳುವುದು ಮರಗಿಡಗಳು ಮತ್ತು ಕಾಡುಗಳು. ಒಂದು ಹೆಕ್ಟೇರ್ ಕಾಡು ವರ್ಷಕ್ಕೆ ನೂರು ಟನ್ ಕಾರ್ಬನ್ ಅನ್ನು ವಾತಾವರಣದಿಂದ ಹೀರಿಕೊಳ್ಳುತ್ತದೆ ಎಂದಿಟ್ಟುಕೋಳ್ಳೋಣ. ಅಮೆರಿಕದ ಒಂದು ಕಾರ್ಖಾನೆಗೆ ಅಥವಾ ಆ ದೇಶಕ್ಕೆ ವರ್ಷಕ್ಕೆ ನೂರು ಟನ್ಗಿಂತ ಹೆಚ್ಚಿಗೆ ಕಾರ್ಬನ್ ಉತ್ಪಾದನೆ ಮಾಡುವಂತಿಲ್ಲ ಎಂದು ಮೇಲ್ಮಿತಿ ಎಂದು ಭಾವಿಸೋಣ. ಆ ದೇಶ ಅಥವಾ ಕಂಪೆನಿ ವರ್ಷಕ್ಕೆ ಇನ್ನೂರು ಟನ್ ಕಾರ್ಬನ್ ಉತ್ಪಾದಿಸಿದಲ್ಲಿ, ಅದು ನೂರು ಟನ್ ಕಾರ್ಬನ್ ಅನ್ನು ಹೇಗಾದರೂ ಸರಿದೂಗಿಸಬೇಕು. ಅದಕ್ಕೆ ಪ್ಯಾರಿಸ್ ಒಪ್ಪಂದ ಒದಗಿಸಿರುವ ಪರಿಹಾರ ಎಂದರೆ ಈ ಕಂಪೆನಿಗಳು ಅಥವಾ ದೇಶಗಳು ತಮ್ಮ ದೇಶದಲ್ಲಿ ಅಥವಾ ಬೇರೆ ಯಾವುದಾದರೂ ದೇಶಗಳಲ್ಲಿ ನೂರು ಟನ್ ಕಾರ್ಬನ್ ಇಂಗಿಕೊಳ್ಳುವ ಒಂದು ಹೆಕ್ಟೇರ್ ಕಾಡು ಬೆಳೆಯಲು ಹಣ ಪಾವತಿ ಮಾಡಿದರೆ ಅಥವಾ ಒಂದು ಹೆಕ್ಟೇರ್ ಕಾಡು ಕಡಿತ ಮಾಡದಂತೆ ತಡೆದರೆ ಅವರು ಹೆಚ್ಚುವರಿ ಉತ್ಪಾದಿಸಿದ ನೂರು ಟನ್ ಕಾರ್ಬನ್ ಮಾಲಿನ್ಯ ವಜಾ ಎಂಬ ದಂಧೆ ಪ್ರಾರಂಭವಾಗಿದೆ. ಇದು ಈಗ ಒಂದು ಟ್ರಿಲಿಯನ್ ಡಾಲರ್ ದಂಧೆ. ಆದರೆ ವರದಿಗಳು ಹೇಳುತ್ತಿರುವಂತೆ ಈ ಟ್ರೇಡಿಂಗ್ ಶೇ. 96ರಷ್ಟು ಮೋಸವೇ ನಡೆಯುತ್ತಿದೆ. ಹೀಗಾಗಿ ಕಾರ್ಬನ್ ಸೃಷ್ಟಿಸಿದಷ್ಟು ಮತ್ತೊಂದು ಕಡೆ ಇಂಗುತ್ತಿರುವುದರಿಂದ ನೆಟ್ ಜೀರೋ - ಸಗಟು ಸೊನ್ನೆ ಕಾರ್ಬನ್ ಆಗುತ್ತಿದೆ ಎಂಬುದು ಈ ಕಾಲದಲ್ಲಿ ಬಂಡವಾಳಶಾಹಿ ದೇಶಗಳು ಇಡೀ ಜಗತ್ತಿಗೆ ಎರಚುತ್ತಿರುವ ದೊಡ್ಡ ಮಂಕುಬೂದಿಯಾಗಿದೆ.
ಮತ್ತೊಂದು ಕಡೆ ಇದೇ ಜಾಗತಿಕ ತಾಪಮಾನ ಇನ್ನು ಇಪ್ಪತ್ತು ವರ್ಷಗಳಲ್ಲಿ 3-4 ಡಿಗ್ರಿ ಏರಿ ಬರ, ಕ್ಷಾಮ, ಕಾಡ್ಗಿಚ್ಚು, ಅಸಹನೀಯ ಬೇಸಿಗೆ, ದ್ವೀಪಗಳ ಮುಳುಗಡೆ, ಕೃಷಿ ಮತ್ತು ಮೀನುಗಳ ಇಳುವರಿ ಕುಸಿತ, ರೋಗ ರುಜಿನಗಳಿಗೆ ಜಗತ್ತಿನ ಬಡಜನರು ತುತ್ತಾಗಲಿದ್ದಾರೆ.
ಅಪರಾಧ ಶ್ರೀಮಂತರದು ಶಿಕ್ಷೆ ಬಡವರಿಗೆ.
ಕಾರ್ಬನ್ ಕ್ಯಾಪಿಟಲಿಸ್ಟುಗಳು ಕಾರ್ಬನ್ ಉತ್ಪಾದನೆ ಕಡಿಮೆ ಮಾಡುವರೇ?
ಪೆಟ್ರೊಲಿಯಂ ಕಂಪೆನಿ ಮಾಲಕರು ಪ್ರಾಯೋಜಿಸುವ ಪರಿಸರ ಸಮ್ಮೇಳನ ಬಡವರಿಗೆ, ಭೂಮಿಗೆ ಪರಿಹಾರ ಕೊಡುವುದೇ?