ಕೊರೋನ ಭೀತಿ; ಚಾಮರಾಜನಗರ- ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸದ ಜಿಲ್ಲಾಡಳಿತ: ಆರೋಪ
ಗುಂಡ್ಲುಪೇಟೆ : ನೆರೆಯ ರಾಜ್ಯ ಕೇರಳದಲ್ಲಿ ಕೊರೋನ ಹೊಸ ಸೋಂಕು ಪತ್ತೆಯಾಗಿದ್ದರೂ ಚಾಮರಾಜನಗರ ಜಿಲ್ಲಾಡಳಿತ ತಾಲೂಕಿನ ಗಡಿಯಲ್ಲಿ ಸೋಂಕು ತಡೆಗಟ್ಟಲು ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ರತಿ ಬಾರಿಯೂ ಕೇರಳ ರಾಜ್ಯದಲ್ಲಿ ಜನ, ಜಾನುವಾರು ಹಾಗೂ ಪ್ರಾಣಿ ಪಕ್ಷಿಗಳಿಗೆ ಯಾವುದೇ ರೀತಿಯ ಸೋಂಕು ಕಂಡುಬಂದರೂ ಗಡಿಯಲ್ಲಿ ಕಟ್ಟೆಚ್ಚರ ವಹಿಸುತ್ತಿದ್ದ ಜಿಲ್ಲಾಡಳಿತ ಇದೀಗ ಮೌನವಾಗಿದೆ. ಇತ್ತೀಚೆಗೆ ಕೇರಳ ತಮಿಳುನಾಡಿನಲ್ಲಿ ಜಿಎನ್-1 ಸೋಂಕು ಪತ್ತೆಯಾಗಿ ಆತಂಕ ಮೂಡಿಸುವ ಜತೆಗೆ, ಕೇರಳದ ನಾನಾ ಭಾಗಗಳಲ್ಲಿ ಕೊರೋನ ಪ್ರಕರಣಗಳೂ ಹೆಚ್ಚಾಗುತ್ತಿವೆ. ಈ ಬಗ್ಗೆ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದಾರೆ. ಆದರೆ ಚಾಮರಾಜನಗರ ಜಿಲ್ಲಾಡಳಿತ ತಾಲೂಕಿನ ತಮಿಳುನಾಡು ಹಾಗೂ ಕೇರಳದ ಗಡಿಗಳಲ್ಲಿ ಸೋಂಕು ವ್ಯಾಪಿಸದಂತೆ ತಡೆಗಟ್ಟಲು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಸೋಂಕಿತರು ಪತ್ತೆಯಾದರೆ ಅವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಮೀಸಲಿರಿಸಿಲ್ಲದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗುತ್ತಿದೆ.
ತಾಲೂಕಿನಿಂದ ನೆರೆಯ ರಾಜ್ಯ ಕೇರಳ ಹಾಗೂ ತಮಿಳುನಾಡಿಗೆ ಪ್ರತಿದಿನ ಕೂಲಿ ಕೆಲಸ, ವ್ಯಾಪಾರ ಇನ್ನಿತರ ಕೆಲಸ ಕಾರ್ಯಗಳಿಗಾಗಿ ಕಾರ್ಮಿಕರು ಸೇರಿದಂತೆ ಸಾವಿರಾರು ಜನರು ಹೋಗಿಬರುತ್ತಿದ್ದಾರೆ. ಕಳೆದ ತಿಂಗಳಿನಿಂದಲೂ ತಾಲೂಕಿನ ನಾನಾ ಗ್ರಾಮಗಳ ಸಾವಿರಾರು ಭಕ್ತರು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಅಲ್ಲದೆ, ರಾಜ್ಯದ ನಾನಾ ಭಾಗಗಳಿಂದ ಬರುವ ಯಾತ್ರಾರ್ಥಿಗಳು ತಾಲೂಕಿನ ಮೂಲಕವೇ ಪ್ರಯಾಣವನ್ನ ಬೆಳೆಸುತ್ತಿದ್ದಾರೆ
ಜಿಲ್ಲಾಡಳಿತ ಗಡಿಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲದಿರುವುದರಿಂದ ಸೋಂಕು ವ್ಯಾಪಕವಾಗಿ ಹರಡುವ ಭೀತಿ ಎದುರಾಗಿದೆ. ಕಳೆದ ಬಾರಿಯೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಕೇರಳಾದ ಮೂಲಕವೇ ಕೊರೋನ ವ್ಯಾಪಿಸಿದ್ದರಿಂದ ಪರಿತಪಿಸುವಂತಾಗಿತ್ತು ಎಂದು ಗುಂಡ್ಲುಪೇಟೆ ತಾಲೂಕಿನ ಜನತೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇನ್ನಾದರೂ ಜಿಲ್ಲಾಡಳಿತ ಗಡಿ ಚೆಕ್ ಪೋಸ್ಟ್ ಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ನಿಯೋಜಿಸಿ ಸೋಂಕಿತರ ಪತ್ತೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಆರೋಗ್ಯ ಸಚಿವರು ಸಭೆ ನಡೆಸಿದ್ದು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದಾರೆ. ಮಂಗಳವಾರ ಸಂಜೆ ಮತ್ತೆ ಅಧಿಕಾರಿಗಳ ಜೊತೆ ಸಭೆ ಇದೆ. ಆದರೆ ಇಲ್ಲಿಯವರೆ ಸರಕಾರದಿಂದ ಯವುದೇ ರೀತಿಯ ಆದೇಶ ಬಂದಿರುವುದಿಲ್ಲ. ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು.
- ಡಾ.ಚಿದಂಬರಂ, ಜಿಲ್ಲಾ ಆರೋಗ್ಯಾಧಿಕಾರಿ, ಚಾಮರಾಜನಗರ