6 ರಾಜ್ಯಗಳ 7 ಸ್ಥಾನಗಳ ಉಪ ಚುನಾವಣೆಯ ಮತ ಎಣಿಕೆ ಆರಂಭ: ತ್ರಿಪುರಾದಲ್ಲಿ ಬಿಜೆಪಿ, ಘೋಸಿಯಲ್ಲಿ ಸಮಾಜವಾದಿ, ಕೇರಳದಲ್ಲಿ ಕಾಂಗ್ರೆಸ್ ಗೆ ಮುನ್ನಡೆ
Photo: Twitter@NDTV
ಹೊಸದಿಲ್ಲಿ: ಆರು ರಾಜ್ಯಗಳ ಏಳು ಸ್ಥಾನಗಳಿಗೆ ಮತ ಎಣಿಕೆ ಶುಕ್ರವಾರ ಬೆಳಗ್ಗೆ ಆರಂಭವಾಗಿದೆ. ತ್ರಿಪುರಾದ ಧನಪುರ್ ಹಾಗೂ ಬೊಕ್ಸಾನಗರ, ಉತ್ತರಾಖಂಡದ ಬಾಗೇಶ್ವರ್, ಕೇರಳದ ಪುತ್ತುಪಲ್ಲಿ, ಜಾರ್ಖಂಡ್ನ ಡುಮ್ರಿ, ಉತ್ತರ ಪ್ರದೇಶದ ಘೋಸಿ ಹಾಗೂ ಪಶ್ಚಿಮ ಬಂಗಾಳದ ಧೂಪ್ಗುರಿಯಲ್ಲಿ ಉಪ ಚುನಾವಣೆ ನಡೆದಿದೆ.
ಸಮಾಜವಾದಿ ಪಕ್ಷದ (ಎಸ್ಪಿ) ಸುಧಾಕರ್ ಸಿಂಗ್ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ದಾರಾ ಸಿಂಗ್ ಚೌಹಾಣ್(10,219) ಅವರ ವಿರುದ್ಧ ಉತ್ತರ ಪ್ರದೇಶದ ಘೋಸಿಯಲ್ಲಿ 4ನೇ ಸುತ್ತಿನಲ್ಲಿ 14,286 ಮತಗಳನ್ನು ಪಡೆದು ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.
ಕೇರಳದ ಪುತ್ತುಪ್ಪಲ್ಲಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಚಾಂಡಿ ಉಮ್ಮನ್ ಅವರು 10ನೇ ಸುತ್ತಿನ ಮತ ಎಣಿಕೆಯ ನಂತರ ಸಿಪಿಎಂ ಅಭ್ಯರ್ಥಿ ಜೈಕ್ ಸಿ ಥಾಮಸ್ ಅವರಿಗಿಂತ 27,132 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಲಿಗಿನ್ ಲಾಲ್ ಮೂರನೇ ಸ್ಥಾನದಲ್ಲಿದ್ದಾರೆ.
ತ್ರಿಪುರಾದ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ನಾಲ್ಕು ಸುತ್ತಿನ ಮತ ಎಣಿಕೆಯ ನಂತರ ಬಿಜೆಪಿಯ ತಫಜ್ಜಲ್ ಹುಸೈನ್ ಅವರು ಬೊಕ್ಸಾನಗರ ಕ್ಷೇತ್ರದಲ್ಲಿ 25,478 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಸಿಪಿಐ(ಎಂ) ಅಭ್ಯರ್ಥಿ ಮಿಝಾನ್ ಹುಸೈನ್ ಎರಡನೇ ಸ್ಥಾನದಲ್ಲಿದ್ದಾರೆ.
ಧನಪುರ್ ಕ್ಷೇತ್ರದಲ್ಲಿ ನಾಲ್ಕು ಸುತ್ತಿನ ಮತ ಎಣಿಕೆಯ ನಂತರ ಬಿಜೆಪಿಯ ಬಿಂದು ದೇಬನಾಥ್ 14,384 ಮತಗಳಿಂದ ಮುಂದಿದ್ದರು. ಸಿಪಿಐ(ಎಂ)ನ ಕೌಶಿಕ್ ಚಂದಾ ಹಿನ್ನಡೆಯಲ್ಲಿದ್ದರು.
ಆರು ಸುತ್ತಿನ ಮತ ಎಣಿಕೆಯ ನಂತರ ಉತ್ತರಾಖಂಡದ ಬಾಗೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪಾರ್ವತಿ ದಾಸ್ 15,253 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್ ನ ಬಸಂತ್ ಕುಮಾರ್ (13,553 ಮತ) ಹಿನ್ನಡೆಯಲ್ಲಿದ್ದಾರೆ.
ಆರಂಭಿಕ ಟ್ರೆಂಡ್ ಗಳ ಪ್ರಕಾರ, ಪಶ್ಚಿಮ ಬಂಗಾಳದ ಧುಪ್ಗುರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತಾಪಸಿ ರಾಯ್ ಮುನ್ನಡೆ ಸಾಧಿಸಿದ್ದಾರೆ. ತೃಣಮೂಲದ ನಿರ್ಮಲ್ ಚಂದ್ರ ರಾಯ್ ಹಿಂದೆ ಬಿದ್ದಿದ್ದಾರೆ. ಸಿಪಿಐಎಂ ಅಭ್ಯರ್ಥಿ ಈಶ್ವರ್ ಚಂದ್ರ ರಾಯ್ ಮೂರನೇ ಸ್ಥಾನದಲ್ಲಿದ್ದಾರೆ.
ಜಾರ್ಖಂಡ್ ನ ಗಿರಿದಿಹ್ ಜಿಲ್ಲೆಯ ದುಮ್ರಿ ವಿಧಾನಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಜೆಎಂಎಂ ಅಭ್ಯರ್ಥಿ ಬೇಬಿ ದೇವಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಯಶೋದಾ ದೇವಿ ಅವರಿಗಿಂತ 1,341 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಎರಡು ಸುತ್ತಿನ ಮತ ಎಣಿಕೆಯ ನಂತರ, INDIA ಒಕ್ಕೂಟದ ಅಭ್ಯರ್ಥಿಯೂ ಆಗಿರುವ ಜೆಎಂಎಂ ಅಭ್ಯರ್ಥಿ 7,314 ಮತಗಳನ್ನು ಪಡೆದಿದ್ದರೆ, ಎಜೆಎಸ್ ಯು ಪಕ್ಷದ ಅಭ್ಯರ್ಥಿ, ಎನ್ಡಿಎ ಅಭ್ಯರ್ಥಿ 5,973 ಮತಗಳನ್ನು ಪಡೆದರು.
ಈ ಉಪಚುನಾವಣೆಗಳು ಕೆಲವು ಕ್ಷೇತ್ರಗಳಲ್ಲಿ ವಿಶೇಷವಾಗಿ ಉತ್ತರ ಪ್ರದೇಶದ ಘೋಸಿ ಹಾಗೂ ಜಾರ್ಖಂಡ್ನ ದುಮ್ರಿ INDIA ಮೈತ್ರಿಯಿಂದ ಪ್ರತಿಪಕ್ಷಗಳ ಒಗ್ಗಟ್ಟಿಗೆ ಸಾಕ್ಷಿಯಾಗಿದೆ. ಈ ಏಳು ಸ್ಥಾನಗಳಲ್ಲಿ ಈ ಹಿಂದೆ ಮೂರರಲ್ಲಿ ಬಿಜೆಪಿ ಅಭ್ಯರ್ಥಿಗಳಿದ್ದರೆ, ಸಮಾಜವಾದಿ ಪಕ್ಷ, ಸಿಪಿಐ(ಎಂ), ಜೆಎಂಎಂ ಹಾಗೂ ಕಾಂಗ್ರೆಸ್ ತಲಾ ಒಂದನ್ನು ಹೊಂದಿದ್ದವು.