‘ಕೊವಿಡ್’ ಬಿಜೆಪಿ ಅಕ್ರಮ ಕುನ್ಹಾ ಸಮಿತಿ ವರದಿಯಲ್ಲಿ ಬಯಲು : ಡಾ.ಶರಣ ಪ್ರಕಾಶ್ ಪಾಟೀಲ್
ಡಾ.ಶರಣಪ್ರಕಾಶ ಪಾಟೀಲ್
ಕಲಬುರಗಿ : ಕೊವಿಡ್ ಸಂದರ್ಭದಲ್ಲಿ ಅಂದಿನ ಬಿಜೆಪಿ ಸರಕಾರದಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ನ್ಯಾ.ಕುನ್ಹಾ ಸಮಿತಿ ವರದಿಯಲ್ಲಿ ಬಹಿರಂಗವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಪ್ರತಿಪಕ್ಷದಲ್ಲಿದ್ದಾಗಲೂ ಈ ಬಗ್ಗೆ ಸಾಕಷ್ಟು ಗಮನ ಸೆಳೆದಿದ್ದೆವು. ಅದಕ್ಕೀಗ ಮುದ್ರೆ ಬಿದ್ದಿದೆ ಎಂದು ಹೇಳಿದರು.
ಕೊವಿಡ್ ಸಂದರ್ಭದಲ್ಲಿ ಮಾರುಕಟ್ಟೆ ದರಕ್ಕಿಂತ ಹೆಚ್ಚು ದರ ನೀಡಿ ವೈದ್ಯಕೀಯ ಸಾಧನಗಳು, ಉಪಕರಣಗಳನ್ನು ಖರೀದಿ ಮಾಡಲಾಗಿದೆ. ಬಿಜೆಪಿಯು ಹೆಣದ ಮೇಲೆ ಹಣ ಮಾಡಿದೆ. 49 ಕೋಟಿ ರೂಪಾಯಿ ವಸೂಲಿ ಮಾಡಲು ಕುನ್ಹಾ ಸಮಿತಿ ವರದಿ ನೀಡಿದೆ ಎಂದು ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆಯಲ್ಲಿ ಭಾರಿ ಮೊತ್ತದ ಭ್ರಷ್ಟಾಚಾರ ಆಗಿದೆ. ಪಿಪಿಇ ಕಿಟ್, ಸಿ.ಟಿ. ಸ್ಕ್ಯಾನರ್, ವೆಂಟಿಲೆಟರ್ ಖರೀದಿಯಲ್ಲಿ ಭಾರಿ ಮೊತ್ತದ ಅವ್ಯವಹಾರವಾಗಿದೆ. ಈಗಾಗಲೇ ಇಲಾಖೆ ಹಿಂದಿನ ಕಾರ್ಯದರ್ಶಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ವಿವರಿಸಿದರು.
ಅಂತಿಮ ವರದಿಯಲ್ಲಿ ಇನ್ನಷ್ಟು ಭ್ರಷ್ಟಾಚಾರ ಬಯಲು :
ಕಿದ್ವಾಯಿ ಅಸ್ಪತ್ರೆಯ ಆರ್ಟಿಪಿಸಿಆರ್ ಟೆಸ್ಟಿಂಗ್ನಲ್ಲಿ 200 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಅವ್ಯವಹಾರ ಮಾಡಲಾಗಿದೆ. ನ್ಯಾಯಮೂರ್ತಿ ಕುನ್ಹಾ ಸಮಿತಿ ನೀಡಿರುವುದು ಕೇವಲ ಮಧ್ಯಂತರ ವರದಿ. ಅಂತಿಮ ವರದಿಯಲ್ಲಿ ಇನ್ನು ಬಹಳಷ್ಟು ಭ್ರಷ್ಟಾಚಾರ ಬಯಲಾಗುತ್ತದೆ ಎಂದು ಶರಣ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.
ನ್ಯಾ.ಕುನ್ಹಾ ವಿರುದ್ಧ ಕೇಂದ್ರ ಸಚಿವರ ಹೇಳಿಕೆ ಆಕ್ಷೇಪಾರ್ಹ :
ನ್ಯಾ.ಕುನ್ಹಾ ಅವರು ಕಾಂಗ್ರೆಸ್ ಏಜೆಂಟ್ ರೀತಿ ವರದಿ ನೀಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ. ಪ್ರಹ್ಲಾದ್ ಜೋಶಿ ಓರ್ವ ಕೇಂದ್ರ ಮಂತ್ರಿಯಾಗಿ ಈ ರೀತಿ ಹೇಳಿಕೆ ನೀಡುವುದು ಎಷ್ಟು ಸರಿ. ಇದು ಆಕ್ಷೇಪಾರ್ಹ. ಅವರು ತಮ್ಮ ಸ್ಥಾನದ ಘನತೆಗೆ ತಕ್ಕಂತೆ ಹೇಳಿಕೆ ನೀಡಬೇಕು. ಈಗಾಗಲೇ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿಯದ್ದು ವಿಭಜನೆ ರಾಜಕಾರಣ :
ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿದ್ದಾರೆ. ಖುದ್ದು ಪ್ರಧಾನಿಯೇ ಗ್ಯಾರಂಟಿ ಅನುಷ್ಠಾನ ಮಾಡೋಕೆ ಆಗೊಲ್ಲ ಎಂದಿದ್ದರು. ಆದರೆ ಈಗ ನಮ್ಮ ಗ್ಯಾರಂಟಿ ಯೋಜನೆಗಳನ್ನು ಕಾಪಿ ಮಾಡುತ್ತಿದ್ದಾರೆ. ಸುಮ್ಮನೇ ನಮ್ಮ ರಾಜ್ಯ ದಿವಾಳಿಯಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ರಾಜ್ಯ ಎಲ್ಲಿ ದಿವಾಳಿಯಾಗಿದೆ ಎನ್ನುವುದನ್ನು ತೋರಿಸಬೇಕು. ಜನರನ್ನು ಪ್ರಧಾನಿ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸರಕಾರ ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ:
ಯಡಿಯೂರಪ್ಪ ಜೊತೆ ಕೈ ಜೋಡಿಸಿದ್ದೇ ಸರಕಾರ ಕೆಡವುದಕ್ಕೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ನಾವೇನು ಬಿಟ್ಟಿ ಬಂದಿದ್ದೀವಾ? ಕರುನಾಡಿನ ಮತದಾರರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಅಭೂತಪೂರ್ವ ಬೆಂಬಲ ಕೊಟ್ಟಿದ್ದಾರೆ ಎಂದು ಶರಣ ಪ್ರಕಾಶ್ ಪಾಟೀಲ್ ತಿರುಗೇಟು ನೀಡಿದರು.
ಅಬಕಾರಿ ಇಲಾಖೆಯಲ್ಲಿ ನಮ್ಮ ಸರಕಾರ 700 ಕೋಟಿ ರೂ.ವಸೂಲಿ ಮಾಡಿದೆ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದಾರೆ. ಇದು ಅಪ್ಪಟ ಸುಳ್ಳು. ರಾಜ್ಯದ ಬಿಜೆಪಿ ನಾಯಕರು ಪ್ರದಾನಿ ಬಾಯಿಯಿಂದ ಈ ರೀತಿ ಸುಳ್ಳು ಹೇಳಿಸುತ್ತಿದ್ದಾರೆ ಎಂದು ಡಾ.ಅಜಯ್ ಸಿಂಗ್ ಕಿಡಿಕಾರಿದರು