ದಕ್ಷಿಣ ಕನ್ನಡದಲ್ಲಿ 36 ಕಿಮೀ. ಕಡಲ್ಕೊರೆತ ಬಾಧಿತ ಪ್ರದೇಶ: ಕೇಂದ್ರ ಸಚಿವ ಕೀರ್ತಿವರ್ಧನ್ ಸಿಂಗ್
ಸಂಸದ ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಪರಿಸರ ಸಚಿವರ ಉತ್ತರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 36.66 ಕಿಮೀ. ಕರಾವಳಿ ಪ್ರದೇಶದಲ್ಲಿ 17.74 ಕಿಮೀ. ವ್ಯಾಪ್ತಿಯಲ್ಲಿ ಕಡೆಲ್ಕೊರೆತ ಸಂಭವಿಸುತ್ತಿರುವುದಾಗಿ ಕೇಂದ್ರ ಪರಿಸರ ಖಾತೆ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು ಸಂಸತ್ನ ಚಳಿಗಾಲದ ಅಧಿವೇಶದಲ್ಲಿ ಕೇಳಿದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿರುವ ಸಚಿವರು, ದಕ್ಷಿಣ ಕನ್ನಡದ ಸಮುದ್ರ ತೀರ ತೆಗದುಕೊಂಡರೆ ಶೇ.48.4ರಷ್ಟು ಭಾಗದಲ್ಲಿ ಸಮುದ್ರ ಕೊರೆತ ಉಂಟಾಗುತ್ತಿದೆ. ಭಾರತೀಯ ರಾಷ್ಟ್ರೀಯ ಸಮುದ್ರ ಮಾಹಿತಿ ಹಾಗೂ ಸೇವಾ ಸೆಂಟರ್(ಐಎನ್ಸಿಒಇಎಸ್)1990ರಿಂದ 2018ರವರೆಗೆ ಸಂಗ್ರಹಿಸಿರುವ ಉಪಗ್ರಹ ಆಧಾರಿತ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಮುದ್ರ ತೀರದಲ್ಲಿ ಕಡಲ್ಕೊರೆತ ಪ್ರಮಾಣ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ ಎಂದು ಮಾಹಿತಿ ನೀಡಿದ್ಧಾರೆ.
ದಕ್ಷಿಣ ಕನ್ನಡದಲ್ಲಿ ಕೇವಲ 8.02 ಕಿಮೀ. ದೂರ ಮಾತ್ರ ಯಾವುದೇ ಸವಕಳಿ ಸಂಭವಿಸಿದೆ ಸುರಕ್ಷಿತವಾಗಿದೆ. ಉಡುಪಿ ಜಿಲ್ಲೆಯಲ್ಲಿ 100.71 ಕಿಮೀ. ಸಮುದ್ರ ತೀರದಲ್ಲಿ 34.96 ಕಿಮೀ. ಉದ್ದಕ್ಕೆ ಕಡಲ್ಕೊರೆತ ಉಂಟಾಗಿದೆ. ದಕ್ಷಿಣ ಕನ್ನಡಕ್ಕೆ ಹೋಲಿಸಿದರೆ, ಉಡುಪಿಯಲ್ಲಿ 40.97 ಕಿಮೀ. ತೀರ ಪ್ರದೇಶ ಕಡಲ್ಕೊರೆತ ಅಪಾಯಕ್ಕೆ ಬಾಧಿತವಾಗಿಲ್ಲ. ಹೀಗಿರುವಾಗ, ಉತ್ತರ ಕನ್ನಡ ಒಳಗೊಂಡಂತೆ ಕರ್ನಾಟಕದ 313 ಕಿಮೀ. ಕರಾವಳಿ ತೀರ ಪ್ರದೇಶದ ಪೈಕಿ ಒಟ್ಟು 74.34 ಕಿಮೀ. ತೀರವು 74.34 ಕಿ.ಮೀ ವ್ಯಾಪ್ತಿಯಲ್ಲಿ ಸವಕಳಿ ಉಂಟಾಗಿ ಒಟ್ಟು ತೀರ ಪ್ರದೇಶದ ಶೇ.23.7ರಷ್ಟು ಭಾಗವು ಕಡಲ್ಕೊರೆ ತದ ಹೊಡೆತಕ್ಕೆ ಸಿಲುಕಿರುವುದಾಗಿ ಸಚಿವರು ಅಂಕಿ-ಅಂಶಗಳ ಮೂಲಕ ವಿವರಿಸಿದ್ದಾರೆ.
ಕರ್ನಾಟಕದ ಕರಾವಳಿಯಲ್ಲಿ ಉಂಟಾಗುತ್ತಿರುವ ಕಡಲ್ಕೊರೆತ ತಡೆಯುವುದಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾ ಗಿದೆ. ಮ್ಯಾಂಗ್ರೋವ್ ಹಾಗೂ ಅರಣ್ಯೀಕರಣದ ಮೂಲಕ ಅದರಲ್ಲಿಯೂ 2023ರ ಕೇಂದ್ರ ಬಜೆಟ್ನಲ್ಲಿ ಮ್ಯಾಂಗ್ರೋವ್ ಬೆಳೆಯುವುದಕ್ಕೆ ಮಿಶ್ತಿ (ಮ್ಯಾಂಗ್ರೋವ್ ಇನಿಶಿಯೇಟಿವ್ ಫಾರ್ ಶೋರ್ಲೈನ್ ಹ್ಯಾಬಿಟಾಟ್ಸ್ ಮತ್ತು ಟ್ಯಾಂಜಿಬಲ್ ಇನ್ಕಮ್ಸ್) ಎಂಬ ಯೋಜನೆ ಘೋಷಿಸಲಾಗಿತ್ತು. ಅಲ್ಲದೆ, ಕರಾವಳಿ ಪ್ರದೇದಲ್ಲಿ ವ್ಯಾಪಕವಾಗುತ್ತಿರುವ ಸಮುದ್ರ ಕೊರೆತ ತಡೆಗಟ್ಟುವುದಕ್ಕೆ ರಾಜ್ಯ ಸರಕಾರಕ್ಕೂ ಕೇಂದ್ರದಿಂದ ತಾಂತ್ರಿಕ ನೆರವು, ಅಗತ್ಯ ಸಲಹೆಗಳನ್ನು ನೀಡಲಾಗುತ್ತಿದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯು ಸೇರಿದಂತೆ ಕರಾವಳಿಯಲ್ಲಿ ಸಮುದ್ರ ಕೊರೆತ ಸೇರಿದಂತೆ ನಾನಾ ರೀತಿಯ ಪ್ರಾಕೃತಿಕ ವಿಕೋಪ ಗಳಿಂದ ಸಮುದ್ರದ ನೀರಿನ ಮಟ್ಟ ಜಾಸ್ತಿಯಾಗುತ್ತಿದೆಯೇ? ಈ ಬಗ್ಗೆ ವೈಜ್ಞಾನಿಕವಾಗಿ ಯಾವುದಾದರೂ ಅಧ್ಯಯನ ಗಳನ್ನು ನಡೆಸಲಾಗಿದೆಯೇ ಅಥವಾ ನಿರಂತರವಾಗಿ ಸಂಭವಿಸುತ್ತಿರುವ ಕಡಲ್ಕೊರೆತದಿಂದ ಕರಾವಳಿ ತೀರವನ್ನು ರಕ್ಷಿಸು ವುದಕ್ಕೆ ಯಾವೆಲ್ಲ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಕ್ಯಾ. ಚೌಟ ಅವರು ಸಚಿವರಲ್ಲಿ ಮಾಹಿತಿ ಕೇಳಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಅರ್ಧಕ್ಕಿಂತ ಹೆಚ್ಚು ಕರಾವಳಿ ಪ್ರದೇಶವು ಭೂ ಕ್ಷಯದ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಸಿಕ್ಕಿದ ಉತ್ತರದಿಂದ ಬೆಳಕಿಗೆ ಬಂದಿದೆ ಎಂದು ಸಂಸದ ಚೌಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.