ಜ.13-15: ದ.ಕ., ಉಡುಪಿ ಜಿಲ್ಲೆಯಲ್ಲಿ ಇಹ್ಸಾನ್ ಸ್ನೇಹ ಸಂಚಾರ
ಮಂಗಳೂರು, ಜ.11: ಕರ್ನಾಟಕ ಕಲ್ಚರಲ್ ಫೌಂಡೇಶನ್, ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನೀ ಯುವಜನ ಸಂಘ, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಸಂಘಟನೆಗಳ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿರುವ ಪ್ರದೇಶಗಳನ್ನು ಗುರುತಿಸಿ ಸಮುದಾಯದ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುತ್ತಿರುವ ಇಹ್ಸಾನ್ ಕರ್ನಾಟಕ ಸಂಸ್ಥೆಯು ಸುಮಾರು 12 ವರ್ಷಗಳಿಂದ ಕಾರ್ಯಾಚರಿಸಿಕೊಂಡು ಬರುತ್ತಿವೆ. ಸಂಸ್ಥೆಯ ಅಧೀನದಲ್ಲಿ ಕಲಿಯುತ್ತಿರುವ ಮಕ್ಕಳ ಸುಪ್ತ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜ.19 ಮತ್ತು 20ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯುವ ಇಹ್ಸಾನೋತ್ಸವದ ಅಂಗವಾಗಿ ಜ.13ರಿಂದ 15ರವರೆಗೆ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಇಹ್ಸಾನ್ ಸ್ನೇಹ ಸಂಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಇಹ್ಸಾನ್ ಸ್ನೇಹ ಸಂಚಾರ ಸಮಿತಿಯ ಚೀಫ್ ಕೋಆರ್ಡಿನೇಟರ್ ಹಾಫಿಳ್ ಯಾಕೂಬ್ ಸಅದಿ ನಾವೂರು ಹೇಳಿದ್ದಾರೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಮಾಡಿದ ಅವರು ಉತ್ತರ ಕರ್ನಾಟಕದ 8 ಜಿಲ್ಲೆಗಳಲ್ಲಿ 18ರಷ್ಟು ಧಾರ್ಮಿಕ ಲೌಕಿಕ ಸಮನ್ವಯ ಕೇಂದ್ರಗಳು ಕಾರ್ಯಾಚರಿಸುತ್ತಿದೆ. ಈ ಕೇಂದ್ರ ಗಳಲ್ಲಿರುವ 4,500ರಷ್ಟು ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಅವರಲ್ಲಿ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಅಂತರ್ ಕ್ಯಾಂಪಸ್ ಪ್ರತಿಭಾ ಸಂಗಮ ಹಾಗೂ ಇಹ್ಸಾನೋತ್ಸವ-25 ಸಾರ್ವಜನಿಕ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಜ.13ರಂದು ಬೆಳಗ್ಗೆ 9ಕ್ಕೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಝಿಯಾರತ್‌ನೊಂದಿಗೆ ಸ್ನೇಹ ಸಂಚಾರಕ್ಕೆ ಚಾಲನೆ ನೀಡಲಾಗುತ್ತದೆ. ಸಯ್ಯಿದ್ ಮದನಿ ದರ್ಗಾದ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ ಧ್ವಜ ಹಸ್ತಾಂತರ ಮಾಡಲಿದ್ದಾರೆ. ಸಯ್ಯಿದ್ ಜಲಾಲುದ್ದೀನ್ ತಂಙಳ್ ದುಆ ಮಾಡಲಿದ್ದಾರೆ. ಶಿಹಾಬುದ್ದೀನ್ ಸಖಾಫಿ ಉಳ್ಳಾಲ, ಡಾ.ಎಂಎಸ್‌ಎಂ ಝೈನಿ ಕಾಮಿಲ್, ಎನ್‌ಕೆಎಂ ಶಾಫಿ ಸಅದಿ ಬೆಂಗಳೂರು, ಎಸ್‌ವೈಎಸ್ ರಾಜ್ಯಾಧ್ಯಕ್ಷ ಎಂವೈ ಹಫೀಳ್ ಸಅದಿ ಕೊಡಗು, ಕೆಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಹಾಜಿ ಶೇಕ್ ಬಾವ ಮಂಗಳೂರು, ಎನ್‌ಎಸ್ ಅಬ್ದುಲ್ಲಾ ಹಾಜಿ , ಇಕ್ಬಾಲ್ ಕಾಜೂರು, ಸಯ್ಯಿದ್ ಖುಬೈಬ್ ತಂಳ್, ಬಶೀರ್ ಸಖಾಫಿ, ಇಸಾಕ್ ಹಾಜಿ, ಇಬ್ರಾಹೀಂ ಅಹ್ಸನಿ ಮತ್ತಿತರರು ಭಾಗವಹಿಸಲಿದ್ದಾರೆ. ಅಂದು ಸಂಜೆ 6ಕ್ಕೆ ಉಪ್ಪಿನಂಗಡಿಯ ಕುಪ್ಪೆಟ್ಟಿಯಲ್ಲಿ ಸಮಾರೋಪ ಗೊಳ್ಳಲಿದೆ.
ಜ.14ರಂದು ಬೆಳಗ್ಗೆ ಉಜಿರೆಯಿಂದ ಪ್ರಾರಂಭಗೊಂಡು ಸಂಜೆ ಮೂಡಬಿದಿರೆಯಲ್ಲಿ ಸಮಾರೋಪಗೊಳ್ಳಲಿದೆ. ಜ.15ರಂದು ಬೆಳಗ್ಗೆ ಕಾರ್ಕಳದ ಸಾಣೂರಿನಿಂದ ಆರಂಭಗೊಂಡು ಸಂಜೆ ಕುಂದಾಪುರ ಕೋಡಿಯಲ್ಲಿ ಸಮಾರೋಪಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಇಹ್ಸಾನೋತ್ಸವ ಸಮಿತಿಯ ಸಂಚಾಲಕ ಡಾ. ಎಂಎಸ್‌ಎಂ ಝೈನಿ ಕಾಮಿಲ್, ಇಹ್ಸಾನ್ ಸ್ನೇಹ ಸಂಚಾರ ಸಮಿತಿಯ ಅಧ್ಯಕ್ಷ ಎಂಪಿಎಂ ಅಶ್ರಫ್ ಸಅದಿ ಮಲ್ಲೂರು, ಸಮಿತಿಯ ಜನರಲ್ ಕನ್ವೀನರ್ ಸಿಎಚ್ ಮುಹಮ್ಮದಲಿ ಸಖಾಫಿ ಅಶ್ಹರಿಯ್ಯಾ, ಇಹ್ಸಾನೋತ್ಸವ ಸಮಿತಿಯ ಕೋಆರ್ಡಿನೇಟರ್‌ಗಳಾದ ಅಶ್ರಫ್ ಕಿನಾರ, ಸಲೀಂ ಕನ್ಯಾಡಿ, ಇಹ್ಸಾನ್ ಸ್ನೇಹ ಸಂಚಾರ ಸಮಿತಿಯ ಸದಸ್ಯರಾದ ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ, ಮುತ್ತಲಿಬ್ ಮೂಡುಬಿದಿರೆ ಉಪಸ್ಥಿತರಿದ್ದರು.