ಜ.14-15: ಬಿಕರ್ನಕಟ್ಟೆಯ ಬಾಲ ಯೇಸುವಿನ ವಾರ್ಷಿಕ ಮಹೋತ್ಸವ
ಮಂಗಳೂರು, ಜ.2: ಬಿಕರ್ನಕಟ್ಟೆಯ ಕಾರ್ಮೆಲ್ ಹಿಲ್ ಬಾಲ ಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಜ.14 ಮತ್ತು 15 ರಂದು ನಡೆಯಲಿದೆ ಎಂದು ಕ್ಷೇತ್ರದ ಮುಖ್ಯಸ್ಥ ವಂ. ಮೆಲ್ವಿನ್ ಡಿಕುನ್ಹ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಜ. 14ರಂದು ಸಂಜೆ 6ಕ್ಕೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನು ಝಾನ್ಸಿ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಅತೀ ವಂ. ವಿಲ್ಫ್ರೆಡ್ ಗ್ರೆಗೋರಿ ಮೊರಾಸ್ ನೆರವೇರಿಸುವರು ಹಾಗೂ ಆ ದಿನ ಬೆಳಗ್ಗೆ 10.30 ಕ್ಕೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ನಿವೃತ್ತ ಧರ್ಮಾಧ್ಯಕ್ಷ ಅತೀ ವಂ.ಡಾ.ಅಲೋಶಿಯಸ್ ಪಾಲ್ ಡಿಸೋಜ ಬಲಿಪೂಜೆ ನೆರವೇರಿಸಲಿದ್ದು, ಇದು ಮಕ್ಕಳಿಗಾಗಿ ಅರ್ಪಿಸಲಾಗುವ ವಿಶೇಷ ಪ್ರಾರ್ಥನಾವಿಧಿಯಾಗಿರುತ್ತದೆ ಎಂದು ಅವರು ಹೇಳಿದರು.
ಜ.15ರಂದು ಬೆಳಗ್ಗೆ 10.30ಕ್ಕೆ ಪಶ್ಚಿಮ ಬಂಗಾಳದ ಅಸನ್ಸೋಲ್ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತೀ ವಂ.ಎಲಿಯಾಸ್ ಫ್ರ್ಯಾಂಕ್ ಬಲಿಪೂಜೆ ನೆರವೇರಿಸಲಿದ್ದು, ಇದು ಅನಾರೋಗ್ಯ ಪೀಡಿತರಿಗಾಗಿನ ವಿಶೇಷ ಪೂಜಾವಿಧಿಯಾಗಿರುತ್ತದೆ. ಮಹೋತ್ಸವದ ಸಮಾರೋಪ ಪ್ರಾರ್ಥನಾವಿಧಿ ಸಂಜೆ 6ಕ್ಕೆ ಕಾರ್ಮೆಲ್ ಸಭೆಯ ಅತೀ ವಂ.ರುಡೋಲ್ಫ್ ಡಿಸೋಜ ನೆರವೇರಿಸುವರು.
ಜನವರಿ 14ರಂದು ಬೆಳಗ್ಗೆ 6ಕ್ಕೆ(ಕೊಂಕಣಿ), 7.30 (ಇಂಗ್ಲಿಷ್), 9ಕ್ಕೆ (ಕೊಂಕಣಿ), 1ಕ್ಕೆ(ಕನ್ನಡ). 10.30ರ ಮಕ್ಕಳಿಗಾಗಿನ ವಿಶೇಷ ಬಲಿಪೂಜೆ ಕೊಂಕಣಿಯಲ್ಲಿ ನೆರವೇರುವುದು. ಈ ದಿನದ ಆರಂಭಿಕ ಪೂಜಾವಿಧಿಯನ್ನು ಬೆಳಗ್ಗೆ 6ಕ್ಕೆ ಬಳ್ಳಾರಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತಿ ವಂ. ಡಾ.ಹೆನ್ರಿ ನೆರವೇರಿಸಲಿರುವರು.
ಜ.15ರಂದು ಬೆಳಗ್ಗೆ 6.30, 7.30, 9ಕ್ಕೆ ಕೊಂಕಣಿಯಲ್ಲಿ, 10.30ಕ್ಕೆ ರೋಗಿಗಳಿಗಾಗಿನ ವಿಶೇಷ ಪೂಜೆ ಹಾಗೂ 1ಕ್ಕೆ ಮಲಯಾಳಂ ಭಾಷೆಯಲ್ಲಿ ಪೂಜೆ ನೆರವೇರಲಿದೆ.
ಈ ಎರಡು ದಿನಗಳ ವಾರ್ಷಿಕ ಮಹೋತ್ಸವಕ್ಕಾಗಿ ನವೇನಾ ಪ್ರಾರ್ಥನೆ ಜನವರಿ 5ರಿಂದ ಜನವರಿ 13ರ ವರೆಗೆ ನಡೆಯುವುದು. ಆ ದಿನಗಳಲ್ಲಿ ಪ್ರತಿದಿನ 9 ಪ್ರಾರ್ಥನಾವಿಧಿಗಳು ನಡೆಯಲಿವೆ ಎಂದು ಅವರು ವಿವರಿಸಿದರು.
ಪರಮ ಪ್ರಸಾದದ ಆರಾಧನೆ ಪ್ರತಿ ನವೆನಾ ದಿನಗಳಲ್ಲಿ 11:30 ರಿಂದ 12:45ರವರೆಗೆ ನಡೆಯುವುದು. ಈ ವೇಳೆ ವಿವಿಧ ಅಗತ್ಯಗಳಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು.
ದಿವ್ಯಬಾಲ ಯೇಸುವಿನ ಮೆರವಣಿಗೆಯನ್ನು ಪ್ರತಿದಿನ ಸಂಜೆಯ 6ಕ್ಕೆ ಬಲಿಪೂಜೆಯ ಬಳಿಕ ಹಮ್ಮಿಕೊಳ್ಳಲಾಗಿದೆ.
ಮಹೋತ್ಸವದ ಹೊರೆಕಾಣಿಕೆಯು ಜನವರಿ 4ರಂದು ಸಂಜೆ 4.30ಕ್ಕೆ ಕುಲಶೇಖರದ ಹೋಲಿಕ್ರಾಸ್ ಚರ್ಚ್ ನಿಂದ ನಡೆಯಲಿದೆ. ಹೊರೆಕಾಣಿಯ ಅಂತಿಮಭಾಗದಲ್ಲಿ ಸರ್ವಧರ್ಮ ಪ್ರಾರ್ಥನಾಕೂಟ ಹಾಗೂ ಧ್ವಜಾರೋಹಣ ಪುಣ್ಯಕ್ಷೇತ್ರದ ಅಂಗಳದಲ್ಲಿ ನಡೆಯಲಿದೆ. ಜನವರಿ 5 ರಿಂದ 15ರ ವರೆಗೆ ಮಧ್ಯಾಹ್ನದ ವೇಳೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯು ನಡೆಯುವುದು ಎಂದು ಅವರು ಹೇಳಿದರು.
ಯೇಸುಕ್ರಿಸ್ತರ ಜನನದ 2025ನೇ ಜ್ಯುಬಿಲಿ ವರ್ಷದ ಅಂಗವಾಗಿ ಒಂದು ಬಡ ಕುಟುಂಬಕ್ಕೆ ಸಂಪೂರ್ಣ ಮನೆಯನ್ನು ಕಟ್ಟಿಕೊಡುವ ಯೋಜನೆ (ಇನ್ಫೆಂಟ್ ಜೀಸಸ್ ಜ್ಯುಬಿಲಿ ಹೌಸಿಂಗ್ ಪ್ರಾಜೆಕ್ಟ್ ) ಹಾಗೂ ಕಾರ್ಮೆಲ್ ಸಭೆಯ ಲಿಸಿಯಾದ ಸಂತ ತೆರೇಸಾ ಅವರನ್ನು ಸಂತಪದವಿಗೆ ಏರಿಸಿ ಶತಮಾನೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಸುಮಾರು 100 ಮಂದಿಗೆ ವಿಧ್ಯಾರ್ಥಿ ವೇತನ (ಸೆಂಟ್ ತೆರೇಸ್ ಸೆಂಟಿನರಿ ಮೆಮೋರಿಯಲ್ ಸ್ಕಾಲರ್ಶಿಪ್ ಪ್ರಾಜೆಕ್ಟ್) ವಿತರಿಸಲಾಗುವುದು. ಈ ಎರಡೂ ಕಾರ್ಯಕ್ರಮದ ಅಂಗವಾಗಿ ವಿಶೇಷ ವಸ್ತುಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಾಲಯೇಸು ಕ್ಷೇತ್ರದ ವಂ. ಮೆಲ್ವಿನ್ ಡಿಕುನ್ಹ ತಿಳಿಸಿದರು.
ರಕ್ತದಾನ ಹಾಗೂ ಕೇಶದಾನ ಶಿಬಿರ
ಮಹೋತ್ಸವದ ಅಂಗವಾಗಿ ಜನವರಿ 9 ಹಾಗೂ 10 ರಂದು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1ರವರೆಗೆ ರಕ್ತದಾನ ಹಾಗೂ ಕೇಶದಾನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಅವರುಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ನಿರ್ದೇಶಕ ವಂ. ಸ್ಟೀವನ್ ಪಿರೇರ, ಸ್ಟ್ಯಾನ್ಲಿ ಬಂಟ್ವಾಳ ಉಪಸ್ಥಿತರಿದ್ದರು.