ಇಸ್ರೇಲ್ನಲ್ಲಿ ಸಿಲುಕಿಕೊಂಡಿರುವ ದಕ್ಷಿಣ ಕನ್ನಡದ 58 ಮಂದಿ ಜಿಲ್ಲಾಡಳಿತಕ್ಕೆ ಮಾಹಿತಿ
ಫೈಲ್ ಫೋಟೊ
ಮಂಗಳೂರು, ಅ.10: ಯುದ್ಧ ಪೀಡಿತ ಇಸ್ರೇಲ್ನಲ್ಲಿ ಸಿಲುಕಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ 58 ಮಂದಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾದ ಕಂಟ್ರೋಲ್ ರೂಂ.ನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ವ್ಯಾಪಾರ, ಶಿಕ್ಷಣ, ಉದ್ಯೋಗ ಮತ್ತು ಇತರ ಉದ್ದೇಶಗಳಿಗಾಗಿ ವಿವಿಧ ಕಾರಣಗಳಿಗಾಗಿ ಇಸ್ರೇಲ್ಗೆ ತೆರಳಿ ನೆಲೆಸಿರುವ ದ.ಕ.ಜಿಲ್ಲೆಯವರು ಮಾಹಿತಿ ನೀಡುವಂತೆ ದ.ಕ. ಜಿಲ್ಲಾ ಪ್ರಭಾರ ಜಿಲ್ಲಾಧಿಕಾರಿ ಡಾ.ಆನಂದ.ಕೆ ರವಿವಾರ ರಾತ್ರಿ ಮಾಧ್ಯಮ ಮೂಲಕ ಪ್ರಕಟನೆ ನೀಡಿ ಮನವಿ ಮಾಡಿದ್ದರು.
ಇಸ್ರೇಲ್ನಲ್ಲಿ ಎಷ್ಟು ಮಂದಿ ನೆಲೆಸಿದ್ದಾರೆ ಎನ್ನುವ ಸ್ಪಷ್ಟ ಮಾಹಿತಿ ಜಿಲ್ಲಾಡಳಿತಕ್ಕೆ ಇಲ್ಲದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ತೆರೆದಿರುವ ಕಂಟ್ರೋಲ್ ರೂಂ. ಸಂಖ್ಯೆ: 1077/ 0824-2442590 ದೂರವಾಣಿ ಸಂಖ್ಯೆಗೆ ಕರೆ ಮಾಹಿತಿ ನೀಡುವಂತೆ ಕೋರಲಾಗಿತ್ತು.
ಜಿಲ್ಲಾಧಿಕಾರಿ ಪ್ರಕಟನೆ ನೀಡಿದ ಬೆನ್ನೆಲ್ಲೆ ಇಸ್ರೇಲ್ನಲ್ಲಿ ಸಿಲುಕಿಕೊಂಡಿರುವ ದ.ಕ. ಜಿಲ್ಲೆಯ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಂಗೆ ಮಾಹಿತಿ ನೀಡಲಾರಂಭಿಸಿದ್ದಾರೆ. ಸಿಲುಕಿಕೊಂಡವರ ಸಂಬಂಧಿ ಕರು ಸಂಪರ್ಕಿಸಿದ್ದಾರೆ. ರಾತ್ರಿ ತನಕ 58 ಮಂದಿ ಮಾಹಿತಿ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಆನಂದ್ ಕೆ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಜಿಲ್ಲಾಡಳಿತವನ್ನು ದೊರೆತ ಮಾಹಿತಿಯನ್ನು ರಾಜ್ಯ ಸರಕಾರಕ್ಕೆ ಕಳುಹಿಸಲಾಗುತ್ತಿದೆ. ಹೆರ್ಜಿಲಿಯಾ, ಟೆಲ್ ಅವೀವ್, ಬಟ್ಯಾಮ್, ನೆತನ್ಯಾ, ರಮತ್ ಹಶರೋವ್ ಮತ್ತು ಹಮೋಶಾವಾದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರು ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ದೊರೆತಿದೆ.