ಹರ್ಷೇಂದ್ರ ಕುಮಾರ್ ಅವರಿಗೆ ಮಂಜೂರಾಗಿದ್ದ 7.59 ಎಕರೆ ದರ್ಖಾಸ್ತು ರದ್ದು
ಸರಕಾರಕ್ಕೆ ಸ್ವಾಧೀನಪಡಿಸಲು ಪುತ್ತೂರು ಎ.ಸಿ. ಕೋರ್ಟ್ ಆದೇಶ

ಬೆಳ್ತಂಗಡಿ; ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಇವರಿಗೆ ಧರ್ಮಸ್ಥಳ ಗ್ರಾಮದ ಸ.ನಂ.61/1ಎ ರಲ್ಲಿ ಸರ್ಕಾರದಿಂದ ಮಂಜೂರಾಗಿದ್ದ 7.59 ಎಕ್ರೆ ಜಮೀನು ಮಂಜೂರಾತಿ ಆದೇಶವನ್ನು ರದ್ದುಪಡಿಸಿ ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯವು ಆದೇಶ ನೀಡಿದೆ. ದಾಖಲೆಗಳ ಮತ್ತು ಕಾನೂನಿನ ಆಧಾರದಲ್ಲಿ ಜಮೀನು ಮಂಜೂರಾಗಿರುವುದನ್ನು ರದ್ದುಪಡಿಸಿ 2025 ಜ.21 ರಂದು ಆದೇಶ ನೀಡಿದ್ದು, ಸದ್ರಿ ಜಮೀನನನ್ನು ಋಣಮುಕ್ತವಾಗಿ ಸರಕಾರದ ಸ್ವಾಧೀನಕ್ಕೆ ಪಡೆದು, ಸರಕಾರಿ ಖಾತೆಗೆ ಪಹಣಿ ದಾಖಲು ಮಾಡಲು ಆದೇಶಿಸಲಾಗಿದೆ.
ಹರ್ಷೇಂದ್ರ ಕುಮಾರ್ ಅವರು ಕಾನೂನು ಬಾಹಿರವಾಗಿ ಜಮೀನು ಪಡೆದಿದ್ದಾರೆ ಎಂದು ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಇವರು ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಆಯುಕ್ತರು ಇದರ ವಿಚಾರಣೆ ಬಗ್ಗೆ ಹರ್ಷೇಂದ್ರ ಕುಮಾರ್ ಅವರಿಗೆ ನೋಟೀಸು ಕೊಟ್ಟಿದ್ದರು. ಆದರೆ ಇದರ ವಿರುದ್ಧ ಹರ್ಷೇಂದ್ರ ಅವರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ (WP: 42434/2016) ಸಲ್ಲಿಸಿ, ತಾನು ಭೂರಹಿತ ಎಂದೂ, ಪ್ರಕರಣ ಆದ 4 ದಶಕಗಳ ನಂತರ ನೀಡಿದ ನೋಟೀಸು ಅವಧಿ ಬಾಧಿತವಾಗಿದೆ ಎಂದೂ ವಾದಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ರಿಟ್ ಅರ್ಜಿ ಮುಕ್ತಾಯಗೊಳಿಸಿ (ಡಿಸ್‌ಪೋಸ್ ಮಾಡಿ) ದೂರನ್ನು ಇತ್ಯರ್ಥಪಡಿಸಲು ಪುತ್ತೂರು ಸಹಾಯಕ ಆಯುಕ್ತರಿಗೆ ಸೂಕ್ತ ನಿರ್ದೇಶನಗಳೊಂದಿಗೆ 2022 ಜುಲೈ 4 ರಂದು ಮರು ರವಾನಿಸಿತ್ತು.
ಪ್ರಕರಣವನ್ನು (ಎಡಿಸ್.ಎಲ್‌ಎಲ್‌ಡಿಸಿಆರ್: 614,706/2014-15) ಮರು ವಿಚಾರಣೆಗೆ ಕೈಗೆತ್ತಿಕೊಂಡ ಸಹಾಯಕ ಆಯುಕ್ತರ ನ್ಯಾಯಾಲಯವು ದಾಖಲೆಗಳ ಮತ್ತು ಕಾನೂನಿನ ಆಧಾರದಲ್ಲಿ ಜಮೀನು ಮಂಜೂರಾಗಿರುವುದನ್ನು ರದ್ದುಪಡಿಸಿ 2025 ಜ. 21 ರಂದು ಆದೇಶ ನೀಡಿದೆ. ಸದ್ರಿ ಜಮೀನನನ್ನು ಋಣಮುಕ್ತವಾಗಿ ಸರಕಾರದ ಸ್ವಾಧೀನಕ್ಕೆ ಪಡೆದು, ಸರಕಾರಿ ಖಾತೆಗೆ ಪಹಣಿ ದಾಖಲು ಮಾಡಲು ಆದೇಶಿಸಲಾಗಿದೆ.
ಹರ್ಷೇಂದ್ರ ಕುಮಾರ್ ಅವರು ಸುಳ್ಳು ದಾಖಲೆಗಳನ್ನು ನೀಡಿ ಹಲವು ವಿಚಾರಗಳನ್ನು ಮರೆಮಾಚಿ ಕಾನೂನು ಬಾಹಿರವಾಗಿ ಸರಕಾರದಿಂದ ಜಮೀನನ್ನು ಪಡೆದುಕೊಂಡಿರುವುದಾಗಿ ಕಂಡುಕೊಂಡ ಹಿನ್ನಲೆಯಲ್ಲಿ ಸಹಾಯಕ ಕಮಿಷನರ್ ಅವರ ನ್ಯಾಯಾಲಯ ಈ ಆದೇಶವನ್ನು ನೀಡಿದೆ ಎನ್ನಲಾಗಿದೆ.
ಮೇಲ್ಮನವಿದಾರರ ಪರವಾಗಿ ವಕೀಲರಾದ ಕೆ. ಭಾಸ್ಕರ ಹೊಳ್ಳ ಮತ್ತು ನಾಗರಿಕ ಸೇವಾ ಟ್ರಸ್ಟ್ ನ ರಂಜನ್ ರಾವ್ ಯರ್ಡೂರ್ ವಾದಿಸಿದ್ದರು.