ಪರಿಯಾಲ್ತಡ್ಕದ ವೃದ್ಧ ದಂಪತಿಗೆ ಹಲ್ಲೆ ಪ್ರಕರಣ | ಆರೋಪಿತ ಪಾದ್ರಿ ಹುದ್ದೆಯಿಂದ ತೆರವು: ಮಂಗಳೂರು ಕ್ರೈಸ್ತ ಧರ್ಮಪ್ರಾಂತ ಹೇಳಿಕೆ
* ಸುಳ್ಳು ವದಂತಿಗೆ ಕಿವಿಗೊಡದಿರಿ: ಪೊಲೀಸರ ಸ್ಪಷ್ಟನೆ
ವೈರಲ್ ವೀಡಿಯೊದ ಸ್ಕ್ರೀನ್ ಶಾಟ್
ಮಂಗಳೂರು, ಮಾ. 2: ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ವಿಟ್ಲದ ಪರಿಯಾಲ್ತಡ್ಕ ಮನೇಲಾದ ಕ್ರೈಸ್ಟ್ ದಿ ಕಿಂಗ್ ಚರ್ಚ್ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯಿಂದ ನೋವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿತ ಪಾದ್ರಿಯನ್ನು ಸಂಬಂಧಪಟ್ಟ ಚರ್ಚ್ ನ ಧಾರ್ಮಿಕ ಹುದ್ದೆಯಿಂದ ತಕ್ಷಣದಿಂದ ಅನ್ವಯವಾಗುವಂತೆ ತೆರವುಗೊಳಿಸುತ್ತಿರುವುದಾಗಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ(ಡಯಾಸಿಸ್ ಆಫ್ ಮಂಗಳೂರು)ದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಫಾ.ಜೆ.ಬಿ.ಸಲ್ದಾನ ಮತ್ತು ರೊನಾಲ್ಡ್ ಕ್ಯಾಸ್ತಲಿನೊ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿದ್ದೇವೆ. ಈ ಪ್ರಕರಣ ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ್ದಾಗಿದೆ. ಈ ಕುರಿತಾಗಿ ಕಾನೂನು ಕ್ರಮ ಕೈಗೊಳ್ಳುತ್ತಿರುವ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಸರಕಾರಿ ಇಲಾಖೆಗಳು ಆರಂಭಿಸಿರುವ ತನಿಖೆಯ ಜತೆಗೆ ಪ್ರಕರಣದ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಲು ಕ್ರೈಸ್ತ ಧರ್ಮಪ್ರಾಂತದ ಆಂತರಿಕ ಸಮಿತಿಯೂ ವಿಚಾರಣೆ ನಡೆಸಲಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪರಿಯಾಲ್ತಡ್ಕ ಮನೇಲಾದ ಕ್ರೈಸ್ಟ್ ದಿ ಕಿಂಗ್ ಚರ್ಚ್ ನ ಪಾದ್ರಿ ನೆಲ್ಸನ್ ಒಲಿವೆರಾ ಎಂಬವರು ಫೆ.29ರಂದು ಬೆಳಗ್ಗೆ ವೃದ್ಧ ದಂಪತಿಯೊಂದರ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದರೆನ್ನಲಾದ ಸಿಸಿಟಿವಿ ವೀಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾದ್ರಿಯು ವೃದ್ಧರೊಬ್ಬರಿಗೆ ಹಲ್ಲೆ ನಡೆಸಿದ್ದಲ್ಲದೆ, ಕುತ್ತಿಗೆ ಪಟ್ಟಿ ಹಿಡಿದು ಎಳೆದೊಯ್ದು ತೀವ್ರ ಹಲ್ಲೆ ನಡೆಸಿರುವುದು, ಪತಿಯ ರಕ್ಷಣೆಗೆ ಮುಂದಾದ ವೃದ್ಧ ಮಹಿಳೆಗೂ ಪಾದ್ರಿ ಒದೆಯುವುದು ವೀಡಿಯೊದಲ್ಲಿ ಸೆರೆಯಾಗಿದೆ.
ಈ ವಿಚಾರವಾಗಿ ಸಂತ್ರಸ್ತ ದಂಪತಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಸುಳ್ಳು ವದಂತಿಗೆ ಕಿವಿಗೊಡದಿರಿ: ಪೊಲೀಸರ ಸ್ಪಷ್ಟನೆ
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಯಾಲ್ತಡ್ಕ ಎಂಬಲ್ಲಿ ಧಾರ್ಮಿಕ ವ್ಯಕ್ತಿಯೊಬ್ಬರು ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ. ಈ ವೀಡಿಯೋದಲ್ಲಿ ಹಲ್ಲೆ ನಡೆಸುತ್ತಿರುವ ವ್ಯಕ್ತಿ ಹಾಗೂ ಹಲ್ಲೆಗೊಳಗಾದವರು ಒಂದೇ ಕೋಮಿಗೆ ಸೇರಿದವರು. ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲುಗೊಂಡಿದ್ದು, ತನಿಖೆ ನಡೆಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.