ಏಕಸ್ವಾಮ್ಯದಿಂದ ಮಾಧ್ಯಮ ಸ್ವಾತಂತ್ರ್ಯಕ್ಕೆ ಅಪಾಯ: ಡಾ. ಸಿಂಧು ಮಂಜೇಶ್
ಪಿಪಿ ಗೋಮತಿ ಸ್ಮಾರಕ ವಾರ್ಷಿಕ ಉಪನ್ಯಾಸ ಕಾರ್ಯಕ್ರಮ
ಮಂಗಳೂರು, ನ. 28: ದೇಶದಲ್ಲಿ ಮುಖ್ಯ ವಾಹಿನಿಯಲ್ಲಿರುವ ಸುದ್ದಿ ಹಾಗೂ ದೃಶ್ಯ ಮಾಧ್ಯಮವಿಂದು ಕಾರ್ಪೊರೇಟ್ ಉದ್ಯಮಿಗಳ ನಿಯಂತ್ರಣಕ್ಕೊಳಪಟ್ಟು ಏಕಸ್ವಾಮ್ಯಕ್ಕೆ ಗುರಿಯಾಗಿರುವ ಕಾರಣ ಮಾಧ್ಯಮ ಸ್ವಾತಂತ್ರ್ಯ ಅಪಾಯದಲ್ಲಿದೆ ಎಂದು ಫುಲ್‌ಬ್ರೈಟ್ ಹ್ಯಾಂಪರಿ ಫೋಲೋ ಪ್ರಶಸ್ತಿ ವಿಜೇತ ಪತ್ರಕರ್ತೆ, ಮ್ಯಾನೆ ವಿಶ್ವವಿದ್ಯಾನಿಲಯದ ಮಾಜಿ ಉಪನ್ಯಾಸಕಿ ಡಾ. ಸಿಂಧು ಮಂಜೇಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಪಿಪಿ ಗೋಮತಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಭಾಗಿತ್ವದಲ್ಲಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಮಂಗಳವಾರ ಪಿಪಿ ಗೋಮತಿ ಸ್ಮಾರಕ ವಾರ್ಷಿಕ ಉಪನ್ಯಾಸ 2023ರಲ್ಲಿ ‘ಭಾರತದಲ್ಲಿ ಸುದ್ದಿ ಮಾಧ್ಯಮ: ಭವಿಷ್ಯದ ಮೇಲೆ ವಿಶೇಷ ಗಮನದೊಂದಿಗೆ ಆರೋಗ್ಯಕರ ವರದಿ’ ಎಂಬ ವಿಷಯದ ಬಗ್ಗೆ ಅವರು ಬೆಳಕು ಚೆಲ್ಲಿದರು.
ದೇಶದಲ್ಲಿ ಕೇಬಲ್ ರೆಗ್ಯುಲೇಶನ್ ಕಾಯ್ದೆಯಡಿ ಟಿವಿ ಮಾಧ್ಯಮ ಕೇಬಲ್ ನೆಟ್‌ವರ್ಕ್‌ಗಳ ಡಿಜಿಟೈಸೇಶನ್ ಕಾರ್ಯ ರಿಲಾಯೆನ್ಸ್ ಮೂಲಕ ಕಾರ್ಪೊರೇಟ್ ನಿಯಂತ್ರಣಕ್ಕೊಳಪಟ್ಟಿತು. ಇದಾಗಿ ಕೆಲ ಸಮಯದಲ್ಲೇ ಅದಾನಿ ಸಂಸ್ಥೆಯು ದೇಶದ ಪ್ರಮುಖ ಟಿವಿ ಮಾಧ್ಯಮವಾದ ಎನ್‌ಡಿಟಿವಿಯನ್ನು ಖರೀದಿಸಿತು. ಈ ಮೂಲಕ ಸ್ವಾತಂತ್ರ್ಯ, ನಿರ್ಭೀತವಾಗಿ ಕಾರ್ಯನಿರ್ವಹಿಸಬೇಕಾದ ಮಾಧ್ಯಮವು ಕಾರ್ಪೊರೇಟ್ ಸಂಸ್ಥೆಯ ಅಡಿಯಾಳಾಗಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಇಂದು ನಾವು ಕಾಣುತ್ತಿದ್ದೇವೆ ಎಂದು ಅವರು ವಿಶ್ಲೇಷಿಸಿದರು.
ಇಂತಹ ವ್ಯವಸ್ಥೆ ನಮ್ಮಲ್ಲಿ ಮಾತ್ರವಲ್ಲ, ಇಟೆಲಿಯಲ್ಲಿ ಮಾಧ್ಯಮ ಸಂಪೂರ್ಣ ಅಲ್ಲಿನ ಪ್ರಧಾನಿ ಹಿಡಿತದಲ್ಲಿದೆ ಎನ್ನುವ ವಾದ ವನ್ನು ಮುನ್ನಲೆಗೆ ತರಬಹುದು. ಪೆಟ್ರೋಲಿಯಂ, ಬಂದರು ನಿರ್ವಹಣೆಯ ಉದ್ಯಮಿಯೊಬ್ಬರಿಗೆ ಮಾಧ್ಯಮ ನಿಯಂತ್ರಣದ ಅಗತ್ಯತೆಯ ಕಾರಣವೇನು ಎಂಬುದನ್ನು ಸುದ್ದಿಯನ್ನು ಗ್ರಹಿಸುವ, ಓದುವ, ನೋಡುವ ಬುದ್ಧಿವಂತ ಜನಸಾಮಾನ್ಯರು ಅರ್ಥ ಮಾಡಿಕೊಂಡರೆ ಎಲ್ಲವೂ ಸ್ಪಷ್ಟವಾಗುತ್ತದೆ. ಇಂತಹ ವ್ಯವಸ್ಥೆಯ ಮೂಲಕ ಯಾರ ಹಿತಾಸಕ್ತಿಯನ್ನು ಎತ್ತಿ ಹಿಡಿಯಲಾಗುತ್ತಿದೆ, ಯಾರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂಬುದನ್ನು ಅರಿಯುವುದು ಕಷ್ಟಸಾಧ್ಯವೇನಲ್ಲ. ಈ ಕಾರ್ಯದ ಹಿಂದಿನ ಅಜೆಂಡಾ ಏನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಕೂಡಾ ಸಾಧ್ಯ ಎಂದು ಡಾ. ಸಿಂಧು ಮಂಜೇಶ್ ಮಾರ್ಮಿಕವಾಗಿ ನುಡಿದರು.
ಮಾಧ್ಯಮದ ಏಕಸ್ವಾಮ್ಯತೆಯು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂಲಭೂತ ಹಕ್ಕುಗಳನ್ನೇ ಕಸಿಯುವ ಪ್ರಯತ್ನಕ್ಕೆ ಕಾರಣವಾಗುತ್ತದೆ. ಭದ್ರತೆಯ ನೆಪವೊಡ್ಡಿ ಕಾಶ್ಮೀರ ಮತ್ತು ಮಣಿಪುರ ಘಟನೆಗಳ ಸಂದರ್ಭ ಅಲ್ಲಿನ ಅಂತರ್ಜಾಲ ವ್ಯವಸ್ಥೆಯನ್ನೇ ಸ್ಥಗಿತಗೊಳಿಸಿದ ಘಟನೆಗಳನ್ನು ಉಲ್ಲೇಖಿಸಿದ ಡಾ. ಸಿಂಧು ಮಂಜೇಶ್, ಇಂತಹ ಒತ್ತಡ, ನಿಯಂತ್ರಣ ಪ್ರತಿನಿತ್ಯ ಅತ್ಯಂತ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದರೂ ಸಾಮಾನ್ಯ ಜನರು ಅದನ್ನು ನಿರ್ಲಕ್ಷ್ಯ ವಹಿಸುತ್ತಿರುವುದು ಕೂಡಾ ಅಪಾಯಕಾರಿ ಬೆಳವಣಿಗೆ ಎಂದು ಅವರು ಅಭಿಪ್ರಾಯಿಸಿದರು.
ಪಿಪಿ ಗೋಮತಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಗೋಪಾಲ ಶೆಟ್ಟಿ ಗೋಮತಿಯವರ ಬಗ್ಗೆ ಮಾಹಿತಿ ನೀಡಿದರು. ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಕಾರ್ಯಕ್ರಮ ನಿರ್ವಹಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ರೈ, ರಾಷ್ಟ್ರೀಯ ವಿಚಾರವಾದಿ ವೇದಿಕೆಯ ಅಧ್ಯಕ್ಷ ಡಾ. ನರೇಂದ್ರ ನಾಯಕ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.