ಯುನಿಕೋಡ್ ಗೆ ‘ತುಳು- ತಿಗಳಾರಿ’ ಲಿಪಿ ಸೇರ್ಪಡೆ
ಮಂಗಳೂರು, ಸೆ.8: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಡಿ ಸೇರಿಸಬೇಕೆಂಬ ಕೂಗಿನ ನಡುವೆಯೇ ಯುನಿಕೋಡ್ ಗೆ ‘ತುಳು- ತಿಗಳಾರಿ’ ಲಿಪಿ ಸೇರ್ಪಡೆಗೊಂಡಿದೆ. ವಿಕಿಪೀಡಿಯಾ, ಗೂಗಲ್‌ನಲ್ಲಿ ತುಳು ಅನುವಾದದ ಅವಕಾಶ ಒದಗಿಸಿದ ಬಳಿಕ ಇದೀಗ ಯುನಿಕೋಡ್ ನಲ್ಲೂ ತುಳು ಲಭ್ಯವಾಗುತ್ತಿರುವುದು ಮಹತ್ವಪೂರ್ಣ ಬೆಳವಣಿಗೆ.
ಯುನಿಕೋಡ್ ಅವೃತ್ತಿ 16ರಲ್ಲಿ ತುಳು ಸೇರ್ಪಡೆಯಾಗಿದ್ದು, ಸದ್ಯ 80 ಅಕ್ಷರಗಳನ್ನು ಸೇರಿಸಲಾಗಿದೆ. ಯುನಿಕೋಡ್ ನಲ್ಲಿ ತುಳು ಲಭ್ಯವಾಗಿರುವ ಕಾರಣ ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್, ಟೆಕ್ಸ್ಟ್ ಟು ಸ್ಪೀಚ್, ಸ್ಪೀಚ್ ಟು ಟೆಕ್ಸ್ಟ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಇವೆಲ್ಲದಕ್ಕೂ ಸಾಧ್ಯವಾಗಲಿದೆ. ಗೂಗಲ್‌ನಲ್ಲಿ ಈಗಾಗಲೆ ಇಂಗ್ಲಿಟ್ ಟು ತುಳು ಅನುವಾದ ಒದಗಿರುವ ಕಾರಣ ಯುನಿಕೋಡ್ ನಲ್ಲಿ ಹಲವು ಸಾಧ್ಯತೆಗಳು ತೆರೆದುಕೊಳ್ಳುವ ನಿರೀಕ್ಷೆಯನ್ನು ಮೂಡಿಸಿದೆ.
2016ರ ಆ.6ರಂದು ತುಳು ವಿಕಿಪೀಡಿಯಾ ಆರಂಭವಾದಾಗ ಮುಂದುವರಿದ ಭಾಗವಾಗಿ ಯುನಿಕೋಡ್ ಅಗತ್ಯದ ಹಿನ್ನೆಲೆಯಲ್ಲಿ ತುಳು ಸಾಹಿತ್ಯ ಅಕಾಡಮಿಯು 2017ರಲ್ಲಿ ತುಳು ಅಕ್ಷರಗಳನ್ನು ಅಂತಿಮಗೊಳಿಸಲು ಸಮಿತಿ ರಚಿಸಿತ್ತು. ಸಾಫ್ಟ್‌ವೇರ್ ತಂತ್ರಜ್ಞ ಯು.ಬಿ.ಪವನಜ ತಾಂತ್ರಿಕ ಸಲಹೆ ನೀಡಿದ್ದರು. ಇದರಂತೆ ತುಳು ಅಕ್ಷರಗಳ ಪಟ್ಟಿ ಮಾಡಲಾಗಿತ್ತು. 80 ಪುಟುಗಳ ಪಟ್ಟಿಯನ್ನು ಯುನಿಕೋಡ್ ಗೆ ಕಳುಹಿಸಲಾಗಿದ್ದು, ಇದೇ ಸಂದರ್ಭ ತಿಗಳಾರಿ ಲಿಪಿ ಎಂದು ಪ್ರತ್ಯೇಕ ಪ್ರಸ್ತಾವ ಕೂಡಾ ಸಲ್ಲಿಕೆಯಾಗಿತ್ತು. ಬಳಿಕ ಎರಡೂ ಕಡೆ ಹಲವು ಪತ್ರ ವ್ಯವಹಾರಗಳ ಬಳಿಕ ತುಳು- ತಿಗಳಾರಿ ಹೆಸರಿನಲ್ಲಿ ಲಿಪಿಯನ್ನು ಯುನಿಕೋಡ್‌ಗೆ ಸೇರಿಸಲಾಗಿದೆ.
ಬಹುವರ್ಷದ ಕನಸು ನನಸು
‘ತುಳು ಲಿಪಿಗೆ ಯುನಿಕೋಡ್ ಮಾನ್ಯತೆಯ ಮೂಲಕ ಬಹುವರ್ಷದ ಕನಸು ನನಸಾಗಿದೆ. 2017ರಿಂದ ತುಳು ಅಕಾಡಮಿ ತಜ್ಞರ ಜತೆ ಈ ಬಗ್ಗೆ ಸಹಕರಿಸಿದೆ. ಅಂದು ಅಕಾಡಮಿ ಅಧ್ಯಕ್ಷರಾಗಿದ್ದ ಎ.ಸಿ. ಭಂಡಾರಿಯವರು ವಿಷಯ ಸಮನ್ವಯಕ್ಕಾಗಿ ತಜ್ಞರ ಸಮಿತಿ ರಚಿಸಿದ್ದರು. ಅಕಾಡಮಿ ವತಿಯಿಂದ ಸಹಕಾರ ನೀಡಾಗಿತ್ತು. ಅನಂತರ ದಿನಗಳಲ್ಲಿ ತಜ್ಞರು ನಿರತಂರವಾಗಿ ಈ ವಿಷಯದ ಬಗ್ಗೆ ಸತತ ಮನವಿ, ಪರಿಷ್ಕರಣೆಗಳನ್ನು ಕಳುಹಿಸಿ ತುಳು ಲಿಪಿಯನ್ನು ಯುನಿಕೋಡ್ ಅಂಗೀಕರಿಸುವಂತೆ ಆಗಿದೆ. ತುಳು ಲಿಪಿಯನ್ನು ಯುನಿಕೋಡ್‌ಗೆ ಅಂಗೀಕರಿಸುವ ನಿಟ್ಟಿನಲ್ಲಿ ತಜ್ಞರಾದ ಕೆ.ಪಿ.ರಾವ್, ಯು.ಬಿ.ಪವನಜ, ವೈಷ್ಣವಿ ಮೂರ್ತಿ, ಎಸ್.ಎ. ಕೃಷ್ಣಯ್ಯ, ರಾಧಾಕೃಷ್ಣ ಬೆಳ್ಳೂರು, ಭಾಸ್ಕರ್ ಶೇರಿಗಾರ್, ಎಸ್.ಆರ್.ವಿಘ್ನರಾಜ್, ಆಕಾಶ್‌ರಾಜ್ ಸೇರಿದಂತೆ ಅನೇಕರು ಕೊಡುಗೆ ನೀಡಿದ್ದಾರೆ.’
-ತಾರನಾಥ ಗಟ್ಟಿ ಕಾಪಿಕಾಡ್, ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ.
ಪರಿವರ್ತಕ ತಂತ್ರಾಂಶದ ಅಗತ್ಯವಿದೆ
‘ತುಳು ಯುನಿಕೋಡ್ ಈ ಅಕ್ಷರಗಳನ್ನು ಒಳಗೊಂಡ, ಯುನಿಕೋಡ್ ಸಂಕೇತೀಕರಣಗೊಳಿಸಿದ ಓಪನ್ ಟೈಪ್ ಫಾಂಟ್ ತಯಾರಿಸಬೇಕಿದೆ. ತುಳು ಯುನಿಕೋಡ್ ಪ್ರಕಾರ ಮಾಹಿತಿಗಾಗಿ ಒಂದು ಕೀಬೋರ್ಡ್ ತಂತ್ರಾಂಶವನ್ನು ರೂಪಿಸಬೇಕಿದೆ. ಈಗಾಗಲೇ ಕನ್ನಡ ಲಿಪಿಯಲ್ಲಿ ದಾಖಲಿಸಿದ ಮಾಹಿತಿಗಳನ್ನು ಈ ಹೊಸ ಸಂಕೇತಕ್ಕೆ ಪರಿವರ್ತಿಸಲು ಒಂದು ಪರಿವರ್ತಕ ತಂತ್ರಾಂಶದ ಅಗತ್ಯವಿದೆ’ ಎಂದು ಸಾಫ್ಟ್ ವೇರ್ ತಂತ್ರಜ್ಞ ಡಾ.ಯು.ಬಿ. ಪವನಜ ಅಭಿಪ್ರಾಯಿಸಿದ್ದಾರೆ.