ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಏರೋ ಬ್ರಿಡ್ಜ್ ಕಾರ್ಯಾರಂಭ
ಮಂಗಳೂರು, ಜು.20: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರ ಕೇಂದ್ರಿತ ಉಪಕ್ರಮವಾಗಿ ಎರಡು ಹೆಚ್ಚುವರಿ ಪ್ರಯಾಣಿಕರ ಬೋರ್ಡಿಂಗ್ ಬ್ರಿಡ್ಜ್ ಗಳನ್ನು ಕಾರ್ಯರೂಪಕ್ಕೆ ತಂದಿದೆ. ಇದರೊಂದಿಗೆ, ವಿಮಾನ ನಿಲ್ದಾಣದಲ್ಲಿ ಏರೋ ಬ್ರಿಡ್ಜ್ ಗಳ ಸಂಖ್ಯೆ ಆರಕ್ಕೆ ಏರಿದೆ.
ವಿಶೇಷವಾಗಿ ಮಳೆಗಾಲದಲ್ಲಿ ಪ್ರಯಾಣಿಕರನ್ನು ಏಪ್ರನ್ ನಲ್ಲಿರುವ ವಿಮಾನದಿಂದ ಟರ್ಮಿನಲ್ಗೆ ಮತ್ತು ತೆರೆದ ಬೇಯಿಂದ ಸ್ಥಳಾಂತರಿಸುವುದು ಒಂದು ಸವಾಲಾಗಿತ್ತು. ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡಕ್ಕೆ ಜೋಡಿಸಲಾದ ಈ ಏರೋಬ್ರಿಡ್ಜ್ ಗಳು ವಿಮಾನ ನಿಲ್ದಾಣಕ್ಕೆ ಏಪ್ರನ್ ನಲ್ಲಿ ಲಭ್ಯವಿರುವ 11 ಪಾರ್ಕಿಂಗ್ ಸ್ಟ್ಯಾಂಡ್ ಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇವುಗಳಲ್ಲಿ ಆರು ಸ್ಟ್ಯಾಂಡ್ ಗಳು ಟರ್ಮಿನಲ್ ಗೆ ಏರೋಬ್ರಿಡ್ಜ್ ಗಳೊಂದಿಗೆ ಸಂಪರ್ಕ ಹೊಂದಿವೆ. ಉಳಿದವು ತೆರೆದ ಬೇಗಳಾಗಿವೆ.
ಈ ಹಿನ್ನೆಲೆಯಲ್ಲಿ ವಿಮಾನಯಾನ ಮತ್ತು ಸಿಐಎಸ್ಎಫ್ನ ವಿಮಾನ ನಿಲ್ದಾಣ ಭದ್ರತಾ ಗುಂಪನ್ನು ಒಳಗೊಂಡ ತಂಡವು ಸಮಾಲೋಚಿಸಿ ವಿಮಾನ ನಿಲ್ದಾಣವು ಹೊಸ ಏರೋಬ್ರಿಡ್ಜ್ ಗಳನ್ನು ಕಾರ್ಯಗತಗೊಳಿಸಿದೆ.
‘ಮೂಲ ಸೌಕರ್ಯದ ವಿಷಯದಲ್ಲಿ ಪ್ರಯಾಣಿಕರಿಗೆ ಸಾಧ್ಯವಾದಷ್ಟು ಉತ್ತಮ ಅನುಭವವನ್ನು ನೀಡಲು ವಿಮಾನ ನಿಲ್ದಾಣ ಯಾವಾಗಲೂ ಬದ್ಧವಾಗಿದೆ’ ಎಂದು ವಿಮಾನ ನಿಲ್ದಾಣದ ವಕ್ತಾರರು ಹೇಳಿದ್ದಾರೆ.