ಮಂಗಳೂರು| ಬದ್ರಿಯಾ ಶತಮಾನೋತ್ಸವ ಸಮಾರಂಭ: ʼಅಂಜುಮನ್ ತರಕ್ಕಿ ಎ ಉರ್ದುʼ ಸಂಸ್ಥೆಯಿಂದ ಚರ್ಚಾ ಸ್ಪರ್ಧೆ ಆಯೋಜನೆ
ಮಂಗಳೂರು: ಬದ್ರಿಯಾ ಶತಮಾನೋತ್ಸವ(1924-2024)ದ ಅಂಗವಾಗಿ ಅಕ್ಟೋಬರ್ 20ರಂದು ಬದ್ರಿಯ ಕಾಲೇಜು ಆವರಣದಲ್ಲಿ ʼಅಂಜುಮನ್ ತರಕ್ಕಿ ಎ ಉರ್ದುʼ ಸರಕಾರೇತರ ಸಂಸ್ಥೆಯು ಚರ್ಚಾಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸಂಸ್ಥೆಯು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಉರ್ದು ಭಾಷೆ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ.
ಬೆಳಗ್ಗೆ ಮತ್ತು ಸಂಜೆಯ ಅವಧಿಯಾಗಿ ವಿಂಗಡಣೆಯಾಗಿದ್ದ ಈ ಕಾರ್ಯಕ್ರಮದಲ್ಲಿ, ಬೆಳಗ್ಗೆ ಚರ್ಚಾಸ್ಪರ್ಧೆ ನಡೆದರೆ, ನಂತರ ಬಹುಮಾನ ವಿತರಣೆ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪೀಸಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಹಾಗೂ ಬದ್ರಿಯಾ ಶಿಕ್ಷಣ ಸಂಸ್ಥೆಯ ಪ್ರತಿನಿಧಿ ಪಿ.ಸಿ.ಹಾಶೀರ್ ಪಾಲ್ಗೊಂಡಿದ್ದರು. ನಿವೃತ್ತ ಪ್ರಾಂಶುಪಾಲ, ಅಂಜುಮನ್ ತರಕ್ಕಿ ಎ ಉರ್ದು ರಾಜ್ಯ ಸಂಸ್ಥೆಯ ಅಧ್ಯಕ್ಷ ಹಾಗೂ ಉರ್ದು ತರಕ್ಕಿ ಹಿಂದ್ ಸಂಘಟನೆಯ ಕಾರ್ಯದರ್ಶಿ ಅಬಿದ್ ಉಲ್ಲಾ ಅತಹರ್ ಶಿಮೊಗಾವಿ ಮುಖ್ಯ ಭಾಷಣಕಾರರಾಗಿದ್ದರು. ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದ ದುಬೈನ ನಾರ್ದರ್ನ್ ಇನ್ಷೂರೆನ್ಸ್ ಎಲ್ಎಲ್ಸಿಯ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ಅಫ್ರೋಝ್ ಅಸ್ಸಾದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಖತರ್ ನ ಅನಿವಾಸಿ ಭಾರತೀಯ ಉದ್ಯಮಿ ಮುಮ್ತಾಝ್ ಹುಸೈನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಎರಡೂ ಅವಧಿಗಳನ್ನು ಪವಿತ್ರ ಖುರ್ ಆನ್ ಪಠಣದ ಮೂಲಕ ಪ್ರಾರಂಭಿಸಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಿ.ಸಿ.ಹಾಶೀರ್, ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆ ಮೇಲೆ ಚರ್ಚಾಸ್ಪರ್ಧೆಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳು ಬೀರುವ ಪಾತ್ರವನ್ನು ಒತ್ತಿ ಹೇಳಿದರು.
ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಒದಗಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಮುಖ್ಯ ಭಾಷಣಕಾರ ಅಬಿದ್ ಉಲ್ಲಾ ಅತಹರ್, ಜಪಾನ್, ಜರ್ಮನಿ, ಫ್ರಾನ್ಸ್ ನಂತಹ ದೇಶಗಳು ಮಕ್ಕಳಿಗೆ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ನೀಡುತ್ತಿರುವುದನ್ನು ಉಲ್ಲೇಖಿಸಿದರು. ಇಂಗ್ಲಿಷ್ ನಂತಹ ವಿದೇಶಿ ಭಾಷೆಗಳಲ್ಲಿ ಕಲಿಯುವುದಕ್ಕಿಂತ ಮಾತೃ ಭಾಷೆಯಲ್ಲಿ ಕಲಿಯುವುದರಿಂದ ಉತ್ತಮ ಸಮಗ್ರತೆ ದಕ್ಕುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಬದ್ರಿಯಾ ಶಿಕ್ಷಣ ಸಂಸ್ಥೆಯ ಮಾಜಿ ವಿದ್ಯಾರ್ಥಿಯಾದ ಮುಮ್ತಾಝ್ ಹುಸೈನ್, ಬಂದರು ಮತ್ತು ಕುದ್ರೋಳಿ ಪ್ರದೇಶದ ಸ್ಥಳೀಯ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಒದಗಿಸಲು 1924ರಲ್ಲಿ ಮರ್ಹೂಮ್ ಸಿ. ಮೆಹ್ಮೂದ್ ಅವರು ಅಲ್ ಮದ್ರಸತುಲ್ ಬದ್ರಿಯಾ ಎಂಬ ಹೆಸರಿನಲ್ಲಿ ಸ್ಥಾಪಿಸಿದ ಬದ್ರಿಯಾ ಶಿಕ್ಷಣ ಸಂಸ್ಥೆಯ ಇತಿಹಾಸದ ಕಿರು ಪರಿಚಯ ನೀಡಿದರು.
ಬದ್ರಿಯಾ ಹಾಗೂ ಉರ್ದು ನಡುವಿನ ಸಂಬಂಧ ಗಾಢವಾದುದಾಗಿದೆ. 1947ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉರ್ದು ವ್ಯಾಸಂಗಕ್ಕೆ ಅವಕಾಶ ನೀಡಿದ ಪ್ರಪ್ರಥಮ ಶಿಕ್ಷಣ ಸಂಸ್ಥೆ ಬದ್ರಿಯಾ ಶಿಕ್ಷಣ ಸಂಸ್ಥೆಯಾಗಿದೆ. ಸಿ.ಮೆಹ್ಮೂದ್ ನಿಧನರಾದ ನಂತರ ಹಲವಾರು ಅಧ್ಯಕ್ಷರು ಬದ್ರಿಯಾ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸಿದ್ದಾರೆ. ಈ ಪೈಕಿ ಮರ್ಹೂಮ್ ತುಂಬೆ ಅಹ್ಮದ್ ಹಾಜೀ 1975ರಿಂದ 2020ರವರೆಗೆ ಈ ಸಂಸ್ಥೆಯ ಸುದೀರ್ಘ ಅಧ್ಯಕ್ಷರಾಗಿದ್ದರು ಎಂದು ಅವರು ಸ್ಮರಿಸಿದರು. ಬದ್ರಿಯಾ ಶಿಕ್ಷಣ ಸಂಸ್ಥೆಯೊಳಗೆ ವಿದ್ಯಾರ್ಥಿಗಳು ಉರ್ದು ಭಾಷೆಯನ್ನೇ ಮಾತನಾಡಬೇಕಿತ್ತು. ಇತರೆ ಭಾಷೆಗಳಲ್ಲಿ ಮಾತನಾಡಿದರೆ ಶಿಕ್ಷೆ ಅನುಭವಿಸಬೇಕಿತ್ತು ಎಂದೂ ಅವರು ಮೆಲುಕು ಹಾಕಿದರು.
ಕಿರಿಯರ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಏಳು ಹಿರಿಯ ಪ್ರಾಥಮಿಕ ಶಾಲೆಗಳು ಪಾಲ್ಗೊಂಡಿದ್ದವು. ಈ ಪೈಕಿ ಕಂದತ್ ಪಲ್ಲಿಯ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಮುಹಮ್ಮದ್ ಗೌಸ್ ಪ್ರಥಮ ಬಹುಮಾನಕ್ಕೆ ಭಾಜನರಾದರು. ಕಾವಲಕಟ್ಟೆಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ರೀಫಾ ಹಾಗೂ ಫಾತಿಮಾ ಸುಝಾನಾ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಪ್ರಶಸ್ತಿಯನ್ನು ಪಡೆದರು.
ಹಿರಿಯರ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 5 ಶಾಲೆಗಳು ಭಾಗವಹಿಸಿದ್ದವು. ಉಡುಪಿ ಜಿಲ್ಲೆಯ ಗಂಗೊಳ್ಳಿಯ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಅಬ್ದುಲ್ ಬಾರಿ ಹಾಗೂ ಅಬ್ದುರ್ ರಹ್ಮಾನ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಗಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳ ತಾಲ್ಲೂಕಿನ ಸಯ್ಯದ್ ಮದನಿ ಉರ್ದು ಪ್ರೌಢ ಶಾಲೆಯ ಖದೀಜತುಲ್ ಫರ್ಹಾನ ತೃತೀಯ ಬಹುಮಾನಕ್ಕೆ ಭಾಜನರಾದರು.
ಕಿರಿಯರ ಮಟ್ಟದ ಚರ್ಚಾಸ್ಪರ್ಧೆಯಲ್ಲಿ ಕಾವಲಕಟ್ಟೆಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯು ಬದ್ರಿಯಾ ಶತಮಾನೋತ್ಸವ ಚಾಂಪಿಯನ್ ಶಿಪ್ ಟ್ರೋಫಿಯನ್ನು ಪಡೆದರೆ, ಉಡುಪಿ ಜಿಲ್ಲೆಯ ಗಂಗೊಳ್ಳಿಯ ತೌಶೀದ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಿರಿಯರ ಮಟ್ಟದ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಇತರ 20 ಸ್ಪರ್ಧಿಗಳು ಸಮಾಧಾನಕರ ಬಹುಮಾನಗಳನ್ನು ಪಡೆದರು.
ಕರ್ನಾಟಕ ರಾಜ್ಯ ಪರೀಕ್ಷಾ ಮಂಡಳಿ ಆಯೋಜಿಸಿದ್ದ 2023-24ನೇ ಸಾಲಿನ ಪರೀಕ್ಷೆಯಲ್ಲಿ ಉರ್ದು ಭಾಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ್ದ ಮುಹಮ್ಮದ್ ಮೆರಾಜ್ ಖಾನ್, ಫೌಝಿಯ ಬಾನು, ಮೌಲಾನ ಮುಹಮ್ಮದ್ ಉಝೈಮ್, ಸಬಿಯ ನಾಝ್ ಹಾಗೂ ಆಯಿಷಾ ರೂಹ ಸೇರಿದಂತೆ ಒಟ್ಟು 5 ಮಂದಿ 10ನೇ ತರಗತಿ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಅಂಜುಮಾನ್ ಸಂಸ್ಥೆಯ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಮಾಸ್ಟರ್ ಅವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಅಂಜುಮನ್ ತರಕ್ಕಿ ಎ ಉರ್ದು ಸಂಸ್ಥೆಯ ಅಧ್ಯಕ್ಷ ಎ.ಎಸ್.ಮದನಿ ಉರ್ದು ಭಾಷೆ ಪ್ರಚಾರದ ಉದ್ದೇಶ ಹಾಗೂ ಯೋಜನೆಗಳ ಕುರಿತು ವಿವರಿಸಿದರು. ಅಂಜುಮಾನ್ ತರಕ್ಕಿ ಎ ಉರ್ದು ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಇಂಜಿನಿಯರ್ ಖಲೀಲ್ ಕಾರ್ಯಕ್ರಮಕ್ಕೆ ಸಂಪನ್ಮೂಲ ನೆರವು ಒದಗಿಸಿದರು. ಅಂಜುಮಾನ್ ತರಕ್ಕಿ ಎ ಉರ್ದು ಸಂಸ್ಥೆಯ ಸಕ್ರಿಯ ಸದಸ್ಯರಾದ ರಹಮತುಲ್ಲಾ ವಂದನಾರ್ಪಣೆ ಮಾಡಿದರು. ಬದ್ರಿಯಾ ಶಿಕ್ಷಣ ಸಂಸ್ಥೆಯ ಮಾಜಿ ವಿದ್ಯಾರ್ಥಿ ಹಾಗೂ ಅಂತಾರಾಷ್ಟ್ರೀಯ ನಿರ್ವಾಹಕ ಸಾಹಿಲ್ ಝಹೀರ್ ಕಾರ್ಯಕ್ರಮದ ಆತಿಥ್ಯ ವಹಿಸಿದ್ದರು.