ಸೆ. 20ರಂದು ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ನ ವಾರ್ಷಿಕೋತ್ಸವ, ವಾಯ್ಸ್ ಆಫ್ ಟ್ರಸ್ಟಿನ ಉದ್ಘಾಟನೆ
ಮಂಗಳೂರು, ಸೆ.13:ದ.ಕ. ಜಿಲ್ಲೆಯ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆಯಾಗಿರುವ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಇದರ 6ನೇ ವಾರ್ಷಿಕೋತ್ಸವ , ವಾಯ್ಸ್ ಆಫ್ ಟ್ರಸ್ಟಿನ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೆ.20ರಂದು ಮಂಗಳೂರು ರಾವ್ - ರಾವ್ ಸರ್ಕಲ್ ಬಳಿಯಿರುವ ಸಿಟಿ ಟವರ್‌ನ ಆವರಣದಲ್ಲಿ ನೆರವೇರಲಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ನ ಅಧ್ಯಕ್ಷ ಓಸ್ವಾಲ್ಡ್ ಪುರ್ಟಾಡೊ ಅವರು ಸಂಸ್ಥ್ಥೆಯು ಕಳೆದ 6 ವರ್ಷಗಳಲ್ಲಿ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ 80ಕ್ಕೂ ಅಧಿಕ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ರಕ್ತದ ಅವಶ್ಯಕತೆ ಇರುವವರಿಗೆ ರಕ್ತ ಒದಗಿಸಿ ಸಾವಿರಾರು ಮಂದಿಯ ಜೀವ ಉಳಿಸಿ ಆನೇಕ ಕುಟುಂಬದ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ. ಬಡ ರೋಗಿಗಳಿಗೆ ಉಚಿತ ಆ್ಯಂಬುಲೆನ್ಸ್ ಸೇವೆ, ವಿಕಲ ಚೇತನರಿಗೆ ಬೇಕಾಗುವ ವೀಲ್ ಚೆಯರ್, ವಾಟರ್ ಬೆಡ್, ವಾಕರ್, ವಾಕಿಂಗ್ ಸ್ಟಿಕ್ ಮುಂತಾದ ಪರಿಕರಗಳನ್ನು ನಿರಂತರವಾಗಿ ನೀಡುತ್ತಾ ಬಂದಿದೆ ಎಂದರು.
ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಇದರ ಸ್ಥಾಪಕಾಧ್ಯಕ್ಷ ರವೂಫ್ ಬಂದರ್ ಮಾತನಾಡಿ ವಾಯ್ಸ್ ಆಫ್ ನಮ್ಮ ಸಮಾಜ ಸೇವಾ ಚಟುವಟಿಕೆಗಳಿಗೆ ಇನ್ನಷ್ಟು ವೇಗವನ್ನು ನೀಡುವ ಉದ್ದೇಶದಿಂದ ವಾಯ್ಸ್ ಆಫ್ ಟ್ರಸ್ಟ್ ಎಂಬ ಸಹಸಂಸ್ಥೆಯನ್ನು ಹುಟ್ಟು ಹಾಕಿದ್ದೇವೆ ಇದರ ನೂತನ ಅಧ್ಯಕ್ಷರನ್ನಾಗಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ನ ಸಂಚಾಲಕ ಎಂ.ಕೆ.ಝಹೀರ್ ಅಬ್ಬಾಸ್ ಅವರನ್ನು ಆಯ್ಕೆ ಮಾಡಲಾಗಿದೆ. ಕೊಡುಗೈ ದಾನಿಯಾಗಿರುವ ಅಬ್ಬಾಸ್ ಬಡ ಹೆಣುಮಕ್ಕಳ ಮದುವೆಗೆ ನೆರವು, ಹಸಿದವರ ಹೊಟ್ಟೆ ತಣಿಸುವ ಕೆಲಸ, ರೋಗಿಗಳಿಗೆ ಚಿಕಿತ್ಸೆಗೆ ನೆರವು , ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನೆರವು, ಆರ್ಥಿಕವಾಗಿ ಹಿಂದುಳಿದವರಿಗೆ ಮನೆಕಟ್ಟಲು ನೆರವು, ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ಕೊರೋನ ಕಾಲದಲ್ಲಿ ಆಹಾರ ಕಿಟ್ ವಿತರಣೆ, ಹೀಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆಯ ಎಲ್ಲ ರಂಗ ಗಳಲ್ಲೂ ವೈಯುಕ್ತಿಕವಾಗಿ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದರು.
ಟ್ರಸ್ಟ್‌ನ ಉದ್ಘಾಟನಾ ಸಮಾರಂಭದಲ್ಲಿ ಶೈಖುನಾ ಸೈಫುಲ್ಲಾಹಿ ಮುಹಮ್ಮದ್ ಬಶೀರ್ ವಲಿಯುಲ್ಲಾಹಿ (ಎಂ.ಎಂ. ಸುಲ್ತಾನ್), ವೈ.ಪಿ.ಎಲ್.ಅಹ್ಮದ್ ಮೊಹಿದೀನ್ ಲೆಬ್ಬೈ ಮುತ್ತುಪೇಟೆ ಮತ್ತು ಶೈಖ್ ಮುಹಮ್ಮದ್ ಇರ್ಫಾನಿ ಫೈಝಿ ಅಝ್‌ಹರಿ, ಒಎಫ್‌ಎಂ ಕ್ಯಾಪ್ ಸುಪೀರಿಯರ್ ರೆ. ಡಾ.ರಾಕಿ ಡಿ ಕುನ್ಹಾ, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ ವೇದವ್ಯಾಸ್ ಕಾಮತ್, ಮಾಜಿ ಶಾಸಕ ಜೆ.ಆರ್. ಲೋಬೊ , ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿ. ಸೋಜ, ಮಾಜಿ ಮೇಯರ್ ಕೆ.ಇ. ಆಶ್ರಫ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಾಯ್ಸ್ ಆಫ್ ಟ್ರಸ್ಟಿನ ಉದ್ಘಾಟನಾ ಸಮಾರಂಭದಲ್ಲಿ 1,500 ಮಂದಿ ಬಡವರಿಗೆ ಅನ್ನದಾನ, ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ವಿಕಲ ಚೇತನರಿಗೆ 60 ವೀಲ್ ಚೆಯರ್, ವಾಕರ್, ವಾಕಿಂಗ್ ಸ್ಟಿಕ್, ವಾಟರ್ ಬೆಡ್ ಮುಂತಾದ ಪರಿಕರಗಳ ವಿತರಣೆ, ಓರ್ವ ಬಡ ಯುವತಿಯ ಮದುವೆಗೆ ಸಂಪೂರ್ಣ ವೆಚ್ಚವನ್ನು ನೀಡಲಾಗುವುದು ಎಂದು ಟ್ರಸ್ಟ್‌ನ ಅಧ್ಯಕ್ಷ ಎಂ.ಕೆ.ಝಹೀರ್ ಅಬ್ಬಾಸ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಾಯ್ಸ್ ಆಫ್ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಅಲೀಷಾ ಅಮೀನ್, ಪದಾಧಿಕಾರಿಗಳಾದ ನಝೀರ್ ದೇರಳಕಟ್ಟೆ , ಹಾರಿಸ್ , ಸಲಹೆಗಾರ ಹುಸೈನ್ ಕಾಟಿಪಳ್ಳ ಉಪಸ್ಥಿತರಿದ್ದರು.