ಬಂಟ್ವಾಳ: 27 ವರ್ಷಗಳ ಬಳಿಕ ದೌರ್ಜನ್ಯ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಸಂಘಪರಿವಾರದ ಕಾರ್ಯಕರ್ತನ ಬಂಧನ
ತಲೆಮರೆಸಿಕೊಂಡು ಸರಕಾರಿ ಉದ್ಯೋಗದಲ್ಲಿದ್ದ ಆರೋಪಿ
ಬಂಟ್ವಾಳ: 1995ರ ದೌರ್ಜನ್ಯ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಸಂಘಪರಿವಾರ ಕಾರ್ಯಕರ್ತನನ್ನು ಕೊನೆಗೂ ಬಂಧಿಸಲಾಗಿದೆ. ಸಂಘಪರಿವಾರ ಕಾರ್ಯಕರ್ತ ಪದ್ಮನಾಭ ಬಂಧಿತ ಆರೋಪಿ. ತಲೆಮರೆಸಿಕೊಂಡಿದ್ದ ಆರೋಪಿ ಸರಕಾರವನ್ನು ವಂಚಿಸಿ ಸರಕಾರಿ ಉದ್ಯೋಗ ಕೂಡ ಪಡೆದಿದ್ದ ಎಂದು ತಿಳಿದು ಬಂದಿದೆ.
ಈತನನ್ನು ಇಂದು ಬಂಧಿಸಿ ಬಂಟ್ವಾಳದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ದೌರ್ಜನ್ಯ ಪ್ರಕರಣದ ಆರೋಪಿ ಪದ್ಮನಾಭ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಶುಸಂಗೋಪಾನೆ ಇಲಾಖೆ ನೌಕರನಾಗಿದ್ದ ಎಂದು ತಿಳಿದು ಬಂದಿದೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವನಾದ ಆರೋಪಿ ಪದ್ಮನಾಭ ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಘಟ್ಟದಲ್ಲಿ ನೆಲೆಸಿದ್ದ ಎಂದು ತಿಳಿದು ಬಂದಿದೆ.
1995 ಅಕ್ಟೋಬರ್ 24 ರಂದು ಸಂಘಪರಿವಾರದ ಮುಖಂಡ ನಾರಾಯಣ ಸೋಮಯಾಜಿ ಆಯೋಜಿದ್ದ ಆರೆಸ್ಸೆಸ್ ಬೈಟಕ್ ನಲ್ಲಿ ಪಾಲ್ಗೊಲ್ಲಲಿಲ್ಲ ಎಂದು ದಿನಗೂಲಿ ಕಾರ್ಮಿಕರಾದ ಗುರುವಪ್ಪ ಹಾಗೂ ರಮೇಶ ಎಂಬವರಿಗೆ ಹಲ್ಲೆ ನಡೆಸಿ ಹಾಗೂ ತಲೆ ಬೋಳಿಸಿ ಮೆರವಣಿಗೆ ಮಾಡಿ ಕೊನೆಗೆ ಅವರ ಮೇಲೆ ಅಡಿಕೆ ಕದ್ದಿರುವ ಆರೋಪ ಹೊರಿಸಲಾಗಿತ್ತು ಎಂದು ದೂರಲಾಗಿತ್ತು. ಘಟನೆಯ ಪ್ರಮುಖ ಆರೋಪಿಗಳಾದ ನಾರಾಯಣ ಸೋಮಯಾಜಿ, ಪದ್ಮನಾಭ, ವಿಠಲ, ಸುರೇಶ ಸಪಲ್ಯ ಎಂಬವರ ವಿರುದ್ಧ ಅಂದು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಲ್ಲದೇ ಪ್ರಕರಣದ ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಅರೋಪ ಕೂಡ ಸಾಬೀತಾಗಿತ್ತು. ಆದರೆ ಪ್ರಕರಣದ ಮೂರನೇ ಆರೋಪಿ ಪದ್ಮನಾಭ ಎಂಬಾತ ಪೋಲಿಸರಿಗೆ ಸಿಗದೆ ತಲೆಮರೆಸಿಕೊಂಡಿದ್ದಲ್ಲದೇ ಸರಕಾರಿ ಉದ್ಯೋಗ ಕೂಡ ಪಡೆದಿದ್ದ ಎನ್ನಲಾಗಿದೆ.
27 ವರ್ಷಗಳ ಬಳಿಕ ಈ ಪ್ರಕರಣವನ್ನು ಬೀಟ್ ಸಿಬ್ಬಂದಿ ಪ್ರವೀಣ್ ಶಿವಪುರ ಎಂಬವರು ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಒಂದು ವರ್ಷಗಳಿಂದ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿಯನ್ನು ಪತ್ತೆ ಹಚ್ಚಿ, ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬೀಟ್ ಸಿಬ್ಬಂದಿ ಪ್ರವೀಣ್ ಮತ್ತು ಜೊತೆ ಸಿಬ್ಬಂದಿ ಗಣೇಶ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗೆ ಶುಕ್ರವಾರ ಬಂಟ್ವಾಳ ಜೆಎಂಎಫ್ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.