ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಉರ್ಮಿಳಾ ರೊಸಾರಿಯೊ ಕನ್ನಡತಿ
ಮಂಗಳೂರು: ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಕ್ರಿಕೆಟ್ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿರುವುದು ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಶೆ ತಂದಿತ್ತು. ಆದರೆ ಚಾಂಪಿಯನ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಉರ್ಮಿಳಾ ರೊಸಾರಿಯೊ ಭಾರತ ಮೂಲದ ಕನ್ನಡತಿ ಎನ್ನುವುದು ವಿಶೇಷ.
34ರ ಹರೆಯದ ಉರ್ಮಿಳಾ ರೊಸಾರಿಯೊ ಮಂಗಳೂರು ಸಮೀಪದ ಕಿನ್ನಿಗೋಳಿ ಮೂಲದ ಐವಿ ಮತ್ತು ವ್ಯಾಲೆಂಟೈನ್ ರೊಸಾರಿಯೊ ದಂಪತಿಯ ಪುತ್ರಿ.
ಐವಿ - ವ್ಯಾಲೆಂಟೈನ್ ರೊಸಾರಿಯೊ ಕತರ್ ದೋಹಾದಲ್ಲಿ ಕೆಲಸ ಮಾಡುತ್ತಿದ್ದಾಗ ಉರ್ಮಿಳಾ ಜನಿಸಿದ್ದರು. ಏಳು ವರ್ಷಗಳ ಹಿಂದೆ ಆಕೆಯ ಹೆತ್ತವರು ಭಾರತಕ್ಕೆ ಮರಳಿ ಸಕಲೇಶಪುರದಲ್ಲಿ ಎಸ್ಟೇಟ್ ಖರೀದಿಸಿ ಅಲ್ಲೇ ನೆಲೆಸಿದ್ದಾರೆ.
ಕಾರ್ನೆಗೀ ಮೆಲಾನ್ ವಿಶ್ವವಿದ್ಯಾನಿಲಯದಿಂದ ಬಿಬಿಎ ಪದವೀಧರರಾದ ಊರ್ಮಿಳಾ ರೊಸಾರಿಯೊ ಆಸ್ಟ್ರೇಲಿಯಾಕ್ಕೆ ತೆರಳಿ ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾನೇಜರ್ ಆಗಿದ್ದಾರೆ.
ಬಾಲ್ಯದಿಂದಲೂ ಕ್ರೀಡಾ ಪಟುವಾಗಿದ್ದ ಉರ್ಮಿಳಾ ಕತರ್ ಟೆನಿಸ್ ಫೆಡರೇಶನ್‌ನೊಂದಿಗೆ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು. ಆಸ್ಟ್ರೇಲಿಯಾದಲ್ಲಿ ಅಡಿಲೇಡ್ ಕ್ರಿಕೆಟ್ ತಂಡದೊಂದಿಗೆ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು. ಬಳಿಕ ಅವರು ಆಸ್ಟ್ರೇಲಿಯಾದ ಮಹಿಳಾ ತಂಡದ ಮ್ಯಾನೇಜರ್ ಆಗಿ ನೇನಕಗೊಂಡರು. ಕಳೆದ ಫುಟ್ಬಾಲ್ ವಿಶ್ವಕಪ್ ಸಮಯದಲ್ಲಿ ಅವರು ಕ್ರಿಕೆಟ್‌ನಿಂದ ರಜೆ ಪಡೆದಿದ್ದರು. 4 ತಿಂಗಳ ಕಾಲ ಕತರ್‌ನಲ್ಲಿ ಫುಟ್ಬಾಲ್ ಕ್ರೀಡಾಂಗಣವನ್ನು ನಿರ್ವಹಿಸಿದ್ದರು. ಈ ವರ್ಷದ ಸೆಪ್ಟಂಬರ್‌ನಲ್ಲಿ ಕತರ್‌ನಿಂದ ಆಸ್ಟ್ರೇಲಿಯಾಕ್ಕೆ ಹಿಂದಿರುಗಿದ್ದರು. ಬಳಿಕ ಆಸ್ಟ್ರೇಲಿಯಾದ ಪುರುಷರ ತಂಡವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಇದೀಗ ಉರ್ಮಿಳಾ ಮಹಿಳಾ ತಂಡವನ್ನು ವಿಶ್ವಚಾಂಪಿಯನ್ ಆಗಿ ರೂಪಿಸುವಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.
ಮುಂದಿನ ಡಿಸೆಂಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡಕ್ಕೂ ಮ್ಯಾನೇಜರ್ ಆಗಿ ಉರ್ಮಿಳಾ ಕಾರ್ಯನಿರ್ವಹಿಸಲಿದ್ದಾರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಕ್ರೀಡಾ ರಂಗದಲ್ಲಿ ಉರ್ಮಿಳಾ ಅವರ ಪ್ರಯಾಣವು ತುಂಬಾ ಆಸಕ್ತಿದಾಯಕವಾಗಿದೆ. ವಿದ್ಯಾರ್ಥಿನಿಯಾಗಿದ್ದಾಗಲೇ ಬಾಸ್ಕೆಟ್‌ಬಾಲ್, ಟೆನಿಸ್, ರೋಯಿಂಗ್ ಮತ್ತು ಬಂಗೀ ಜಂಪಿಂಗ್‌ನಲ್ಲಿ ಗಮನ ಹರಿಸಿದ್ದರು. ಉರ್ಮಿಳಾ ಸಾರಿಗೆ ಮತ್ತು ವಸತಿ ಸೇರಿದಂತೆ ಎಲ್ಲ ವ್ಯವಸ್ಥೆಯನ್ನೂ ನಿರ್ವಹಿಸುತ್ತಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಉರ್ಮಿಳಾ ಅವರು ಆಸ್ಟ್ರೇಲಿಯಾ ಪ್ರಜೆಯಾಗಿರದೆ, ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೂ ಅವರನ್ನು ಮಹಿಳಾ ಕ್ರಿಕೆಟ್ ತಂಡಕ್ಕೆ ನೇಮಕ ಮಾಡಿತ್ತು.
ಉರ್ಮಿಳಾ ಅವರು ಮಹಿಳಾ ತಂಡವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರಿಂದ ಭಾರತ ಮತ್ತು ಭಾರತದ ಭಾಷೆಗಳಾದ ಹಿಂದಿ, ಕನ್ನಡ ಮತ್ತು ಕೊಂಕಣಿ ಬಗ್ಗೆ ಅವರ ಜ್ಞಾನದಿಂದಾಗಿ ಅವರನ್ನು ಆಯ್ಕೆ ಮಾಡಿರಬಹುದು ಎಂದು ಹೇಳುತ್ತಾರೆ.
ಅವರ ಮನೆ ಮಂದಿ ಕ್ರಮವಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾ ತಂಡ ಬೆಂಗಳೂರು ಮತ್ತು ಪುಣೆಯಲ್ಲಿ ನಡೆದ ಪಂದ್ಯಗಳನ್ನು ವೀಕ್ಷಿಸಿದ್ದರು. ಕಳೆದ ಮಾರ್ಚ್‌ನಲ್ಲಿ ಉರ್ಮಿಳಾ ತನ್ನ ಊರಿಗೆ ಭೇಟಿ ನೀಡಿದ್ದರು. ಎಸ್ಟೇಟ್‌ನಲ್ಲಿ ಸ್ವಲ್ಪ ದಿನ ಕೆಲಸ ಮಾಡಿ ವಾಪಸಾಗಿದ್ದರು ಎಂದು ಅವರ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.