ಬಜ್ಪೆ: ಯುವಕನಿಗೆ ಚೂರಿ ಇರಿತ
ಸುರತ್ಕಲ್: ಇಲ್ಲಿನ ಕರಂಬಾರು ಎಂಬಲ್ಲಿಂದ ದ್ವಿಚಕ್ರ ವಾಹನದಲ್ಲಿ ಬಜ್ಪೆಗೆ ತೆರಳುತ್ತಿದ್ದ ಇಬ್ಬರು ಯುವಕರ ಮೇಲೆ ಗುಂಪೊಂದು ದಾಳಿ ಮಾಡಿ ಡ್ರಾಗರ್ ಮೂಲಕ ಇರಿದಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣೆಯ ಕರಂಬಾರು ಎಂಬಲ್ಲಿ ರವಿವಾರ ರಾತ್ರಿ ವರದಿಯಾಗಿದೆ.
ಘಟನೆಯಿಂದ ಕರಂಬಾರು ಶಾಂತಿಗುಡ್ಡೆ ನಿವಾಸಿ ಅಬ್ದುಲ್ ಸಫ್ವಾನ್ (23) ಇರಿತಕ್ಕೆ ಒಳಗಾದ ಯುವಕ ಎಂದು ತಿಳಿದು ಬಂದಿದೆ.
ಘಟನೆಯಿಂದ ಅಬ್ದುಲ್ ಸಫ್ವಾನ್ ಅವರ ಕೈ ಮತ್ತು ಕುತ್ತಿಗೆಗೆ ಚುಚ್ಚಿದ ಗಾಯಗಳಾಗಿದ್ದು, ದಾರಿಹೋಕರು ಅವರನ್ನು ತಕ್ಷಣ ಬಜ್ಪೆಯ ಖಾಸಗಿ ಆಸ್ಪತ್ರಗೆ ದಾಖಲಿಸಿ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಅಬ್ದುಲ್ ಸಫ್ವಾನ್ ಮತ್ತು ಸ್ನೇಹಿತ ಮುಹಮ್ಮದ್ ಸಫ್ವಾನ್ ಎಂಬವರು ಕರಂಬಾರಿನಿಂದ ಬಜ್ಪೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬಸ್ತಿ ಬಳಿ ಅಡ್ಡಗಟ್ಟಿದ ಸ್ಥಳೀಯರಾದ ಪಚ್ಚು, ದಿವಾ ಅವರಿದ್ದ ಸುಮಾರು 20-30 ಮಂದಿಯಿದ್ದ ಗುಂಪು ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಡ್ರಾಗರ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾಗಿರುವ ಅಬ್ದುಲ್ ಸಫ್ವಾನ್ ಮಾಹಿತಿ ನೀಡಿದ್ದಾರೆ.
ಘಟನೆಯ ಕುರಿತು ಮಾಹಿತಿ ಸಿಕ್ಕಿದ ತಕ್ಷಣ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಅಬ್ದುಲ್ ಸಫ್ವಾನ್ ಅವರಿಂದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
"ಕೆಲದಿನಗಳ ಹಿಂದೆ ಕಳವಾರು ಭಾಗದಲ್ಲಿ ಮದ್ಯ ವ್ಯಸನಿಯೋರ್ವ ಹಲ್ಲೆ ನಡೆಸಿದ್ದ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿ ಆತನಿಗೆ ನ್ಯಾಂಯಾಂಗ ಬಂಧನವಾಗಿದೆ. ಇದೇ ಹಿನ್ನೆಲೆಯಲ್ಲಿ ಚೂರಿ ಇರಿತ ಸಂಭವಿಸಿರ ಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ನಡೆದ ಬಳಿಕ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ, ಪರಿಸ್ಥಿತಿ ತಿಳಿಯಾಗಿದ್ದ ಹಿನ್ನೆಲೆಯಲ್ಲಿ ರವಿವಾರ ಪೊಲೀಸರನ್ನು ನಿಯೋಜಿಸಿರಲಿಲ್ಲ ಎನ್ನಲಾಗಿದ್ದು, ದುಷ್ಕರ್ಮಿಗಳು ಪೊಲೀಸರು ಇಲ್ಲದಿರುವ ಸಮಯವನ್ನೇ ಗಮನಿಸಿಕೊಂಡು ಕೃತ್ಯ ಎಸಗಿದ್ದಾರೆ ಎಂದು ಸಾರ್ವಜನಿಕರು ಆತಂಕ ವ್ಯಕ್ತ ಪಡಿಸಿದ್ದಾರೆ.
ಸ್ಥಳದಲ್ಲಿ ಪೊಲೀಸ್ ನಿಯೋಜನೆ
ಘಟನೆ ನಡೆದ ಬಳಿಕ ಸ್ಥಳಕ್ಕೆ ಸುರತ್ಕಲ್ ಪೊಲೀಸರು ದೌಡಾಯಿಸಿದ್ದಾರೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಸ್ಥಳದಲ್ಲಿ ಕೆಎಸ್‌ಆರ್‌ಪಿಯ ಒಂದು ತುಕಡಿ, ಎರಡು ಹೊಯ್ಸಳ ವಾಹನಗಳು ಹಾಗೂ ಘಟನಾ ಸ್ಥಳದ ಸಮೀಪದಲ್ಲಿ ಮತ್ತು ಪೊಲೀಸ್ ಠಾಣಾ ವ್ಯಾಪ್ತಿಯ ಆಯಾಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಪೊಲೀಸ್ ಗಸ್ತನ್ನು ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.