ಬನ್ನೂರು: ಪೊಲೀಸರ ಮೇಲೆ ಹಲ್ಲೆ ಆರೋಪ; ಓರ್ವನ ಬಂಧನ
ಪುತ್ತೂರು : ಗಲಾಟೆ ವಿಷಯವಾಗಿ ಕರೆ ಬಂದ ಹಿನ್ನಲೆ ವಿಚಾರಣೆಗೆ ತೆರಳಿದ್ದ ಪೊಲೀಸರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಕಂಜೂರು ನಿವಾಸಿ ತೇಜಸ್ ಬಂಧಿತ ಆರೋಪಿ. ಜು.26 ರಂದು ತೇಜಸ್ ತನ್ನ ತಾಯಿಯೊಂದಿಗೆ ಗಲಾಟೆ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಆಗಮಿಸಿದ ಪೊಲೀಸರೊಂದಿಗೆ ತೇಜಸ್ ಅಸಭ್ಯವಾಗಿ ವರ್ತಿಸಿದ್ದಲ್ಲದೇ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಪೊಲೀಸರೊಂದಿಗೆ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಮನೆಯ ಒಳಗಿನಿಂದ ಕೈಯಲ್ಲಿ ಒಂದು ಸ್ಟೀಲ್ ರಾಡನ್ನು ಸಿಡಿದುಕೊಂಡು ಬಂದು ಏಕಾಏಕಿಯಾಗಿ ರಾಡ್‌ನಿಂದ ಬಲವಾಗಿ ಪಿಸಿ ವಿನಾಯಕ ಎಂಬವರ ತಲೆಗೆ ಹೊಡೆಯಲು ಬೀಸಿದ್ದು, ವಿನಾಯಕ ರವರು ರಾಡ್‌ನ ಹಲ್ಲೆಯಿಂದ ತಪ್ಪಿಸಿ ಕೊಂಡಾಗ ರಾಡ್‌ನ ಏಟು ಅವರ ಬಲ ಭುಜಕ್ಕೆ ಬಿದ್ದಿದೆ. ಕೈಯಲ್ಲಿದ್ದ ರಾಡನ್ನು ಎಳೆದಾಗ ಆರೋಪಿ ತೇಜಸ್ ತನ್ನ ಕೈಯಿಂದ ಪಿಸಿ ವಿನಾಯಕ ಹಾಗೂ ಇನ್ನೋರ್ವ ಪಿಸಿಗೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ಬೈದು, ಪೊಲೀಸ್ ವಾಹನಕ್ಕೆ ಕಾರನ್ನು ಅಡ್ಡವಾಗಿ ನಿಲ್ಲಿಸಿ, ಜೀವ ಬೆದರಿಕೆ ಹಾಕಿ, ಪೊಲೀಸ್ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿರುವಾಗ ಸಾರ್ವಜನಿಕ, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ಮಾಡಿ, ಕೊಲ್ಲಲು ಪ್ರಯತ್ನಿಸಿದ ಬಗ್ಗೆ ದೂರು ನೀಡಲಾಗಿದೆ.
ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ:68/2024 ៩:352,351,126(2),132,121(1),109,115(2),118 ಬಿ,ಎನ್,ಎಸ್ ಪ್ರಕರಣ ದಾಖಲಾಗಿದೆ.