ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರಿಕೆ ಇರಲಿ: ತಾಯ್ನಾಡಿಗೆ ಮರಳಿದ ಕಡಬದ ಯುವಕ ಚಂದ್ರಶೇಖರ್ ಮನವಿ
ಮಂಗಳೂರು: ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಜಾಗರೂಕರಾಗಿರಿ, ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳುವಾಗ ಎಚ್ಚರಿಕೆ ಅತೀ ಅಗತ್ಯ ಎನ್ನುತ್ತಾರೆ ಕಡಬ ತಾಲೂಕಿನ ಐತ್ತೂರು ನಿವಾಸಿ ಚಂದ್ರಶೇಖರ್.
ತಾನು ಮಾಡದ ತಪ್ಪಿಗೆ ರಿಯಾದ್‌ನಲ್ಲಿ ಸುಮಾರು ಒಂದು ವರ್ಷ ಕಾಲ ಜೈಲುವಾಸ ಅನುಭವಿಸಿ ತಾಯ್ನಾಡಿಗೆ ವಾಪಾಸಾಗಿರುವ ಅವರು ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮನವಿ ಮಾಡಿದರು.
ತನ್ನದೇ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿದ ಹ್ಯಾಕರ್‌ಗಳ ವಂಚನಾ ಜಾಲಕ್ಕೆ ಸಿಲುಕಿ ಏಳು ತಿಂಗಳು ರಿಯಾದ್‌ನ ಜೈಲಿನಲ್ಲಿ ಹಾಗೂ ನಾಲ್ಕು ತಿಂಗಳು ಅಲ್ಲಿನ ಪೊಲೀಸ್ ಠಾಣೆಯಲ್ಲಿ ಬಂಧಿಯಾಗಿದ್ದ ಚಂದ್ರಶೇಖರ್, ತನ್ನಂತೆ ಇನ್ನು ಯಾರೂ ಇಂತಹ ತೊಂದರೆಗೆ ಸಿಲುಕಬಾರದು ಎಂದು ಹೇಳಿದರು.
ಅಲ್ಲದೆ ತನ್ನಂತೆಯೇ ವಿನಾ ಕಾರಣ ಸಂಕಷ್ಟಕ್ಕೆ ಸಿಲುಕಿದ ಅನೇಕ ಮಂದಿ ಭಾರತೀಯರು ರಿಯಾದ್ ಜೈಲಿನಲ್ಲಿದ್ದಾರೆ, ಕನಿಷ್ಠ ಅವರ ನೆರವಿಗಾದರೂ ರಿಯಾದ್‌ನಲ್ಲಿರುವ ಭಾರತೀಯ ವಿದೇಶಾಂಗ ಇಲಾಖೆ ಪ್ರಮಾಣಿಕವಾಗಿ ಪ್ರಯತ್ನ ನಡೆಸಬೇಕು ಎಂದು ಅವರು ಹೇಳಿದರು.
ತಮ್ಮ ಘಟನೆಯ ಬಗ್ಗೆ ವಿವರ ನೀಡಿದ ಅವರು, ಕಳೆದ ವರ್ಷ ನವೆಂಬರ್‌ನಲ್ಲಿ ಇವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಅದಕ್ಕೆ ಸೌದಿಯ ಮಹಿಳೆಯೊಬ್ಬರ ಖಾತೆಯಿಂದ ಅನಾಮತ್ತಾಗಿ 22 ಸಾವಿರ ರಿಯಲ್ ಜಮೆ ಮಾಡಲಾಗಿತ್ತು. ಈ ಬಗ್ಗೆ ಮಹಿಳೆ ಚಂದ್ರಶೇಖರ್ ವಿರುದ್ಧ ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದರು. ತನ್ನ ಖಾತೆ ಹ್ಯಾಕ್ ಆದ ಮಾಹಿತಿ ಇಲ್ಲದೆ ಚಂದ್ರಶೇಖರ್ ವಂಚನೆ ಆರೋಪದಲ್ಲಿ ಜೈಲು ಸೇರುವಂತಾಗಿತ್ತು. ಕೊನೆಗೆ ರಿಯಾದ್‌ನಲ್ಲಿರುವ ತನ್ನ ಕಂಪನಿಯ ಸ್ನೇಹಿತರ ನೆರವಿನಲ್ಲಿ ಮಹಿಳೆಯ 22 ಸಾವಿರ ರಿಯಲ್ (ಭಾರತೀಯ ಮೌಲ್ಯ 4.5 ಲಕ್ಷ ರೂ.) ಪಾವತಿಸಿ, ದೂರನ್ನು ವಾಪಸ್ ಪಡೆದು ಕೇಸುಗಳಿಂದ ಮುಕ್ತಿಗೊಂಡು ಈಗ ಮರಳಿದ್ದಾರೆ.
ವಂಚನೆ ಕೇಸಿನಿಂದ ಮುಕ್ತಗೊಂಡರೂ ನನ್ನ ಬಿಡುಗಡೆಗೆ ಅಲ್ಲಿನ ಅಧಿಕಾರಿಗಳು ಸಾಕಷ್ಟು ಸತಾಯಿಸಿದ್ದಾರೆ. ನನ್ನನ್ನು ಬಂಧಿಸಿದ ಕೂಡಲೇ ಪಾಸ್‌ಪೋರ್ಟ್‌ನ್ನು ಬ್ಲಾಕ್ ಮಾಡಿದ್ದರು. ಬಳಿಕ ಪಾಸ್‌ಪೋರ್ಟ್ ನವೀಕರಿಸಲು ಸೂಚಿಸಿ ಬಿಡುಗಡೆಗೆ ದಿನದೂಡುವ ಯತ್ನಕ್ಕೆ ಅಧಿಕಾರಿಗಳು ಕೈಹಾಕಿದ್ದರು. ಕೊನೆಗೂ ಪಾಸ್‌ಪೋರ್ಟ್ ನವೀಕರಣದ ಅಗತ್ಯವಿಲ್ಲ ಎಂಬುದನ್ನು ನನ್ನ ಸ್ನೇಹಿತರು ಅದನ್ನು ಹಾಜರುಪಡಿಸಿ ಮನವರಿಕೆ ಮಾಡಿದ ಬಳಿಕವೇ ಅಕಾರಿಗಳು ಸಮ್ಮತಿಸಿದರು. ಬಳಿಕ ತಾಯ್ನಾಡಿಗೆ ಮರಳಲು ಏರ್‌ಇಂಡಿಯಾ ಟಿಕೆಟ್ ಮಾಡಿದಾಗ, ನನ್ನ ಬಿಡುಗಡೆ ಬಗ್ಗೆ ಪತ್ರಿಕೆಗಳಲ್ಲಿ ಬಂದ ಸುದ್ದಿಯನ್ನು ಗಮನಿಸಿ ಮತ್ತೆ ಸತಾಯಿಸಲು ಮುಂದಾದರು. ಸೌದಿ ಏರ್‌ಲೈನ್ಸ್ ಇಲ್ಲದೆ ಬೇರೆ ವಿಮಾನದಲ್ಲಿ ಕಳುಹಿಸಲು ಸಾಧ್ಯವಿಲ್ಲ ಎಂದು ಸತಾಯಿಸಿದರು. ಕೊನೆಗೂ ಅಲ್ಲಿ ಉದ್ಯೋಗದಲ್ಲಿರುವ ಕರಾವಳಿ ಮೂಲದ ನನ್ನ ಸ್ನೇಹಿತರಾದ ಅರುಣ್ ಕುಮಾರ್, ಪ್ರಕಾಶ್ ಅಮೀನ್, ಫ್ರಾನ್ಸಿಸ್ ಹಾಗೂ ರಾಘವ್ ಮತ್ತಿತರರು ಸಾಕಷ್ಟು ಪ್ರಯತ್ನಿಸಿ ಒತ್ತಡ ಹಾಕಿಸಿ ಏರ್ ಇಂಡಿಯಾದಲ್ಲಿ ತೆರಳಲು ಅನುವು ಮಾಡಿಕೊಟ್ಟರು. ನನ್ನ ಸ್ನೇಹಿತರ ಸಹಕಾರಕ್ಕೆ ಕತಜ್ಞತೆ ವ್ಯಕ್ತಪಡಿಸುವುದಾಗಿ ಚಂದ್ರಶೇಖರ್ ಹೇಳಿದರು.
ನನ್ನ ಖಾತೆ ಹ್ಯಾಕ್ ಆಗಿದೆ ಎಂದು ಹೇಳಿದರೂ ಆ ಬಗ್ಗೆ ತನಿಖೆ ನಡೆಸದೆ ಮಹಿಳೆಗೆ ವಂಚನೆ ಎಸಗಿದ್ದನ್ನೇ ಗುರಿಯಾಗಿಸಿ ಏಕಪಕ್ಷೀಯವಾಗಿ ತನಿಖೆ ನಡೆಸಿ ನನ್ನನ್ನು ತಪ್ಪಿತಸ್ಥನನ್ನಾಗಿ ಮಾಡಲಾಗಿದೆ. ಒಮ್ಮೆ ಜೈಲು ಶಿಕ್ಷೆಗೆ ಒಳಗಾದರೆ ರಿಯಾದ್‌ನ ಕಾನೂನು ಪ್ರಕಾರ ಮತ್ತೆ ಐದು ವರ್ಷ ಅಲ್ಲಿ ಉದ್ಯೋಗ ಮಾಡುವಂತಿಲ್ಲ. ಹಾಗಾಗಿ ನಾನು ಮುಂದೆ ಬೇರೆ ದೇಶಕ್ಕೆ ತೆರಳಿ ಉದ್ಯೋಗ ಸೇರ್ಪಡೆ ಬಗ್ಗೆ ಯೋಚಿಸುತ್ತಿದ್ದೇನೆ ಎಂದರು. ಚಂದ್ರಶೇಖರ್ ಸಹೋದರ ಹರೀಶ್ ಕಡಬ, ಮುಖಂಡ ಬಾಲಕಷ್ಣ ಬಳಕ ಇದ್ದರು.
ಭಾರತೀಯರಿಗೇ ಕೈಕೊಟ್ಟ ವಿದೇಶಾಂಗ ಇಲಾಖೆ!
ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಕೆಂಗುಡೇಲು ಮಾತನಾಡಿ, ನಾವು ಇಲ್ಲಿನ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾರೂ ಮನಸ್ಸು ಮಾಡಲಿಲ್ಲ. ಭಾರತೀಯ ವಿದೇಶಾಂಗ ಇಲಾಖೆಗೆ ಪತ್ರ ಬರೆದರೆ, ಅವರು ರಿಯಾದ್ ಬದಲು ಬೇರೆ ರಾಷ್ಟ್ರಕ್ಕೆ ಕಳುಹಿಸಿದ್ದರು. ಅಲ್ಲಿ ತಪ್ಪಿತಸ್ಥನಾಗಿ ಜೈಲು ಸೇರಿ ಬಳಿಕ ಖುಲಾಸೆಗೊಂಡು ಬಿಡುಗಡೆಗೊಂಡರೂ ತಾಯ್ನಾಡಿಗೆ ಕಳುಹಿಸಿಕೊಡುವಲ್ಲಿ ಸಹಕಾರ ನೀಡಲು ಅಲ್ಲಿನ ವಿದೇಶಾಂಗ ಇಲಾಖೆ ನಿರಾಕರಿಸಿರುವುದು ಬೇಸರ ತರಿಸಿದೆ. ಹೀಗಾದಲ್ಲಿ ವಿದೇಶದಲ್ಲಿ ವಿನಾ ಕಾರಣ ತೊಂದರೆಗೆ ಸಿಲುಕಿದವರು ಭಾರತೀಯ ವಿದೇಶಾಂಗ ಇಲಾಖೆಯನ್ನಲ್ಲದೆ ಬೇರೆ ಯಾರ ಮೊರೆ ಹೋಗಬೇಕು ಎಂದು ಪ್ರಶ್ನಿಸಿದರು.