ಬೆಳ್ತಂಗಡಿ-ಮೂಡಬಿದ್ರಿ ರಾಜ್ಯ ಹೆದ್ದಾರಿ ಮುಳುಗಡೆ; 15ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ
ವೇಣೂರು: ಬೆಳ್ತಂಗಡಿ ಮೂಡಬಿದ್ರಿ ರಾಜ್ಯಹೆದ್ದಾರಿ ಮುಳುಗಡೆಯಾಗಿದ್ದು, 15ಕ್ಕೂ ಹೆಚ್ಚು ಮನೆಗಳ ಜನರನ್ನು ಸ್ಥಳಾಂತರಿಸಲಾಗಿದೆ. ಮುಂಜಾನೆ ಸಾಧಾರಣ 3ಗಂಟೆಯ ವರೆಗೂ ಮೂಡಬಿದ್ರಿ ಪೊಲೀಸ್ ಮತ್ತು ಸ್ಥಳೀಯ ಯುವಕರು ಶ್ರಮ ವಹಿಸಿ ಜನರನ್ನು ಮಾತ್ರವಲ್ಲದೆ ದನಕರುಗಳನ್ನೂ ಸ್ಥಳಾಂತರಿಸಿದ್ದಾರೆ.
ಮೂಡಬಿದ್ರಿ ಪುರಸಭಾ ವ್ಯಾಪ್ತಿಯ ಮಾರೂರು ಗ್ರಾಮದ ದೇವಸ್ಥಾನ ಸುತ್ತಮುತ್ತ ಹಾಗೂ ಮಸೀದಿ ಪಕ್ಕದ ಸುತ್ತಮುತ್ತ ಇರುವ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದ್ದು ಅಪಾರ ಹಾನಿಯಾಗಿರುವ ಸಂಭವವಿದೆ.
ವೇಣೂರು, ಹೊಸಂಗಡಿ, ಅಂಗರಕರಿಯ ಹನ್ನೆರಡು ಕವಲು ಇಲ್ಲಿ ಸೇತುವೆ ಡ್ಯಾಮ್ ಗಳಲ್ಲಿ ಈ ವರೆಗೆ ಕಂಡು ಕೇಳರಿಯದಷ್ಟು ನೀರು ಹರಿದು ಬಂದು ಅನೇಕ ತೋಟ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ ಎಂದುತಿಳಿದು ಬಂದಿದೆ.
ಕಾಜೋತ್ತು, ಮಟ್ಟು ಪೂಚೆರ್ಲೆಕ್ಕಿ, ದೇರಾರ್, ಪಾದೆ ಅರ್ಲಡ್ಕ, ತೊರ್ಪು ಆಣೆಕಟ್ಟು ಪೇರಿ, ಜಂಗಾರ್, ಕೊಡಮನಿ ಕೊದಿಂಗೇರಿ ಈ ಕಡೆ ತೋಟಕ್ಕೆ ಮನೆಗಳಿಗೆ ಹಟ್ಟಿ ಗಳಿಗೆ ನೀರು ನುಗ್ಗಿದ್ದು ಬೆಳೆ ಹಾನಿಯಾಗಿದ್ದು. ಯಾವುದೇ ಸಾವು ನೋವು ವರದಿಯಾಗಿಲ್ಲ. ಪೊಲೀಸರು, ಲೈನ್ ಮೆನ್ ಗಳು ರಾತ್ರಿ ಯಿಂದ ಮುಂಜಾನೆವರೆಗೂ ಯುವಕರೊಂದಿಗೆ ಸೇರಿಕೊಂಡು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮಾಲಾಡಿ ಸೋಣಂದೂರು ಗ್ರಾಮದ ಮೊದಲೆ ಎಂಬಲ್ಲಿ ಕಿರು ಸೇತುವೆ ಕುಸಿತಗೊಂಡಿದೆ.
ವೇಣೂರು ಚರ್ಚ್ ಬಳಿ ನೆರೆ ನೀರಲ್ಲಿ ಸಿಲುಕಿದ ಬಸ್ ಗಳನ್ನು ರಾತ್ರಿ1.30ಕ್ಕೆ ವೇಣೂರು ಪೊಲೀಸರ ಕಾರ್ಯಾಚರಣೆ ಮೂಲಕ ದಡ ಸೇರಿಸಲಾಯಿತು.