ಬೆಳ್ತಂಗಡಿ | ಅಕ್ರಮ ಕಲ್ಲಿನ ಕ್ವಾರಿಗೆ ಪೊಲೀಸ್ ದಾಳಿ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಹಿತ ಹಲವರ ಬಂಧನ
ಸ್ಫೋಟಕಗಳು ಸೇರಿದಂತೆ ಹಲವು ಸೊತ್ತುಗಳು ವಶ
ಪ್ರಮೋದ್, ಶಶಿರಾಜ್
ಬೆಳ್ತಂಗಡಿ: ತಾಲೂಕಿನ ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಪೊಲೀಸರ ಸಹಕಾರದೊಂದಿಗೆ ನಡೆದ ದಾಳಿಯ ಸಂದರ್ಭದಲ್ಲಿ ಸ್ಥಳದಿಂದ ಸ್ಪೋಟಕಗಳು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಹಾಗೂ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಎಂಬವರ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಸ್ಥಳದಿಂದ ಅಕ್ರಮ ಗಣಿಗಾರಿಕೆಯಿಂದ ತೆಗೆದಿರುವ ಕಲ್ಲುಗಳ ರಾಶಿ, ಒಂದು ಹಿಟಾಚಿ ವಾಹನ, ಒಂದು ಟ್ರಾಕ್ಟರ್, ಕಲ್ಲು ಸ್ಫೋಟಕ್ಕೆ ಬಳಸುವ 4 ಸಜೀವ ಮದ್ದುಗುಂಡು, ಬಳಕೆಯಾಗಿರುವ 4 ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿದ್ದ ಕಾರ್ಮಿಕರನ್ನು ವಿಚಾರಣೆ ನಡೆಸುವ ವೇಳೆ ಅಕ್ರಮ ಗಣಿಗಾರಿಕೆಯನ್ನು ಆರೋಪಿಗಳಾದ ಪ್ರಮೋದ್ ಹಾಗೂ ಶಶಿರಾಜ್ ಎಂಬವರು ನಡೆಸುತ್ತಿರುವುದಾಗಿ ತಿಳಿಸಿದ್ದು, ಅದರಂತೆ ಬೆಳ್ತಂಗಡಿ ತಹಶೀಲ್ದಾರ್ ನೀಡಿರುವ ದೂರಿನಂತೆ ಅವರಿಬ್ಬರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳಾದ ಪ್ರಮೋದ್ ಹಾಗೂ ಶಶಿರಾಜ್ ಎಂಬವರುಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ, ಅ.ಕ್ರ: 56/2024, ಕಲಂ: 9B(1)(b) Explosive act 1884 ಕಲಂ 5 The Explosives Substance Act-1908 ರಂತೆ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪೈಕಿ ಶಶಿರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರೆ, ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಪ್ರಮೋದ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಯುವ ಮೋರ್ಚಾ ಅಧ್ಯಕ್ಷನ ಬಂಧನ ಪ್ರತಿಭಟನೆ
ಅಕ್ರಮ ಕಲ್ಲಿನ ಕಲ್ಲಿನ ಕ್ವಾರಿ ನಡೆಸುತ್ತಿ ಆರೋಪದಲ್ಲಿ ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿಯ ಬಂಧನ ಖಂಡಿಸಿ ಯುವ ಮೋರ್ಚಾ ಕಾರ್ಯಕರ್ತರು ತಡರಾತ್ರಿ ವೇಳೆ ಬೆಳ್ತಂಗಡಿ ಪೊಲೀಸ್ ಠಾಣೆಯ ಎದುರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಶಾಸಕ ಹರೀಶ್ ಪೂಂಜಾ ಕೂಡಾ ಠಾಣೆಯ ಎದುರು ಧರಣಿ ಕುಳಿತು ಶಶಿರಾಜ್ ಶೆಟ್ಟಿ ಬಂಧಿಸಿದ ಪೊಲೀಸರ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯನ್ನು ರಾತ್ರಿ ಮನೆಗೆ ನುಗ್ಗಿ ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿದರು.
ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಸರಕಾರದ, ಪೊಲೀಸರ ಈ ನೀತಿಯ ವಿರುದ್ದ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಬೆಳಗ್ಗಿನ ಜಾವದ ವರೆಗೂ ಬಿಜೆಪಿ ತಾಲೂಕು ಅಧ್ಯಕ್ಷ ಶ್ರೀನಿವಾಸ ರಾವ್ ಸೇರಿದಂತೆ ಯುವ ಮೋರ್ಚಾ ಕಾರ್ಯಕರ್ತರ ತಂಡ ಠಾಣೆಯ ಎದುರು ಜಮಾಯಿಸಿದ್ದರು.