ಬೋಳಿಯಾರು ಪ್ರಕರಣ ಒಂದು ಮನೆಯಲ್ಲಿ ಆಗಿರುವ ಘಟನೆ: ಅಭಿಷೇಕ್ ಉಳ್ಳಾಲ್ ಆರೋಪ
ಉಳ್ಳಾಲ: ಬೋಳಿಯಾರು ಚೂರಿ ಇರಿತ ಪ್ರಕರಣ ಒಂದು ಮನೆಯಲ್ಲಿ ಆದ ಘಟನೆ, ಚುನಾವಣೆ ಸಂದರ್ಭದಲ್ಲಿ ಶಾಸಕರನ್ನು ಸೋಲಿಸಲು ಜಂಟಿಯಾಗಿ ಪ್ರಯತ್ನಿಸಿದ ಎರಡು ಪಕ್ಷದವರ ನಡುವೆ ನಡೆದಿರುವ ಘಟನೆ ಇದಾದರೂ ಕಾನೂನು ಪರ ಇರುವ ಶಾಸಕರ ಮೇಲೆ ಗೂಬೆ ಕೂರಿಸುವ ಕೆಲಸಗಳು ಬಿಜೆಪಿ ಮುಖಂಡರು ಹಾಗೂ ಶಾಸಕರಿಂದ ಆಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಅಭಿಷೇಕ್ ಉಳ್ಳಾಲ್ ಆರೋಪಿಸಿದ್ದಾರೆ.
ಅವರು ಗುರುವಾರ ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭೆ ಚುನಾವಣಾ ಸಂದರ್ಭ ಶಾಸಕರನ್ನು ಸೋಲಿಸಲು ಜಂಟಿಯಾಗಿ ಹೋರಾಟ ನಡೆಸಿದವರ ನಡುವೆ ಹೋರಾಟ ನಡೆಯುತ್ತಿದೆ. ಭಾರತ್ ಮಾತಾ ಕಿ ಜೈ ಪ್ರಚೋದನಕಾರಿ ಎಂದು ಯಾವತ್ತೂ ಕಾಂಗ್ರೆಸ್ ಹೇಳುವುದಿಲ್ಲ. ಅಲ್ಲಿ ನಡೆದಿರುವ ನೈಜ ವಿಚಾರ ಸತ್ಯ ಸಂಗತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸುವ ಕಾರ್ಯವಾಗಬೇಕು. ಶಾಸಕರು ಕಾನೂನು ವ್ಯಾಪ್ತಿಯಲ್ಲಿ ಕೆಲಸಕಾರ್ಯಗಳನ್ನು ಮಾಡಿದ್ದಾರೆ ತಪ್ಪಿತಸ್ಥ ರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರು ಅನುಮತಿ ಪಡೆಯದೆ ರ್‍ಯಾಲಿ ನಡೆಸಿದ್ದಾರೆ. ಪಕ್ಷದ ವಿಜಯೋತ್ಸವ ವೇಳೆ ಕಾರ್ಯಕರ್ತರಲ್ಲಿ ನಾಯಕರು ನಡೆದುಕೊಳ್ಳುವ ರೀತಿಯನ್ನು ತಿಳಿಸಬೇಕು. ಅದನ್ನು ಬಿಟ್ಟು ಶಾಸಕರ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ? ಕಾಂಗ್ರೆಸ್ ಶಾಂತಿಯನ್ನು ಕೆಡಿಸಿರುವ ಇತಿಹಾಸವೇ ಇಲ್ಲ. ಯು.ಟಿ ಖಾದರ್ ವೈರಿ ಎಂದು ಹೇಳುವವರು ಕಾನೂನು ವಿರುದ್ಧವಾಗಿ ಇರುವವರು. ಬೋಳಿಯಾರು ಪ್ರಕರಣದಲ್ಲಿ ಸಿಸಿಟಿವಿ ಫೂಟೇಜ್ ಆಧಾರದಲ್ಲಿ ತನಿಖೆ ನಡೆಯುತ್ತಿದ್ದು, ಸತ್ಯಾಂಶವನ್ನು ಪೊಲೀಸ್ ಇಲಾಖೆ ಜನತೆಯ ಮುಂದೆ ತಂದಿದೆ. ಈ ಬಗ್ಗೆ ಬಿಜೆಪಿ ನಾಯಕರ ಸಲಹೆಯ ಅಗತ್ಯವಿಲ್ಲ. ಭಾರತದವನ್ನು ಪಾಕಿಸ್ತಾನದವ ಅಂದರೆ ಸುಮ್ಮನೆ ಯಾರೂ ಕೂರುವುದಿಲ್ಲ. ಇಡೀ ಘಟನೆಯನ್ನು ಶಾಸಕರ ತಲೆಗೆ ಕಟ್ಟಿಕೊಡುವುದು ಹಾಸ್ಯಾಸ್ಪದ ಎಂದರು
ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರವೂಫ್ ಮಾತನಾಡಿ,ಬೋಳಿಯಾರ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಕಾನೂನು ಹೋರಾಟ ಮಾಡಿದವರು ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆಯಾದಾಗ ಎಲ್ಲಿ ಹೋಗಿದ್ದರು? ಯಾಕೆ ಕಾನೂನು ಹೋರಾಟ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಈ ಸಂದರ್ಭ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎಂ ರವೂಫ್, ಯುವಕಾಂಗ್ರೆಸ್ ಅಧ್ಯಕ್ಷ ಫಿರೋಝ್ ಮಲಾರ್ ಉಪಸ್ಥಿತರಿದ್ದರು.