ಕಡಬ ಮಸೀದಿಯ ಆವರಣದೊಳಗೆ ನುಗ್ಗಿ ಜೈಶ್ರೀರಾಂ ಘೋಷಣೆ ಕೂಗಿದ ಪ್ರಕರಣ: ಓರ್ವ ಆರೋಪಿ ಸೆರೆ
ಕಡಬ: ರಾತ್ರಿ ವೇಳೆ ಬೈಕ್ ನಲ್ಲಿ ಆಗಮಿಸಿ ಮಸೀದಿಯ ಕಾಂಪೌಂಡ್ ಒಳಗೆ ನುಗ್ಗಿ ಜೈಶ್ರೀರಾಮ್ ಘೋಷಣೆ ಕೂಗಿದ ಆರೋಪಿಗಳ ಪೈಕಿ ಓರ್ವನನ್ನು ಘಟನೆ ನಡೆದು 24 ಗಂಟೆಗಳ ಒಳಗಾಗಿ ಕಡಬ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಿಳಿನೆಲೆ ಸೂಡ್ಲು ನಿವಾಸಿ ಕೀರ್ತನ್ (25) ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿ ಕೈಕಂಬ ನಡ್ತೋಟ ನಿವಾಸಿ ಸಚಿನ್ ಪರಾರಿಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ.
ಆರೋಪಿಗಳು ರವಿವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಕಡಬ ಠಾಣಾ ವ್ಯಾಪ್ತಿಯ ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಕಾಂಪೌಂಡ್ ಒಳಗೆ ಬೈಕಿನಲ್ಲಿ ಆಗಮಿಸಿ ಮಸೀದಿಯ ವರಾಂಡದಲ್ಲಿ ಜೈಶ್ರೀರಾಂ ಘೋಷಣೆ ಕೂಗಿದ್ದಾರೆ ಎನ್ನಲಾಗಿದ್ದು, ಮಸೀದಿಯಲ್ಲಿದ್ದ ಧರ್ಮಗುರುಗಳನ್ನು ಕಂಡು ಆರೋಪಿಗಳು ಪರಾರಿಯಾಗಿದ್ದರು.
ಬೈಕಿನಲ್ಲಿ ಕಾಂಪೌಂಡ್ ಒಳಗಡೆ ಬಂದು ತೆರಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ವಿಷಯ ತಿಳಿದು ತಕ್ಷಣವೇ ಸ್ಥಳಕ್ಕಾಗಮಿಸಿದ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಅಭಿನಂದನ್, ಉಪ್ಪಿನಂಗಡಿ ಠಾಣಾ ಸಬ್ ಇನ್ಸ್‌ಪೆಕ್ಟರ್ ರಾಜೇಶ್ ಹಾಗೂ ಸಿಬ್ಬಂದಿ ಪರಿಸರದ ವಿವಿಧ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ತನಿಖೆಯನ್ನು ಚುರುಕುಗೊಳಿಸಿದ ಕಡಬ ಎಸ್ಐ ಅಭಿನಂದನ್, ಎರಡು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಅದರಂತೆ ಸೋಮವಾರ ಸಂಜೆ ವೇಳೆಗೆ ಓರ್ವ ಆರೋಪಿಯನ್ನು ಬಂಧಿಸಿದ್ದು, ಮತ್ತೋರ್ವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.