ಮಗುವಿಗೆ ಅನ್ಯಾಯ ಆರೋಪ ಪ್ರಕರಣ: ‘ನಮ್ಮ ಮಗು ಎಲ್ಲಿದೆ ಎಂದು ತಿಳಿಯಬೇಕು’
ಸಾಂದರ್ಭಿಕ ಚಿತ್ರ
ಮಂಗಳೂರು: ‘‘ನನ್ನ ಪತ್ನಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಮಗು ಚೆನ್ನಾಗಿದೆ ಎಂದು ಹೇಳಿ ಮೂರು ದಿನಗಳ ನಂತರ ಮಗುವಿಗೆ ಕಣ್ಣು ಇಲ್ಲ ಎಂದರೆ ಹೇಗಾಗಬೇಡ. ಹೆರಿಗೆ ಮಾಡಿದ ವೈದ್ಯರಿಗೆ ಈ ಬಗ್ಗೆ ತಿಳಿಯುವುದಿಲ್ಲವೇ ? ಆಸ್ಪತ್ರೆಗೆ ದಾಖಲಾದ ಸ್ಕ್ಯಾನಿಂಗ್ ವರದಿ ಸಹಿತ ಎಲ್ಲಾ ದಾಖಲೆ ಒದಗಿಸಿದ್ದೇವೆ. ಈಗ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ವರದಿ ಕಾಣುತ್ತಿಲ್ಲ ಎನ್ನುತ್ತಿದ್ದಾರೆ. ಇವೆಲ್ಲವೂ ನಮ್ಮ ಮಗು ಅದಲು ಬದಲಾಗಿದೆ ಎಂಬ ಸಂಶಯಕ್ಕೆ ಕಾರಣವಾಗಿದೆ. ನಮ್ಮ ಮಗು ಎಲ್ಲಿದೆ ಎಂದು ತಿಳಿಯಬೇಕು’ ಎಂದು ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆಯ ವೇಳೆ ಮಗುವಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಸಂತ್ರಸ್ತೆ ಮಹಿಳೆಯ ಪತಿ ನಾಗರಾಜ್ ಹೇಳಿದ್ದಾರೆ.
ತುಳುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ಆರೋಪ ಮಾಡಿದ ನಾಗರಾಜ್, ನಮಗೆ ನ್ಯಾಯ ಬೇಕು ಎಂದರು.
ಪ್ರಕರಣದ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಇದೀಗ ಆಸ್ಪತ್ರೆಯಲ್ಲಿ ತಾಯಿ ಹಾಗೂ ಮಗುವಿಗೆ ಜೀವದ ಭಯವಿದೆ. ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಜತೆ ಪ್ರಕರಣದ ಬಗ್ಗೆ ಮಾತುಕತೆ ನಡೆಸಲಾಗಿದ್ದು, ಉನ್ನತ ಮಟ್ಟದ ತನಿಖೆಯ ಭರವಸೆ ನೀಡಿದ್ದಾರೆ. ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಿ ಕಾನೂನು ಕ್ರಮ ಆಗಬೇಕು. ನ್ಯಾಯ ವಿಳಂಬವಾದರೆ ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ತಿಳಿಸಿದರು.
ಸಂತ್ರಸ್ತೆ ತಾಯಿಯ ಗೆಳತಿ ನಿಶ್ಮಿತಾ ಮಾತನಾಡಿ, ಹೆರಿಗೆಯಾದ ದಿನದಿಂದ ನಾನು, ನನ್ನ ಗೆಳತಿಯ ತಾಯಿ ಹಾಗೂ ಸಹೋದರ ಆಸ್ಪತ್ರೆಯಲ್ಲಿದ್ದೇವು. ಎನ್ಐಸಿಯುನಲ್ಲಿ ಮಗುವನ್ನು ಇಟ್ಟಿದ್ದು ಸರಿಯಾಗಿ ನೋಡಲು ಬಿಟ್ಟಿಲ್ಲ. ಮೂರು ದಿನಗಳವರೆಗೂ ಮಗುವಿಗೆ ಎದೆಹಾಲು ಉಣಿಸಲು ಅವಕಾಶ ನೀಡಿಲ್ಲ. ಮಗುವಿಗೆ ಕಣ್ಣು ಇಲ್ಲ ಎಂಬ ವಿಷಯವನ್ನು ಮೂರು ದಿನಗಳ ಕಾಲ ಮನೆಯವರಿಗೆ ತಿಳಿಸದೆ ಇದ್ದದ್ದು ಯಾಕೆ? ಗರ್ಭಾವಸ್ಥೆಯಲ್ಲಿ ಮಾಡಿರುವ ಸ್ಕ್ಯಾನಿಂಗ್ ವರದಿಯಲ್ಲಿ ಮಗುವಿನ ತೊಂದರೆ ಬಗ್ಗೆ ಉಲ್ಲೇಖವಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಸ್ಕ್ಯಾನಿಂಗ್ ವರದಿ ಸರಿ ಇಲ್ಲ ಎಂಬ ಉತ್ತರವನ್ನು ವೈದ್ಯರು ನೀಡುತ್ತಾರೆ. ಹಾಗಿದ್ದರೆ ಸ್ಕ್ಯಾನಿಂಗ್ ಮಾಡಿಸುವುದು ಯಾಕಾಗಿ ? ಎಂದವರು ಪ್ರಶ್ನಿಸಿದರು.
ಗೋಷ್ಟಿಯಲ್ಲಿ ಸಂತ್ರಸ್ತೆ ತಾಯಿಯ ಸಹೋದರ ಸಂತೋಷ್ ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.