ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ಕರಾವಳಿ ಪ್ರದಕ್ಷಿಣೆ
ಮಂಗಳೂರು,ಡಿ.20: ಈ ಬಾರಿಯ ಕರಾವಳಿ ಉತ್ಸವದ ಅಂಗವಾಗಿ ಮಂಗಳೂರಿನಲ್ಲಿ ಹೆಲಿಕಾಪ್ಟರ್ ಮೂಲಕ ಕರಾವಳಿಯ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಒಬ್ಬರಿಗೆ ತಲಾ ರೂಪಾಯಿ 4500.00 ವೆಚ್ಚದಲ್ಲಿ ಮಂಗಳೂರು ಪ್ರದೇಶವನ್ನು ಆಕಾಶ ಮಾರ್ಗದಲ್ಲಿ ಹೆಲಿಕಾಪ್ಟರ್ ಮೂಲಕ ಸುತ್ತ ಹಾಕಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ತುಂಬಿ ಹೆಲಿಟೂರಿಸಂ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹೆಲಿಕಾಪ್ಟರ್ ಮೂಲಕ ಡಿ.21ರಿಂದ 31ರವರೆಗೆ ಮೇರಿಹಿಲ್ ಹೆಲಿಪ್ಯಾಡ್ ಮೂಲಕ ಒಂದು ಬಾರಿ ಆರು ಮಂದಿ ಪ್ರಯಾಣಿಸಲು ಸಾಧ್ಯವಿರುವ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಬಹುದಾಗಿದೆ. ಈ ಹೆಲಿಕಾಪ್ಟರ್ ಮಂಗಳೂರು ಆಸುಪಾಸಿನಲ್ಲಿ ಸುಮಾರು 5ರಿಂದ 7ನಿಮಿಷಗಳ ಒಳಗೆ ಆಕಾಶದಲ್ಲಿ ಒಂದು ಪ್ರದಕ್ಷಿಣೆ ಬಂದು ಮೇರಿ ಹಿಲ್ ಗೆ ಮರಳುತ್ತದೆ.
ಮಂಗಳೂರನ್ನು ಪಕ್ಷಿ ನೋಟದಲ್ಲಿ ನೋಡುವ ಅವಕಾಶ
ಈ ಬಾರಿಯ ಕರಾವಳಿ ಉತ್ಸವದ ವಿಶೇಷ ಆಕರ್ಷಣೆಯಾಗಿ ಮತ್ತು ಹೆಲಿಟೂರಿಸಂ ಅನ್ನು ಮಂಗಳೂರು ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಮೇರಿ ಹಿಲ್ ಹೆಲಿಪ್ಯಾಡ್ ನಿಂದ ಇಂದು ಸಂಜೆ ಪ್ರಾಯೋಗಿಕವಾಗಿ ಪತ್ರಕರ್ತರ ಒಂದು ತಂಡ ಕ್ಯಾಪ್ಟನ್ ವಿ.ಎಸ್ .ಮಲಿಕ್ ರ ನೇತೃತ್ವದಲ್ಲಿ ತುಂಬಿ ಹೆಲಿಟೂರಿಸಂ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹೆಲಿಕಾಪ್ಟರ್ ಮೂಲಕ ಒಂದು ಸುತ್ತು ನಗರ ಪ್ರದಕ್ಷಿಣೆ ಮಾಡಿದೆ.
ಮೂರು ನಿಮಿಷದಲ್ಲಿ ಮೇರಿ ಹಿಲ್ ಪಣಂಬೂರು, ಮಹಾನಗರ ಪಾಲಿಕೆ, ಪಂಪ್ ವೆಲ್ ನೇತ್ರಾವತಿ ನದಿ ಕಿನಾರೆಯ ಮೂಲಕ ಮರಳಿದೆ.