ಮಂಗಳೂರು ಕ್ರೈಸ್ತ ಧರ್ಮಪ್ರಾಂತದಿಂದ ಯು.ಟಿ.ಖಾದರ್ ಗೆ ಸನ್ಮಾನ
ಮಂಗಳೂರು, ಸೆ.16: ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ವತಿಯಿಂದ ಸನ್ಮಾನ ಕಾರ್ಯಕ್ರಮವು ಶನಿವಾರ ಬಿಷಪ್ ಹೌಸ್ ನಲ್ಲಿ ಜರುಗಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಬಿಷಪ್ ಅತಿ ವಂ.ಡಾ.ಪೀಟರ್ ಪೌಲ್ ಸಲ್ದಾನ ಮಾತನಾಡಿ, ಯು.ಟಿ.ಖಾದರ್ ಜನರ ಹೃದಯಗಳನ್ನು ಬೆಸೆಯುವ ಉಕ್ಕಿನ ಮನುಷ್ಯ. ಜನರ ನಡುವೆ ಪ್ರೀತಿ, ಬಾಂಧವ್ಯ ಸೌಹಾರ್ದ ಬೆಳೆಸಲು ಭಗವಂತನು ಅವರಿಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮತ್ತು ವಿಶ್ವಾಸಭರಿತ ಸಮಾಜ ನಿರ್ಮಾಣದಲ್ಲಿ ಕ್ರೈಸ್ತ ಸಮುದಾಯದ ಕೊಡುಗೆ ಮಹತ್ವದ್ದು. ಡಾ.ಪೀಟರ್ ಪೌಲ್ ಸಲ್ದಾನ ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಧರ್ಮಗುರುವಾಗಿ ಅಧಿಕಾರ ಸ್ವೀಕರಿಸಿ ಐದು ವರ್ಷ ಪೂರ್ಣಗೊಳಿಸಿ ಆರನೆ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸುವುದಾಗಿ ನುಡಿದರು
ಅಭಿನಂದನಾ ಭಾಷಣ ಮಾಡಿದ ವಿಕಾರ್ ಜನರಲ್ ಮ್ಯಾಕ್ಸಿಂ ನರೋನ್ಹಾ, ಶ್ರಮಿಕರ, ರೈತರ ವಿದ್ಯಾರ್ಥಿಗಳ, ದಮನಿತರ ಸಮಸ್ಯೆಗಳನ್ನು ನಿವಾರಿಸಲು ಶ್ರಮಿಸುತ್ತಿರುವ, ಎಲ್ಲರ ಜೊತೆ ಬೆರೆತು ಕಾರ್ಯನಿರ್ವಹಿಸುತ್ತಿರುವ ಯು.ಟಿ.ಖಾದರ್ ಅವರು ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷ ಸ್ಥಾನದ ಘನತೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸುವಂತಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಬಿಷಪ್ ಅತೀ.ವಂ.ಪೀಟರ್ ಪೌಲ್ ಸಲ್ದಾನ ಅಧಿಕಾರದ 6ನೆ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಅವರನ್ನು ಅಭಿನಂಧಿಸಲಾಯಿತು.
ರಾಯ್ ಕ್ಯಾಸ್ಟಲಿನೊ, ಅನಿಲ್ ಫೆರ್ನಾಂಡಿಸ್, ಆಲ್ವಿನ್ ಡಿಸೋಜ, ಸಿಸ್ಟರ್ ಸಿಸಿಲಾ, ವಂ.ರೂಪೇಶ್ ಮಾಡ್ತಾ, ಮಾಜಿ ಶಾಸಕ ಜೆ.ಆರ್.ಲೋಬೊ ಉಪಸ್ಥಿತರಿದ್ದರು.
ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ವಂ.ಡಾ.ಜೆ.ಬಿ.ಸಲ್ದಾನ ಸ್ವಾಗತಿಸಿದರು. ಪ್ರೊ.ಜಾನ್ ಡಿಸಿಲ್ವ ಕಾರ್ಯಕ್ರಮ ನಿರೂಪಿಸಿದರು.