ನ.4ರಂದು ನಿಟ್ಟೆ ವಿಶ್ವವಿದ್ಯಾನಿಲಯದ ಘಟಿಕೋತ್ಸವ
ಮಂಗಳೂರು,ಅ.30: ನಿಟ್ಟೆ, ಪರಿಗಣಿತ ವಿಶ್ವವಿದ್ಯಾನಿಲಯದ 13ನೇ ವಾರ್ಷಿಕ ಘಟಿಕೋತ್ಸವ ನ. 4ರಂದು ಸಂಜೆ 4 ಗಂಟೆಗೆ ಕ್ಷೇಮಾ ಕ್ಯಾಂಪಸ್‌ನ ನಿಟ್ಟೆ ಗ್ರೌಂಡ್‌ನಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ವಿವರ ನೀಡಿದ ವಿವಿಯ ಕುಲಪತಿ ಪ್ರೊ.ಎಂ.ಎಸ್. ಮೂಡಿತ್ತಾಯ ಅವರು ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ವಿವಿಧ ಕೋರ್ಸ್‌ಗಳಲ್ಲಿ ಅರ್ಹರಾದ 1,254 ಮಂದಿಗೆ ಪದವಿ ಮತ್ತು 25 ಮಂದಿಗೆ ಪಿಎಚ್‌ಡಿ ಪದವಿಗಳನ್ನು ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.
ಈ ಘಟಿಕೋತ್ಸವವು ವಿಶ್ವ ವಿದ್ಯಾನಿಲಯದ ಮಹತ್ವದ ಮೈಲುಗಲ್ಲಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ವೈದ್ಯಕೀಯ, ದಂತ ವೈದ್ಯಕೀಯ, ಔಪಧ ವಿಜ್ಞಾನ, ಶುಶ್ರೂಷೆ , ಜೀವ ವಿಜ್ಞಾನ, ಸಮಗ್ರ ಆರೋಗ್ಯ ವಿಜ್ಞಾನ, ಮಾನವಿಕ ಹಾಗೂ ವಾಸ್ತುಶಿಲ್ಪ ವಿಷಯಗಳಲ್ಲಿ, ಡಾಕೊರೆಲ್, ಸ್ನಾತಕೋತ್ತರ, ಫೆಲೋಶಿಪ್, ಸ್ನಾತಕೋತ್ತರ ಡಿಪ್ಲೊಮಾ ಪದವಿಗಳನ್ನು ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಕಾನೂನು ಕ್ಷೇತ್ರಕ್ಕೆ ನೀಡಿದ ಅತ್ಯುನ್ನತ ಕೊಡುಗೆಗಾಗಿ ಮತ್ತು ವ್ಯವಹಾರಿಕ ಜಗತ್ತಿನ ಸಾಧನೆಗಾಗಿ ಆಲ್‌ಕಾರ್ಗೋ ಗ್ರೂಪ್‌ನ ಅಧ್ಯಕ್ಷರು ಮತ್ತು ಸಂಸ್ಥಾಪಕ ಶಶಿಕಿರಣ್ ಶೆಟ್ಟಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು .ನಿಟ್ಟೆ ವಿಶ್ವವಿದ್ಯಾನಿಲಯದ 31 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಗುವುದು ಎಂದು ಪ್ರೊ.ಎಂ.ಎಸ್. ಮೂಡಿತ್ತಾಯ ಹೇಳಿದರು.
ವಿಶ್ವ ವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸುವರು. ಪ್ಯಾರಿಸ್ ಬರ್ಗ್‌ನ ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ ಅಂತರ್‌ರಾಷ್ಟ್ರೀಯ ವ್ಯವಹಾರಗಳ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಹಾಮಿದ್ ಅನ್ಸಾರಿ ಮುಖ್ಯ ಅತಿಥಿಯಾಗಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
ಸಹ ಕುಲಾಧಿಪತಿಗಳಾದ ಡಾ. ಎಂ. ಶಾಂತರಾಮ ಶೆಟ್ಟಿ ಮತ್ತು ವಿಶಾಲ್ ಹೆಗ್ಡೆ, ಕುಲಪತಿ ಪ್ರೊ.ಡಾ.ಎಂ.ಎಸ್, ಮೂಡಿತ್ತಾಯ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ ಮತ್ತು ಪರೀಕ್ಷಾ ನಿಯಂತ್ರಕರಾದ ಪ್ರೊ. ಡಾ. ಪ್ರಸಾದ್ ಬಿ ಶೆಟ್ಟಿ ಭಾಗವಹಿಸಲಿದ್ದಾರೆ.
ನಿಟೆ ವಿಶ್ವ ವಿದ್ಯಾನಿಲಯವು 2023ರ ಎನ್‌ಆರ್‌ಐಎಫ್ ಶ್ರೇಯಾಂಕದಲ್ಲಿ ಭಾರತೀಯ ವಿಶ್ವವಿದ್ಯಾನಿಲಯಗಳ ಪೈಕಿ 65ನೇ ಸ್ಥಾನವನ್ನು ಪಡೆದಿದೆ. ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಮೌಲ್ಯಮಾಪನಾ ಮಂಡಳಿ (ಎನ್‌ಎಎಸಿ) ಎ+ಗ್ರೇಡ್ ಪಡೆದುಕೊಂಡಿದೆ.
2023ರ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದ ಪ್ರಕಾರ ಏಶ್ಯದ ಅಗ್ರ 500 ವಿಶ್ವ ವಿದ್ಯಾನಿಲಯಗಳಲ್ಲಿ ಸ್ಥಾನ ಪಡೆದಿದೆ. ಇದಲ್ಲದೆ ಟೈಮ್ಸ್ ಹೈಯರ್ ಎಜುಕೇಶನ್ ಇಂಪ್ಯಾಕ್ಟ್ ರ್ಯಾಂಕಿಂಗ್‌ನಲ್ಲಿ ಸುಸ್ಥಿರ ಅಭಿವೃದ್ಧಿ ಪ್ರಯತ್ನಗಳಿಗಾಗಿ ವಿಶ್ವದ ಅಗ್ರ 400 ವಿಶ್ವ ವಿದ್ಯಾನಿಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂದು ಪ್ರೊ. ಎಂ.ಎಸ್.ಮೂಡಿತ್ತಾಯ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಡಾ.ಹರ್ಷ ಹಾಲಹಳ್ಳಿ ಮತ್ತು ಪರೀಕ್ಷಾ ನಿಯಂತ್ರಕರಾದ ಡಾ. ಪ್ರಸಾದ್ ಬಿ ಶೆಟ್ಟಿ ಉಪಸ್ಥಿತರಿದ್ದರು.