ರಾಜ್ಯಪಾಲರ ಕ್ರಮವನ್ನು ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನಿಂದ ಮೆರವಣಿಗೆ, ಪ್ರತಿಭಟನೆ
ರಸ್ತೆತಡೆ, ಟಯರ್ ಗೆ ಬೆಂಕಿ ಹಚ್ಚಿ, ಬಸ್ಸಿನ ಗಾಜಿಗೆ ಕಲ್ಲೆಸೆದು ಆಕ್ರೋಶ
ಮಂಗಳೂರು, ಆ. 19: ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀದಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರ ವಿರುದ್ಧ ಸೋಮವಾರ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮೆರವಣಿಗೆ, ಪ್ರತಿಭಟನೆ ನಡೆಯಿತು.
ಲಾಲ್ ಭಾಗ್ ನ ಮನಪಾ ಕಚೇರಿ ಎದುರು ಪ್ರತಿಭಟನಾ ಸಭೆಯ ವೇಳೆ ರಸ್ತೆತಡೆ, ಟಯರ್ ಗೆ ಬೆಂಕಿ ಹಚ್ಚಿ, ಬಸ್ಸಿನ ಗಾಜು ಒಡೆದು ಆಕ್ರೋಶ ವ್ಯಕ್ತ ಪಡಿಸಿದ ಘಟನೆಯೂ ನಡೆಯಿತು.
ಮಂಗಳೂರಿನ ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಪ್ರಾರಂಭವಾಗಿ ಲಾಲ್ಭಾಗ್ನ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆ ವರೆಗೆ "ಪಾದಯಾತ್ರೆ" ನಡೆಸಿದ ಕಾಂಗ್ರೆಸ್ಸಿಗರು, ಬಳಿಕ ಪ್ರತಿಭಟನಾ ಸಭೆ ನಡೆಸಿದರು. ಈ ಸಂದರ್ಭ ಪ್ರತಿಭಟನೆಯ ಒಂದು ಗುಂಪು ರಸ್ತೆ ತಡೆ ಮಾಡಿ ಟಯರ್ ಗೆ ಬೆಂಕಿ ಹಚ್ಚಿ, ಬಸ್ಸಿನ ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ, ಎಂ ಎಲ್ ಸಿ ಪ್ರಕಾಶ್ ರಾಥೋಡ್, ಮುಖಂಡರಾದ ರಮಾನಾಥ ರೈ, ಹರೀಶ್ ಕುಮಾರ್, ಐವನ್ ಡಿಸೋಜಾ, ಪದ್ಮರಾಜ್, ಶಕುಂತಳಾ ಶೆಟ್ಟಿ, ಅಶೋಕ್ ರೈ, ಇಬ್ರಾಹಿಮ್ ಕೋಡಿಜಾಲ್, ಮಿಥುನ್ ರೈ , ಪ್ರವೀಣ್ ಚಂದ್ರ ಆಳ್ವ, ಜಿ. ಎ. ಬಾವ, ಶಾಲೆಟ್ಫ ಪಿಂಟೋ, ಪ್ರತಿಭಾ ಕುಳಾಯಿ, ಎಂ.ಎಸ್. ಮುಹಮ್ಮದ್, ವಿಶ್ವಾಸ್ ಕುಮಾರ್ ದಾಸ್, ಅಪ್ಪಿ ಮೊದಲಾದವರು ಉಪಸ್ಥಿತರಿದ್ದರು.
ಬಸ್ಸು ಚಾಲಕ, ನಿರ್ವಾಹಕ ನ ಆಕ್ರೋಶ
ಖಾಸಗಿ ಬಸ್ಸಿನ ಗಾಜು ಒಡೆದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಸ್ಸು ಚಾಲಕ, ನಿರ್ವಾಹಕರು ಈ ರೀತಿ ಬಸ್ಸಿನ ಗಾಜು ಒಡೆದ ಸಂದರ್ಭ ಪ್ರಯಾಣಿಕರಿಗೆ ತೊಂದರೆ ಆದರೆ ಹೊಣೆ ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸ್ಸಿನಲ್ಲಿ ಕೆಲ ಪ್ರಯಾಣಿಕರಿದ್ದರೂ ಯಾರಿಗೂ ಏನೂ ತೊಂದರೆ ಆಗಿಲ್ಲ ಎನ್ನಲಾಗಿದೆ.