ಪದವಿಗಳು ವೃತ್ತಿಯ ಮಾನದಂಡವಲ್ಲ, ಜ್ಞಾನದ ಸಂಕೇತ: ಜಿಫ್ರಿ ತಂಙಳ್
►ಕುಂಬ್ರ ಕೆಐಸಿಯ 4ನೇ ಸನದುದಾನ ಸಮ್ಮೇಳನ ►96 ಪಂಡಿತರಿಗೆ ಕೌಸರಿ, ಅಸ್ಲಮಿ, ಹಾಫಿಲ್ ಪದವಿ
ಪುತ್ತೂರು: ಸನದು (ಪದವಿ)ಗಳು, ಪಂಡಿತ ಬಿರುದುಗಳು ಯಾವುದೇ ವೃತ್ತಿಯನ್ನು ಪಡೆದುಕೊಳ್ಳುವ ಮಾನದಂಡವಲ್ಲ. ಬದಲಿಗೆ ಇದೊಂದು ಜ್ಞಾನದ ಸಂಕೇತವಾಗಿದೆ. ಸನದು ಪಡೆದ ಪಂಡಿತರು ತಾವು ಕಲಿತ ಸಂಸ್ಥೆ ಮತ್ತು ಇದಕ್ಕಾಗಿ ಶ್ರಮಿಸಿದ ವ್ಯಕ್ತಿತ್ವಗಳನ್ನು ಸದಾ ನೆನಪಿನಲ್ಲಿರಿಸಿಕೊಳ್ಳಬೇಕು ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸೈಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.
ಅವರು ಕುಂಬ್ರದ ಕೆಐಸಿ ಕ್ಯಾಂಪಸ್‍ನಲ್ಲಿ ನಡೆದ ಕರ್ನಾಟಕ ಇಸ್ಲಾಮಿಕ್ ಅಕಾಡಮಿ(ಕೆಐಸಿ) ಕುಂಬ್ರ ಇದರ 4ನೇ ವರ್ಷದ ಸನದುದಾನ ಮಹಾಸಮ್ಮೇಳನದಲ್ಲಿ ಶನಿವಾರ ರಾತ್ರಿ ಸನದುದಾನ ನೆರವೇರಿಸಿ ಮಾತನಾಡಿದರು.
ಕೆಐಸಿ ವತಿಯಿಂದ ಇಷೊಂದು ಪಂಡಿತರು ಸಮಾಜಕ್ಕೆ ಅರ್ಪಣೆಯಾಗಿರುವುದು ಅದ್ವಿತೀಯ ಸಂಗತಿಯಾಗಿದ್ದು, ಇದೊಂದು ಪುಣ್ಯದಾಯಕ ವಿಚಾರವಾಗಿದೆ. ಪ್ರಪಂಚದಲ್ಲಿ ಹಲವಾರು ಪದಿವಿಗಳಿದ್ದು, ಇವೆಲ್ಲಕ್ಕೂ ಮೀರಿದ ಉನ್ನತ ಪದವಿ ನುಬುವ್ವತ್ ಪದವಿಯಾಗಿದೆ. ಅದಕ್ಕೆ ಸರಿಸಾಟಿಯಾದ ಯಾವುದೇ ಪದವಿಗಳಿಲ್ಲ ಎಂದರು.
ಕೇವಲ ವಸ್ತ್ರಧಾರಣೆಯಿಂದ ಯಾರೂ ಪಂಡಿತರು ಎನಿಸಿಕೊಳ್ಳುವುದಿಲ್ಲ. ಸರ್ವ ಸಮಯದಲ್ಲೂ ಸೃಷ್ಠಿಕರ್ತನ ಸ್ಮರಣೆಯೊಂದಿಗೆ ಸಹೃದಯತೆ, ದೋಷರಹಿತ ಬದುಕು, ಉತ್ತಮ ಸ್ವಭಾವದ ಮೂಲಕ ಪಂಡಿತರು ಮಾದರಿ ಜೀವನ ನಡೆಸಬೇಕು ಎಂದರು.
ಉತ್ತಮ ಅಡಿಪಾಯಗಳೊಂದಿಗೆ ಶಿಕ್ಷಣ ಪಡೆದಿರುವ ಇಂತಹ ಪಂಡಿತರು ಇಂದಿನ ಸಮಾಜಕ್ಕೆ ಅನಿವಾರ್ಯವಾಗಿದೆ. ಪದವಿ ಪಡೆದಿರುವ ಎಲ್ಲಾ ಪಂಡಿತರು ಧಾರ್ಮಿಕ ಕಾರ್ಯವನ್ನು ಪೂರ್ಣವಾಗಿ ಅನುಷ್ಠಾನಗೊಳಿಸುವ ಕಾರ್ಯ ಮಾಡಬೇಕು ಎಂದರು.
ಸಮಸ್ತ ಕೇಂದ್ರ ಮುಶಾವರದ ಸದಸ್ಯ ಅಬ್ದುಲ್ಲ ಫೈಝಿ ಕೊಡಗು ಸಮ್ಮೇಳನ ಉದ್ಘಾಟಿಸಿದರು. ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್ ಸೈಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾ ನೆರವೇರಿಸಿದರು. ಸಮಸ್ತ ಕೇಂದ್ರ ಮುಶಾವರದ ಸದಸ್ಯ ಶೈಖುನಾ ಅಬ್ದುಲ್ ಸಲಾಂ ಬಾಖವಿ ಮಲಪ್ಪುರಂ ಮುಖ್ಯ ಪ್ರಭಾಷಣ ನಡೆಸಿದರು. ಕೆಐಸಿ ಅಧ್ಯಕ್ಷ ಕೆ.ಪಿ. ಅಹ್ಮದ್ ಹಾಜಿ ಆಕರ್ಷಣ್ ಅಧ್ಯಕ್ಷತೆ ವಹಿಸಿದ್ದರು.
ಸಮಸ್ತ ಕೇಂದ್ರ ಮುಶಾವರದ ಸದಸ್ಯ ಉಸ್ಮಾನ್ ಫೈಝಿ ತೋಡಾರ್, ವಾಗ್ಮಿ ಕೆ.ಆರ್. ಹುಸೈನ್ ದಾರಿಮಿ, ಉದ್ಯಮಿ ಇಕ್ಬಾಲ್ ಕೋಲ್ಪೆ, ಕೆಐಸಿ ನಿರ್ದೇಶಕ ಮೊಯ್ದೀನ್ ಕುಟ್ಟಿ ಹಾಜಿ, ಉದ್ಯಮಿ ಇಕ್ಬಾಲ್ ಬಾಳಿಲ ಶುಭ ಹಾರೈಸಿದರು.
ವೇದಿಕೆಯಲ್ಲಿ ಅಬೂಬಕ್ಕರ್ ಮದನಿ ಸಾಲೆತ್ತೂರು, ಉಸ್ಮಾನ್ ಮದನಿ ಕೊಡಿಪ್ಪಾಡಿ, ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಹನೀಫ್ ಹುದವಿ, ಬಾವಾ ಹಾಜಿ ಕೂರ್ನಡ್ಕ, ಎಲ್.ಟಿ. ರಝಾಕ್ ಹಾಜಿ, ಅಬ್ದುಲ್ ರಹಿಮಾನ್ ಅಝಾದ್, ತ್ವಾಹಿರ್ ಸಾಲ್ಮರ, ಫೈರೋಝ್ ಪರ್ಲಡ್ಕ, ಅಮ್ಜದ್ ಖಾನ್ ಪೋಳ್ಯ, ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಅಬ್ದುಲ್ ರಝಾಕ್ ಹಾಜಿ ಮಣಿಲ, ನಗರಸಭಾ ಸದಸ್ಯ ಮಹಮ್ಮದ್ ರಿಯಾಝ್, ಮಹಮ್ಮದ್ ಹಾಜಿ ಮುಂಡೋಳೆ, ಸೌಶದ್ ಪೋಳ್ಯ, ತಲ್ಹತ್ ಪರ್ಲಡ್ಕ, ಆಶಿಫ್ ಮರೀಲ್, ಹಕೀಂ ಪರ್ತಿಪ್ಪಾಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ನೂತನ ಯೋಜನೆಯನ್ನು ಉದ್ಯಮಿ ಅಬ್ದುಲ್ ಲತೀಫ್ ಗುರುಪುರ ಅನಾವರಣಗೊಳಿಸಿದರು.
ಕೆಐಸಿ ಸಂಘಟನಾ ಕಾರ್ಯದರ್ಶಿ ಅನೀಸ್ ಕೌಸರಿ ಸ್ವಾಗತಿಸಿದರು. ಸ್ವಾಗತ ಸಮಿತಿ ಸಂಚಾಲಕ ಅಶ್ರಫ್ ಶಾ ಮಾಂತೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕೆಐಸಿ ಪ್ರಾಧ್ಯಾಪಕ ಸತ್ತಾರ್ ಕೌಸರಿ ವಂದಿಸಿದರು. ಉಸ್ತಾದ್ ಕೆಎಂಎ ಕೊಡುಂಗಾಯಿ ಕಾರ್ಯಕ್ರಮ ನಿರೂಪಿಸಿದರು.