ಪವರ್ ಟಿ.ವಿಯ ರಾಕೇಶ್ ಶೆಟ್ಟಿ ಮೇಲಿನ ಕೇಸ್ ಹಿಂಪಡೆಯುವಂತೆ ಒತ್ತಾಯಿಸಿ ಮಹಿಳೆಗೆ ಜೀವ ಬೆದರಿಕೆ ಆರೋಪ; ದೂರು ದಾಖಲು
ಸುಳ್ಯ: ಪವರ್ ಟಿ.ವಿ.ಯ ವ್ಯವಸ್ಥಾಪಕ ನಿರ್ದೆಶಕ ರಾಕೇಶ್ ಶೆಟ್ಟಿ ಮೇಲಿನ ಕೇಸು ಹಿಂಪಡೆಯುವಂತೆ ಒತ್ತಾಯಿಸಿ ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಒಡ್ಡಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ಶುಕ್ರವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಆರೋಪಿಗಳನ್ನು ಪ್ರದೀಶ್ ಶೆಟ್ಟಿ, ಭಾಸ್ಕರ ರೈ ಧರ್ಮಸ್ಥಳ, ರವೀಂದ್ರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸರಳ ರೈ, ಜಯಶ್ರೀ ಶೆಟ್ಟಿ, ಕನ್ಯಾಕುಮಾರಿ ರೈ, ಕಾವ್ಯಾ ರೈ, ಅಮಿತಾ ರೈ, ವಾರಿಜಾ ರೈ, ಯತೀಂದ್ರನಾಥ ಶೆಟ್ಟಿ ಎಂದು ಗುರುತಿಸಲಾಗಿದೆ. ತಾಲೂಕಿನ ಕೊಳ್ತಿಗೆಯಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರುವ ವೇಳೆ ಆರೋಪಿಗಳ ಸಹಿತ ಇತರ ಅಪರಿಚಿತ ಇಬ್ಬರು ಮಹಿಳೆಯರು ಹಾಗೂ 6 ಪುರುಷರ ಗುಂಪು ಸೇರಿ ತನ್ನನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು, ಜೀವಬೆದರಿಕೆ ಒಡ್ಡಿದ್ದಾರೆ ಎಂದು ಚಿತ್ರಪ್ರಭಾ ರೈ ಎಂಬ ಮಹಿಳೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಾಹನಗಳಲ್ಲಿ ಬಂದು ತನ್ನನ್ನು ತಡೆದು ನಿಲ್ಲಿಸಿದ ಆರೋಪಿಗಳು ಪವರ್ ಟಿವಿಯ ರಾಕೇಶ್ ಶೆಟ್ಟಿ ಮತ್ತು ಪ್ರಶಾಂತ ಎಂಬವರ ವಿರುದ್ಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ದಾಖಲಾದ ಪ್ರಕರಣವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಹಲ್ಲೆ ನಡೆಸಲು ಯತ್ನಿಸಿದ್ದಲ್ಲದೇ ನಿಮಗೆ ಆಸಿಡ್ ಎರಚುತ್ತೇವೆ, ಕುಟುಂಬದವರ ಪ್ರಾಣ ತೆಗೆಯುತ್ತೇವೆ, ಮನೆಗೆ ಬೆಂಕಿ ಇಡುತ್ತೇವೆ ಎಂಬಿತ್ಯಾದಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆ ನೀಡಿರುವ ದೂರಿನನ್ವಯ ಬೆಳ್ಳಾರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.