ದ.ಕ., ಉಡುಪಿ: 11 ತಿಂಗಳಲ್ಲಿ 171 ಪೊಕ್ಸೊ ಪ್ರಕರಣಗಳು
► ವರ್ಷದಿಂದ ವರ್ಷಕ್ಕೆ ಏರಿಕೆ ► 4 ವರ್ಷಗಳಲ್ಲಿ 680 ಪ್ರಕರಣ ಬೆಳಕಿಗೆ
ಮಂಗಳೂರು: ಹದಿನೆಂಟು ವರ್ಷದೊಳಗಿನವರ ಮೇಲಿನ ಲೈಂಗಿಕ ದೌರ್ಜನ್ಯ, ಕಿರುಕುಳಕ್ಕೆ ಸಂಬಂಧಿಸಿ ದಾಖಲಾಗುವ ಪೊಕ್ಸೊ ಪ್ರಕರಣಗಳಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಆತಂಕಕಾರಿಯಾಗುತ್ತಿದೆ. ಹದಿಹರೆಯದ ಆಕರ್ಷಣೆ, ಜಾಗೃತಿಯ ಕೊರತೆಯು ಪೊಕ್ಸೊ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತಿದ್ದು, ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕಳೆದ 11 ತಿಂಗಳಲ್ಲಿ 171 ಪ್ರಕರಣಗಳು ದಾಖಲಾಗಿವೆ. 2020ರಿಂದ 2023ರ ನವೆಂಬರ್ವರೆಗೆ ಉಭಯ ಜಿಲ್ಲೆಗಳಲ್ಲಿ ಒಟ್ಟು 680 ಪೊಕ್ಸೊ ಪ್ರಕರಣಗಳು ದಾಖಲಾಗಿವೆ.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ ಇಲಾಖೆ ಗಳ ಅಂಕಿಅಂಶಗಳ ಪ್ರಕಾರ ಕಳೆದ 11 ತಿಂಗಳಲ್ಲಿ (2023ರ ಜನವರಿ ಯಿಂದ ನವೆಂಬರ್ 28ರವರೆಗೆ) 84 ಪ್ರಕರಣಗಳು, ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 48 ಹಾಗೂ ಉಡುಪಿಯಲ್ಲಿ 39 ಪ್ರಕರಣಗಳು ದಾಖಲಾಗಿವೆ. ಮಾತ್ರವಲ್ಲದೆ ಮಂಗಳೂರಿನ ಜೈಲಿನಲ್ಲಿ ವಿವಿಧ ಪ್ರಕರಣಗಳಲ್ಲಿ ವಿಚಾರಣಾಧೀನ ಕೈದಿಗಳಾಗಿರುವ 352 ಮಂದಿಯಲ್ಲಿ 54 ಮಂದಿ ಪೊಕ್ಸೊ ಪ್ರಕರಣಗಳ ಆರೋಪಿಗಳಾಗಿದ್ದಾರೆ.
ಹಲವು ಪ್ರಕರಣಗಳು ಗರ್ಭಾವಸ್ಥೆಯಲ್ಲಿ ದಾಖಲು: 18 ವರ್ಷದೊಳಗಿನವರ ಮೇಲೆ ನಡೆಯುವ ಲೈಂಗಿಕ, ಅಪರಾಧ, ದೌರ್ಜನ್ಯದಿಂದ ರಕ್ಷಣೆಗಾಗಿ 2012ರಲ್ಲಿ ಜಾರಿಗೆ ಬಂದಿರುವ ಪೊಕ್ಸೊ ಕಾಯ್ದೆಯು, ಮಗುವಿನ ದೈಹಿಕ ಆರೋಗ್ಯ, ಭಾವನಾತ್ಮಕ, ಬೌದ್ಧಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಆದ್ಯತೆ ನೀಡಿ ಖಾತ್ರಿ ಪಡಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪೊಕ್ಸೊ ಕಾಯ್ದೆಯ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಮೂಲಕ ಅರಿವು ಮೂಡಿಸುವ ಕಾರ್ಯಗಳು ಹೆಚ್ಚಾಗಿರುವ ಕಾರಣ ಈ ಕಾಯ್ದೆಯಡಿ ಪ್ರಕರಣಗಳ ದಾಖಲಾತಿಯಲ್ಲೂ ಹೆಚ್ಚಳ ಕಂಡು ಬರುತ್ತಿದೆ. ಆದರೆ, ಹೆಚ್ಚಿನ ಪ್ರಕರಣಗಳು ದಾಖಲಾಗುವುದು ಸಂತ್ರಸ್ತ ಬಾಲಕಿ ಗರ್ಭಾವಸ್ಥೆಯಲ್ಲಿರುವಾಗ. ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ತರು ತಮಗಾಗಿರುವ ದೌರ್ಜನ್ಯ ಅನ್ಯಾಯವನ್ನು ತಮ್ಮ ಕುಟುಂಬದವರ ಜತೆಗೂ ಹೇಳಿಕೊಳ್ಳಲಾಗದೆ ನೋವು ಅನುಭವಿಸುತ್ತಾರೆ. ಆದರೆ ಲೈಂಗಿಕ ದೌರ್ಜನ್ಯದಿಂದಾಗಿ ಗರ್ಭಾವಸ್ಥೆಗೊಳಪಟ್ಟಾಗ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ವೇಳೆ ವೈದ್ಯರು ಸಮಗ್ರ ಮಾಹಿತಿಯನ್ನು ಕಡ್ಡಾಯವಾಗಿ ದಾಖಲಿಸಬೇಕಾಗುತ್ತದೆ. ಆಗ ಪ್ರಕರಣದ ವರದಿಯು ಸಂಬಂಧಫಟ್ಟ ಇಲಾಖೆಗಳ ಮೂಲಕ ಸಲ್ಲಿಕೆಯಾಗಿ ಪೊಕ್ಸೊದಡಿ ಪ್ರಕರಣ ದಾಖಲಾಗುತ್ತವೆ ಎನ್ನುತ್ತಾರೆ ಪೊಕ್ಸೊದಡಿ ಕಾರ್ಯನಿರ್ವಹಿಸುವ ಸರಕಾರದ ವಿಶೇಷ ಅಭಿಯೋಜಕರು.
ಗ್ರಾಮಾಂತರದಲ್ಲಿ ಪೊಕ್ಸೊ ಪ್ರಕರಣಗಳು ಅಧಿಕ!: ದ.ಕ. ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಎಸ್ಸಿ-ಎಸ್ಟಿ ಅಹವಾಲು ಸಭೆಯಲ್ಲಿಯೂ ದಲಿತ ಮುಖಂಡರಿಂದ ಗ್ರಾಮಾಂತರ ದಲ್ಲಿ ಪೊಕ್ಸೊ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ದೂರು ವ್ಯಕ್ತವಾಗಿತ್ತು. ಅತಿಯಾದ ಮೊಬೈಲ್ ಫೋನ್, ಸಾಮಾಜಿಕ ಜಾಲತಾಣದ ಆಕರ್ಷಣೆ, ಪ್ರೀತಿ, ಪ್ರೇಮದ ಬಲೆಗೆ ಬಿದ್ದು ಹದಿಹರೆಯದ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಈ ಬಗ್ಗೆ ಇಲಾಖೆಯಿಂದ ಜಾಗೃತಿ ಆಗಬೇಕು. ಪೊಕ್ಸೊ ಕಾಯ್ದೆಯ ಗಾಂಭೀರ್ಯತೆ, ಶಿಕ್ಷೆಯ ಪ್ರಮಾಣದ ಬಗ್ಗೆ ಅರಿವು ಮೂಡಿಸಬೇಕು ಎಂಬ ಆಗ್ರಹವೂ ವ್ಯಕ್ತವಾಗಿತ್ತು.
ಬಹುತೇಕ ಪ್ರಕರಣಗಳು ಖುಲಾಸೆಯಲ್ಲಿ ಅಂತ್ಯ: ಪೊಕ್ಸೊ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಶಿಕ್ಷೆಯಾಗುವುದು ಬೆರಳೆಣಿಕೆಯ ಪ್ರಕರಣಗಳಲ್ಲಿ ಮಾತ್ರ. ಹೆಚ್ಚಿನ ಪ್ರಕರಣಗಳಲ್ಲಿ ವಿಚಾರ ಣೆಯ ಸಂದರ್ಭ ಸಾಕ್ಷ್ಯದ ಕೊರತೆ, ಪರಸ್ಪರ ವಿವಾಹಕ್ಕೆ ಒಪ್ಪಿಗೆ ಸೇರಿದಂತೆ ಹಲವು ಕಾರಣಗಳಿಂದಾಗಿ ಆರೋಪಿಗಳು ಖುಲಾಸೆಗೊಳ್ಳುತ್ತಾರೆ. ಹಾಗಾಗಿ ದಾಖಲಾಗುವ ಪ್ರಮಾಣಕ್ಕೆ ಹೋಲಿಸಿದರೆ ಶಿಕ್ಷೆಯಾಗುವ ಪ್ರಮಾಣ ಕಡಿಮೆಯಾಗಿ ಕಂಡುಬರುತ್ತದೆ ಎನ್ನುವುದು ಸರಕಾರಿ ವಿಶೇಷ ಅಭಿಯೋಜಕರ ಅಭಿಪ್ರಾಯ.
ಮಕ್ಕಳ ಬಗ್ಗೆ ಪೋಷಕರಲ್ಲೂ ಎಚ್ಚರ ಅಗತ್ಯ
ಸುಮಾರು 8 ತಿಂಗಳ ಹಿಂದೆ ದ.ಕ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ದಾಖಲಾದ ಪ್ರಕರಣ. 15 ವರ್ಷದ ಬಾಲಕಿಯೊಬ್ಬಳಿಗೆ ಫೇಸ್ಬುಕ್ನಲ್ಲಿ ರಾಜಸ್ತಾನದ ಯುವಕನ ಜತೆ ಸಂಪರ್ಕವಾಗುತ್ತದೆ. ಮನೆಯವರ ಗಮನಕ್ಕೆ ಬಾರದೆ ಆತನನ್ನು ಭೇಟಿಯಾಗಲು ಮಂಗಳೂರು ರೈಲ್ವೆ ನಿಲ್ದಾಣದಿಂದ ಹೊರಟ ಬಾಲಕಿ ಸೇರಿದ್ದು, ಕಾರವಾರ ರೈಲ್ವೆ ನಿಲ್ದಾಣಕ್ಕೆ. ಅಲ್ಲಿ ಅಪರಿಚಿತರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿ ಯಾರಲ್ಲೂ ಏನನ್ನೂ ಹೇಳಲಾಗದೆ, ಭಯದಿಂದ ಮತ್ತೆ ಮಂಗಳೂರು ರೈಲು ನಿಲ್ದಾಣಕ್ಕೆ ಬಂದಾಗ ಮಾಹಿತಿ ದೊರಕಿ ಪ್ರಕರಣ ದಾಖಲಾಗುತ್ತದೆ. ಮಕ್ಕಳ ಕಲ್ಯಾಣ ಸಮಿತಿಯು ಆ ಬಾಲಕಿಯ ರಕ್ಷಣೆ ಮಾಡಿ ಪ್ರಸಕ್ತ ಬಾಲಕಿಗೆ ಪುನರ್ವಸತಿ ಒದಗಿಸಿದೆ.