ಹೃದಯದ ಸಂಬಂಧದಿಂದ ಸಾಮರಸ್ಯ ಸೃಷ್ಟಿ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಡಾ.ರೊನಾಲ್ಡ್ ಕೊಲಾಸೊ ಸಾಮರಸ್ಯ ಪ್ರಶಸ್ತಿ ಪ್ರದಾನ ಸಮಾರಂಭ
ಮಂಗಳೂರು: ಸಮಾಜದಲ್ಲಿ ಸಾಮರಸ್ಯ ಭಾಷಣದಿಂದ ಆಗುವಂತದ್ದಲ್ಲ. ಹೃದಯದಿಂದ ಆಗುವ ಕೆಲಸ. ನಮ್ಮ ನಿಮ್ಮ ನಡುವೆ ಹೃದಯದ ಸಂಬಂಧ ಇದ್ದರೆ ಸಾಮರಸ್ಯ ತನ್ನಿಂದ ತಾನೆ ಸೃಷ್ಟಿಯಾಗಲು ಸಾಧ್ಯ ಎಂದು ಶ್ರೀ ತರಳಬಾಳು ಪೀಠದ ಸಾಣೆಹಳ್ಳಿ ಶಾಖಾಮಠದ ಪಟ್ಟಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಆಮಿ ಆನಿ ಆಮ್ಚಿಂ’ ಸಂಸ್ಥೆಯ ವತಿಯಿಂದ ಕೆಲರಾಯ್ ಚರ್ಚ್ ವಠಾರದಲ್ಲಿ ರವಿವಾರ ಕರಾವಳಿಯ ಅತಿ ದೊಡ್ಡ ಬ್ರಾಸ್ ಬ್ಯಾಂಡ್ ಹಬ್ಬದ ಗ್ರ್ಯಾಂಡ್ ಫಿನಾಲೆ ‘ಪೆಪೆರೆ ಪೆಪೆ ಢುಂ’ ಭವ್ಯ ಕಾರ್ಯಕ್ರಮ ವೇಳೆ ಆಯೋಜಿಸಲಾದ ಉದ್ಯಮಿ, ಕೊಡುಗೈ ದಾನಿ ಡಾ. ರೊನಾಲ್ಡ್ ಕೊಲಾಸೊ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರು ಚೊಚ್ಚಲ ‘ಡಾ. ರೊನಾಲ್ಡ್ ಕೊಲಾಸೊ ಸಾಮರಸ್ಯ ‘ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಅಧಿಕಾರ ಮತ್ತು ಸಂಪತ್ತಿಗಾಗಿ ಆದರ್ಶಗಳನ್ನು ಗಾಳಿಗೆ ತೂರುವ ಜನರನ್ನು ಧಾರ್ಮಿಕ, ರಾಜಕೀಯ, ಸಾಮಾಜಿಕ , ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಇವತ್ತು ಕಾಣಬಹುದು. ಹುಟ್ಟಿನ ಕಾರಣಕ್ಕಾಗಿ ಜಾತಿ ನಮಗೆ ಅಂಟಿಕೊಳ್ಳುತ್ತದೆ. ಸಾಧನೆಯ ಮೂಲಕ ಜಾತಿಯನ್ನು ಮೀರಿ ಬೆಳೆಯಲು, ವಿಶ್ವಮಾನವನಾಗಲು ಅವಕಾಶ ಇದೆ. ನಮ್ಮ ಹುಟ್ಟು ಒಂದೇ ರೀತಿ ಇರುವಾಗ ನಮ್ಮ ನಡುವೆ ಯಾಕೆ ಬೇಲಿಯನ್ನು ಕಟ್ಟುತ್ತೇವೆ. ಬೇಲಿಯನ್ನು ಕಿತ್ತು ಹಾಕಿ ಸಾಮರಸ್ಯದಿಂದ ಬದುಕಲು ಆಚಾರ ಮತ್ತು ಅರಿವು ಅಗತ್ಯ. ಸಮಾಜದಲ್ಲಿ ಅರಿವಿದ್ದವರಿಗೆ ಆಚಾರವಿಲ್ಲ. ಆಚಾರವಿದ್ದವರಿಗೆ ಅರಿವಿಲ್ಲ. ಇದರಿಂದಾಗಿ ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ ಎಂದರು.
ಒಬ್ಬ ಶ್ರೀಮಂತ ಲಕ್ಷ ಹಣ ಕೊಟ್ಟು ಕೊಟ್ಟು ನಾಯಿಯನ್ನು ಕೊಂಡುಕೊಳ್ಳುತ್ತಾನೆ. ಕೆಲವು ವರ್ಷಗಳ ಬಳಿಕ ಒಂದು ದಿನ ಆ ನಾಯಿ ಕಾಣೆಯಾಗುತ್ತದೆ. ಆಗ ಆತ ಪತ್ರಿಕೆಗಳಲ್ಲಿ ನಾಯಿ ಸಿಕ್ಕಿದರೆ ಲಕ್ಷಾಂತರ ಬಹುಮಾನ ಕೊಡುವುದಾಗಿ ಜಾಹೀರಾತು ಕೊಡುತ್ತಾನೆ. ಆಗ ವೃದ್ಧಾಶ್ರಮದ ಅಧಿಕಾರಿ ಫೋನ್ ಮಾಡುತ್ತಾರೆ. ‘ಸ್ವಾಮಿ ನಿಮ್ಮ ನಾಯಿ ಇಲ್ಲೇ ಇದೆ ಹಿಡಿದು ಕೊಂಡು ಹೋಗಿ ಎಂದು’. ಅಲ್ಲಿಗೆ ನಾಯಿ ಹೋಗಲು ಕಾರಣವೆನೆಂದರೆ. ಆ ಶ್ರೀಮಂತ ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಟ್ಟಿದ್ದ. ಆ ನಾಯಿಗೆ ತಾಯಿ ಅನ್ನ ಹಾಕುತ್ತಿದ್ದರು. ಈ ಕಾರಣದಿಂದಾಗಿ ನಾಯಿ ಕೃತಜ್ಞತೆಯಿಂದ ಆಕೆಯನ್ನು ಹುಡುಕಿಕೊಂಡು ಆಶ್ರಮಕ್ಕೆ ಹೋಗಿದೆ. ಇತ್ತು ನಾಯಿಯ ಬಗ್ಗೆ ಯೋಚಿಸುವ ಜನ ನಮ್ಮಲ್ಲಿ ಜಾಸ್ತಿಯಾಗಿದೆ. ನಾಯಿಯ ಮೇಲೆ ಪ್ರೀತಿ ಬೇಡ ಎಂದು ಹೇಳುವುದಿಲ್ಲ. ಮೊದಲು ಹೆತ್ತವರನ್ನು , ಹಿರಿಯರನ್ನು ಗೌರವಿಸಬೇಕಾಗಿದೆ.
ಇವತ್ತು ಧಾರ್ಮಿಕ, ರಾಜಕೀಯ ವಲಯದಲ್ಲಿ ಸಾಮರಸ್ಯವನ್ನು ಕದಡುವ ಕಾರ್ಯಗಳು ಹೆಚ್ಚು ಹೆಚ್ಚಾಗಿ ನಡೆಯುತ್ತಿದೆ. ಕೆಲವೊಮ್ಮೆ ಧರ್ಮಾಧಿಕಾರಿಗಳನ್ನು, ರಾಜಕಾರಣಿಗಳನ್ನು ನಂಬಬಾರದು ಎಂಬ ವಾತಾವರಣ ನಿರ್ಮಾಣವಾಗುತ್ತಿದೆ. ಹಾಗಂತ ಎಲ್ಲ ರಾಜಕಾರಣಿಗಳು, ಧರ್ಮಾಧಿಕಾರಿಗಳು ದಾರಿ ತಪ್ಪಿದ್ದಾರೆ ಎಂದಲ್ಲ. ಇನ್ನೂ ಕೂಡಾ ಮಾನವೀಯ ಅಂತಃಕರಣವನ್ನು ಇಟ್ಟುಕೊಂಡು ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸುವ ಆನೇಕ ಶಕ್ತಿಗಳು ನಮ್ಮಲ್ಲಿ ಇದ್ದಾರೆ. ಅಂತಹ ಶಕ್ತಿಗಳನ್ನು ಗುರುತಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಮಾಡಿದೆ ಎಂದರು.
ಹಿಂದೆ ಮಂಗಳೂರಿಗೆ ಬಂದಾಗ ನಮಗೆ ಮಂಗಳೂರಿನಲ್ಲಿ ಸ್ವಾಗತ ನೀಡಿದವರು ಮುಸ್ಲಿಂ ಬಾಂಧವರು ಅದರಲ್ಲೂ ಹೆಣ್ಣು ಮಕ್ಕಳು. ಬಳ್ಳಾರಿಯಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮ ನಡೆದಾಗ ಮುಸ್ಲಿಂ, ಕ್ರೈಸ್ತ ಯುವಕರು ದಾರಿಯುದ್ಧಕ್ಕೂ ಪೊಲೀಸ್ ಕೆಲಸ, ಎಲ್ಲರಿಗೂ ಪ್ರಸಾದ ನೀಡಿದರು. ಇದು ನಿಜವಾದ ಸಾಮರಸ್ಯ ಎಂದರು.
ನಮಗೆ ಕಾಲ ಪ್ರಜ್ಞೆ ಅಗತ್ಯ. ಕಾಲದ ವಿಳಂಬ ಯಾವ ಕಾರಣಕ್ಕೂ ಸಲ್ಲದು. ನಾವು ಕಾಲಕ್ಕೆ ಅಧೀರು. ಕಾಲ ನಮ್ಮ ಅಧೀನ ವಲ್ಲ. ಆ ಹಿನ್ನೆಲೆಯಲ್ಲಿ ಕಾಲದಪ್ರಜ್ಞೆ ಬಹಳ ಮುಖ್ಯ. ಕಾಲ, ಕಾಯಕ ಮತ್ತು ಕಾಸು ಇವನ್ನು ಸರಿಯಾಗಿ ಉಪ ಯೋಗ ಮಾಡುವವರು ಆತ್ಮವಂಚನೆ, ಸಮಾಜ ದ್ರೋಹ ಮಾಡಲಾರರು. ಕಾಲ, ಕಾಯಕ, ಪ್ರಜ್ಞೆಯನ್ನು ಅರಿತುಕೊಂಡು ನಡೆಯುವ ಕಾರ್ಯ ಸಮಾಜದಲ್ಲಿ ನಡೆಯಲಿ ಎಂದು ಹೇಳಿದರು.
ಉದ್ಯಮಿ ರೊನಾಲ್ಡೊ ಕೊಲಾಸೊ ಪ್ರಾಸ್ತಾವಿಕವಾಗಿ ಮಾತನಾಡಿ ‘ಆಮಿ ಆನಿ ಆಮ್ಚಿಂ’ ಸಂಘಟನೆಯ ವರು ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಅನೇಕ ವೈವಿಧ್ಯತೆಯಿಂದ ಕೂಡಿರುವ ಭಾರತದಲ್ಲಿ ಇಂದಿನ ದಿನಗಳಲ್ಲಿ ದೇಶದ ಉತ್ತಮ ಗುಣಗಳಿಗೆ , ಸಾಮರಸ್ಯಕ್ಕೆ ಕಾರಣಾಂತರಗಳಿಂದ ಧಕ್ಕೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಸಮಾಜದಲ್ಲಿ ಸಾಮರಸ್ಯವನ್ನು ಉಳಿಸಿಬೆಳೆಸಲು ಶ್ರಮಿಸುತ್ತಿರುವ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರಿಂದಾಗಿ ಸಮಾಜದಲ್ಲಿ ಗೊಂದಲವನ್ನುಂಟು ಮಾಡುವ ರಾಜಕಾರಣಿ ಗಳಿಗೆ ಮರು ಚಿಂತನೆಗೆ ಅವಕಾಶ ನೀಡಿದಂತಾಗುತ್ತದೆ ಎಂದರು.
ನಶಿಸಿ ಹೋಗುತ್ತಿರುವ ಬ್ರಾಸ್ ಬಾಂಡ್ ಗೆ ಮರುಜೀವ ನೀಡುವ ಕಾರ್ಯಕ್ರಮವನ್ನು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಜತೆಗೆ ‘ಆಮಿ ಆನಿ ಆಮ್ಚಿಂ’ ತಂಡದವರು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಭಾರತದಲ್ಲಿರುವ ವೈವಿಧ್ಯತೆಗಳಿಗೆ ಮಿತಿಯಿಲ್ಲ. ನಡೆನುಡಿ, ಉಡುಪುಗಳಲ್ಲಿ ವೈವಿಧ್ಯತೆ ಇದೆ. ಇಂದಿನ ದಿನಗಳಲ್ಲಿ ಕೆಲವು ರಾಜಕಾರಣಿಗಳು ಸ್ವಾರ್ಥಕ್ಕಾಗಿ ಮಾಡುವ ಕೃತ್ಯದಿಂದಾಗಿ ಸಮಾಜಕ್ಕೆ ತೊಂದರೆಯಾಗುತ್ತದೆ. ಆರ್ಥಿಕ ಪ್ರಗತಿಯ ವೇಗವನ್ನು ಹೆಚ್ಚಿಸಲು ಸಾಮರಸ್ಯ ಅಗತ್ಯ ಎಂದರು.
ಪಂಡಿತರಾದ್ಯ ಸ್ವಾಮೀಜಿ ಸಮಾಜದಲ್ಲಿ ಸಾಮರಸ್ಯದ ಅರಿವನ್ನು ಮೂಡಿಸಿದ್ದಾರೆ. ಅವರು ಧರ್ಮದ ಹೆಸರಲ್ಲಿ ನಡೆಯುವ ಅನಾಹುತನ್ನು ತಪ್ಪಿಸಿದ್ದಾರೆ. ಇದೊಂದು ಪುಣ್ಯದ ಕೆಲಸ, ಸಾಮರಸ್ಯದ ಮರು ಚಿಂತನೆಗೆ ಅವಕಾಶ ನೀಡಿದಂತಾಗಿದೆ ಎಂದು ಹೇಳಿದರು.
ಮಾಜಿ ಮುಖ್ಯ ಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಶುಭ ಹಾರೈಸಿದರು. ಬೆಂಗಳೂರಿನ ಆರ್ಚ್ ಬಿಷಪ್ ವಂ.ಡಾ.ಪೀಟರ್ ಮಚಾದೊ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಮಂಡಳಿಯ ಅಧ್ಯಕ್ಷ ಡಾ. ಯು.ಟಿ. ಇಫ್ತಿಕರ್ ಫರೀದ್, ಮಾಜಿ ಶಾಸಕ ಜೆ.ಆರ್ ಲೋಬೊ, ಕೇಂದ್ರ ಸರಕಾರದ ಪರೋಕ್ಷ ಮತ್ತು ಕಸ್ಟಮ್ಸ್ ಇಲಾಖೆಯ ವಿಶಾಲ್ ಡಿ ಕೋಸ್ಟ , ರಾಜ್ಯ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ.ಅತಿಕ್, ಉದ್ಯಮಿ ರೋಹನ್ ಮೊಂತೆರೊ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯುಎಚ್, ವಂ. ಫಾ. ಜೇಮ್ಸ್ ಡಿ ಸೋಜ, ಉದ್ಯಮಿ ಫಿಲಿಪ್ಸ್ ಡಿ ಸೋಜ, ಸಿಲ್ವೆಸ್ಟರ್ ಡಿ ಕ್ರಾಸ್ತ, ಫಾ.ಡೆನ್ನಿಸ್ ಡಿ ಸಿಲ್ವ, ಸಿಲ್ವಿಸ್ಟರ್ ಡಿ ಕೋಸ್ಟ, ಅಲೆಕ್ಸ್ ಕ್ಯಾಸ್ಟಲಿನೊ, ಗ್ರಾಪಂ ಅಧ್ಯಕ್ಷ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.
‘ಆಮಿ ಆನಿ ಆಮ್ಚಿಂ’ ಸಂಸ್ಥೆಯ ಅಧ್ಯಕ್ಷ ಡೆನ್ನಿಸ್ ಡಿ ಸಿಲ್ವ ಸ್ವಾಗತಿಸಿದರು, ಸಂಚಾಲಕ ಸಂತೋಷ್ ಡಿ ಕೋಸ್ತ ಸನ್ಮಾನ ಪತ್ರ ವಾಚಿಸಿ ವಂದಿಸಿದರು.