ಡ್ರಗ್ ಪೆಡ್ಲಿಂಗ್: ಪೆಡ್ಲರ್ ಗಳತ್ತ ಮಂಗಳೂರು ಪೊಲೀಸರ ಹದ್ದಿನ ಕಣ್ಣು
ಮಂಗಳೂರು: ಡ್ರಗ್ ಮುಕ್ತ ಮಂಗಳೂರು ಅಭಿಯಾನದಡಿ ಪೆಡ್ಲಿಂಗ್(ಪೂರೈಕೆ ಹಾಗೂ ಸಾಗಾಟ) ಹಾಗೂ ಪೆಡ್ಲರ್(ಪೂರೈಕೆದಾರರು)ಗಳ ಮೇಲೆ ಹದ್ದಿನ ಕಣ್ಣಿರಿಸಿರುವ ಮಂಗಳೂರು ಪೊಲೀಸರಿಗೆ ಬಗೆದಷ್ಟು ಮಾಹಿತಿಗಳು ಲಭ್ಯವಾಗುತ್ತಿವೆ. ಕಳೆದೆರಡು ತಿಂಗಳಿನಿಂದ ಡ್ರಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆಯಡಿ ಮಾಹಿತಿಯನ್ನು ಆಧರಿಸಿ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.
ಆ.1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ಭೇಟಿ ಸಂದರ್ಭ ಪೆಡ್ಲರ್ಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸುವಂತೆ ನಿರ್ದೇಶನ ನೀಡಿದ್ದು, ಅದರಂತೆ ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಆರ್. ಜೈನ್ ನಿರ್ದೇಶನದಲ್ಲಿ ಈ ಸಂಬಂಧ ಪ್ರಕ್ರಿಯೆಗಳು ಬಿರುಸು ಪಡೆದಿವೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜನವರಿಯಿಂದೀಚೆಗೆ ಈಗಾಗಲೇ 70ಕ್ಕೂ ಅಧಿಕ ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿ ಅವರಿಂದ ಕೋಟಿಗಟ್ಟಲೆ ರೂ.ಗಳ ನಿಷೇಧಿತ ಮಾದಕ ದ್ರವ್ಯಗಳನ್ನು(ಸಿಂಥೆಟಿಕ್ ಡ್ರಗ್ಸ್ ಸೇರಿದಂತೆ) ವಶಪಡಿಸಿಕೊಂಡಿದ್ದಾರೆ.
ಸಿಂಥೆಟಿಕ್ ಡ್ರಗ್ಸ್ ಪೂರೈಕೆ ಅವ್ಯಾಹತ!
ಅತ್ಯಂತ ಅಪಾಯಕಾರಿ ಹಾಗೂ ಅತೀ ವೇಗವಾಗಿ ಮಾನಸಿಕ ಹಾಗೂ ದೈಹಿಕವಾಗಿ ದುಷ್ಪರಿಣಾಮ ಬೀರಬಲ್ಲ ನಿಷೇಧಿತ ಸಿಂಥೆಟಿಕ್ ಡ್ರಗ್ಸ್ ಪೂರೈಕೆ ಜಾಲ ಅವ್ಯಾಹತವಾಗಿದೆ ಎಂಬುದು ಕಳೆದೊಂದು (ಆ.1ರಿಂದ) ವಾರದಿಂದೀಚೆಗೆ ಪತ್ತೆಯಾಗುತ್ತಿರುವ ಪ್ರಕರಣಗಳಿಂದ ಬಹಿರಂಗವಾಗುತ್ತಿದೆ. ಮಂಗಳೂರು ಸಿಸಿಬಿ ಪೊಲೀಸರಿಂದ ನಡೆದ ಕಾರ್ಯಾಚರಣೆಯ ವೇಳೆ ಉಳ್ಳಾಲ ತಲಪಾಡಿಯ ದೇವಿಪುರ ರಸ್ತೆ ಬಳಿ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 200 ಗ್ರಾಮ್ ತೂಕ ಹಾಗೂ 10 ಲಕ್ಷ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಂಡಿದ್ದಾಗಿ ಬುಧವಾರ ಪೊಲೀಸರು ಮಾಹಿತಿ ನೀಡಿದ್ದರು. ಬೆಂಗಳೂರಿನಿಂದ ಈ ಡ್ರಗ್ಸ್ ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡುವ ಉದ್ದೇಶ ಆರೋಪಿಗಳದ್ದು.
ಬಗೆದಷ್ಟೂ ಮುಗಿಯದ ಡ್ರಗ್ಸ್ ಜಾಲ!
ಪೊಲೀಸರು ಪ್ರತಿನಿತ್ಯವೆಂಬಂತೆ ನಿಷೇಧಿತ ಮಾದಕ ವಸ್ತುಗಳನ್ನು ಪೂರೈಕೆದಾರರ ಸಹಿತ ಪತ್ತೆ ಹಚ್ಚುತ್ತಿ
ದ್ದರೂ, ಈ ಜಾಲ ಬಗೆದಷ್ಟೂ ಮುಗಿಯದಷ್ಟು ವಿಸ್ತರಿಸಿ ಕೊಂಡಂತೆ ಗೋಚರವಾಗುತ್ತಿದೆ. ಕಳೆದ ಬುಧವಾರ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯ ಬಳಿ ನಂಬರ್ ಪ್ಲೇಟ್ ಇಲ್ಲದ ಕಾರಿನಿಂದ 230.4 ಗ್ರಾಂ ತೂಕದ ಚರಸ್ ಪತ್ತೆ ಹಚ್ಚಿ, ಆರೋಪಿಯೊಬ್ಬನನ್ನು ಬಂಧಿಸಲಾಗಿತ್ತು. ಶುಕ್ರವಾರ ಕಂಕನಾಡಿ ಪಂಪ್ವೆಲ್ ಪರಿಸರದಲ್ಲಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತನಿಂದ ೨ ಕೆಜಿ ತೂಕ ಹಾಗೂ 50,000 ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಕಳೆದ ಏಳು ತಿಂಗಳಲ್ಲಿ ಸುಮಾರು 80 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ಮಾದಕ ದ್ರವ್ಯ ಮಾರಾಟ ಹಾಗೂ ಸಾಗಾಟ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದವರ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಮಾಹಿತಿ ಕಲೆ ಹಾಕುವ ಕಾರ್ಯವೂ ತೀವ್ರಗೊಂಡಿದೆ.
ಸಲಹಾ ಪೆಟ್ಟಿಗೆಯಲ್ಲಿ ಮಾಹಿತಿಗೆ ಸಲಹೆ
ಡ್ರಗ್ಸ್ ಸೇವನೆ, ಮಾರಾಟ, ಪೂರೈಕೆ ಬಗ್ಗೆ ಮಾಹಿತಿ ಇದ್ದಲ್ಲಿ ನೀಡಲು ಸಾರ್ವನಿಕರಿಗೆ ಅನುಕೂಲವಾಗುವಂತೆ ಸಾರ್ವಜನಿಕ ಸ್ಥಳಗಳಲ್ಲಿ, ಜಾತ್ರೆ ಸೇರಿದಂತೆ ಜನಸಂದಣಿ ಸೇರುವಲ್ಲಿ ಸಲಹಾ ಪೆಟ್ಟಿಗೆಗಳನ್ನು ಇರಿಸುವಂತೆ ಇತ್ತೀಚೆಗೆ ಮುಖ್ಯಮಂತ್ರಿ ಮಂಗಳೂರು ಭೇಟಿಯ ಸಂದರ್ಭ ಸಲಹೆ ನೀಡಿದ್ದರು. ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಸಲಹಾ ಪೆಟ್ಟಿಗೆ ಇದೆ. ಸಾರ್ವಜನಿಕರು ಅದನ್ನು ಉಪಯೋಗಿಸಿಕೊಂಡು ಮಾಹಿತಿ ನೀಡಬಹುದು ಎನ್ನುತ್ತಾರೆ ಮಂಗಳೂರು ಪೊಲೀಸ್ ಆಯುಕ್ತರು.