ಗ್ಯಾಸ್ ಸಂಪರ್ಕ ಪರಿಶೀಲನೆಗೆ ಶುಲ್ಕ: ಪೆಟ್ರೋಲಿಯಂ ಕಂಪೆನಿ ವಿರುದ್ಧ ದೂರು
ಸಾಂದರ್ಭಿಕ ಚಿತ್ರ
ಪುತ್ತೂರು: ಗ್ಯಾಸ್ ಕಂಪೆನಿಯು ಅಡುಗೆ ಅನಿಲ ಗ್ಯಾಸ್ ಸಂಪರ್ಕದ ಕಡ್ಡಾಯ ತಪಾಸಣೆಯನ್ನು ನಡೆಸುತ್ತಿದ್ದು, ತಪಾಸಣೆಗೆ ಆಗಮಿಸುವವರು ಈ ಪರಿಶೀಲನೆಗೆ ರೂ. 239 ಸರ್ವೀಸ್ ಚಾರ್ಚ್ ಪಾವತಿಸುವಂತೆ ಹಾಗೂ ರಬ್ಬರ್ ಗ್ಯಾಸ್ ಸುರಕ್ಷಾ ಟ್ಯೂಬ್ ಬದಲಾಯಿಸಿದಲ್ಲಿ ರೂ. 190 ಪಾವತಿಸುವಂತೆ ಸೂಚನೆ ನೀಡಿದ್ದು, ಇದೊಂದು ಗ್ರಾಹಕರ ಮೇಲೆ ಹೇರುವ ಕಾನೂನು ಬಾಹಿರ ಅವ್ಯವಹಾರವಾಗಿದೆ. ಅಲ್ಲದೆ ಮಾನವ ಹಕ್ಕು ಉಲ್ಲಂಘನೆಯಾಗಿದೆ. ಈ ಬಗ್ಗೆ ಗ್ರಾಹಕರಿಗೆ ನ್ಯಾಯ ಒದಗಿಸಿ ಕೊಡುವಂತೆ ಸಾಮಾಜಿಕ ಕಾರ್ಯಕರ್ತ ಆರ್.ಕೆ. ಪಾಂಗಣ್ಣಾಯ ಅವರು ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ, ಜಿಲ್ಲಾಧಿಕಾರಿಗಳಿಗೆ, ಸಹಾಯಕ ಆಯುಕ್ತರಿಗೆ ಹಾಗೂ ತಹಸೀಲ್ದಾರ್ರಿಗೆ ಪೆಟ್ರೋಲಿಯಂ ಕಂಪೆನಿ ವಿರುದ್ಧ ದೂರು ನೀಡಿದ್ದಾರೆ.
ಹಿಂದುಸ್ಥಾನ್ ಪೆಟ್ರೋಲಿಯಂ ಕಂಪೆನಿಯ ಯಾವ ಆದೇಶವೂ ಗ್ರಾಹಕನಿಗೆ ಬಾಧಿಸುವುದಿಲ್ಲ. ಗ್ರಾಹಕನಿಗೆ ಬೈಂಡಿಂಗ್ ಆಗಬೇಕಾದಲ್ಲಿ ಸರ್ಕಾರವು ಬಹುಮತದಿಂದ ನಿರ್ಣಯಿಸಿ, ರಾಷ್ಟ್ರಪತಿಗಳ ಅಂಕಿತಗೊಂಡು ಗಜೆಟ್ ನೋಟಿಫಿಕೇಶನ್ ಆದ ನಂತರವೇ ಬಾಧ್ಯವಾಗುತ್ತದೆ. ಕಂಪೆನಿ ಸೂಚಿಸಿದಂತೆ ಪ್ರತಿಯೊಬ್ಬ ಗ್ರಾಹಕ ರೂ. 239 ರಂತೆ ನೀಡಿದಲ್ಲಿ ಪುತ್ತೂರು ತಾಲೂಕಿನ ಗ್ರಾಹಕರಿಂದ ರೂ. 94,40,000 ಅವ್ಯವಹಾರವಾಗಲಿದೆ. ದ.ಕ. ಜಿಲ್ಲೆಯಾದ್ಯಂತ ಗ್ರಾಹಕರಿಂದ ರೂ. 40,20,00,000 ವಸೂಲಿ ಆಗುತ್ತದೆ. ಅಲ್ಲದೆ ರಾಜ್ಯದಲ್ಲಿ ಹಣವನ್ನು ಕಂಪೆನಿಯು ವಸೂಲಿ ಮಾಡಿದಂತಾಗುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
2015ರಲ್ಲಿ ಗ್ಯಾಸ್ ಏಜೆನ್ಸಿಯವರು ಇದೇ ರೀತಿ ವಸೂಲಿ ಮಾಡಲು ಪ್ರಾರಂಭಿಸಿದಾಗ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಸ್ಥಗಿತಗೊಳಿಸಲಾಗಿತ್ತು. ಬಳಿಕ 2022ರ ಡಿ.18 ರಂದು ಮತ್ತೆ ಈ ಅವ್ಯವಹಾರ ಮುಂದುವರಿಸುವ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಣೆ ನೀಡಲಾಗಿತ್ತು. ಈ ಅವ್ಯವಹಾರವನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ತಿಳುವಳಿಕೆ ನೋಟೀಸು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಇದೀಗ ಅವ್ಯವಹಾರವನ್ನು ಮುಂದುವರಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಗ್ಯಾಸ್ ಮನೆಗೆ ಸರಬರಾಜು ಮಾಡುವವರೇ ಪ್ರತಿ ಬಾರಿ ಗ್ಯಾಸ್ ನೀಡುವ ಸಮಯದಲ್ಲಿ ಪರೀಕ್ಷಿಸಿ ಕುಂದು ಕೊರತೆಗಳನ್ನು ನಿವಾರಿಸಬೇಕು ಎಂದು ಕಾನೂನು ಹೇಳುತ್ತದೆ. ಮನೆಯ ಮಾಲಕರ ಒಪ್ಪಿಗೆ ಇಲ್ಲದೆ ಅಥವಾ ಮಹಿಳೆಯರು ಮಾತ್ರ ಮನೆಯಲ್ಲಿ ಇರುವ ಸಮಯದಲ್ಲಿ ಮನೆಯೊಳಗೆ ಪ್ರವೇಶಿಸುವುದು ಭಾರತೀಯ ದಂಡ ಸಂಹಿತೆಯ ಪ್ರಕಾರ ಕ್ರಿಮಿನಲ್ ಆಪರಾಧವಾಗುತ್ತದೆ ಮತ್ತು ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ. ಈ ಕುರಿತು ಕಂಪೆನಿಯ ಕಾನೂನು ಬಾಹಿರ ಅವ್ಯವಹಾರಗಳನ್ನು ತಡೆದು ಕರ್ನಾಟಕದ ಜನತೆಯ ಮೇಲಾಗುತ್ತಿರುವ ಮಾನವ ಹಕ್ಕು ಉಲ್ಲಂಘನೆ ಯನ್ನು ತಡೆದು ಜನತೆಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆರ್.ಕೆ. ಪಾಂಗಣ್ಣಾಯ ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.