ಮುಹಮ್ಮದೀಯಾ ಹಜ್ ಆ್ಯಂಡ್ ಉಮ್ರಾ ಟ್ರಾವೆಲ್ಸ್ ಏಜೆನ್ಸಿಯಿಂದ ವಂಚನೆ: ಆರೋಪ
► ಮದೀನಾ - ದಮ್ಮಾಮ್‌ನಲ್ಲಿ ಸಿಲುಕಿಕೊಂಡ ಕರಾವಳಿಯ ನೂರಾರು ಉಮ್ರಾ ಯಾತ್ರಾರ್ಥಿಗಳು ► ಊಟ, ವಸತಿ, ಮರಳಲು ವಿಮಾನದ ಟಿಕೆಟ್ ವ್ಯವಸ್ಥೆ ಇಲ್ಲ: ಯಾತ್ರಾರ್ಥಿಗಳ ಅಳಲು
ಮಂಗಳೂರು, ಜ.1: ಉಮ್ರಾ ಯಾತ್ರೆಗೆಂದು ಮಕ್ಕಾ-ಮದೀನಾಕ್ಕೆ ಕರೆದೊಯ್ದ ಮುಹಮ್ಮದೀಯಾ ಹಜ್ ಆ್ಯಂಡ್ ಉಮ್ರಾ ಟ್ರಾವೆಲ್ಸ್‌ನ ಮಾಲಕನು ಯಾತ್ರಾರ್ಥಿಗಳನ್ನು ಅರ್ಧದಲ್ಲೇ ಕೈ ಬಿಟ್ಟಿರುವ ಆರೋಪ ಕೇಳಿ ಬಂದಿದೆ.
ಈ ವ್ಯಕ್ತಿಯಿಂದ ಮೋಸ ಹೋದ ಸುಮಾರು 157ಕ್ಕೂ ಅಧಿಕ ಮಂದಿ ಇದೀಗ ಮದೀನಾ-ದಮ್ಮಾಮ್‌ನಲ್ಲಿ ಸಿಲುಕಿಕೊಂಡಿರುವುದಾಗಿ ವರದಿಯಾಗಿದೆ.
ಅಶ್ರಫ್ ಸಖಾಫಿ ಪರ್ಪುಂಜ ಎಂಬ ಹೆಸರಿನ ವ್ಯಕ್ತಿಯು ಮುಹಮ್ಮದೀಯಾ ಹಜ್ ಆ್ಯಂಡ್ ಉಮ್ರಾ ಟ್ರಾವೆಲ್ಸ್ ಏಜೆನ್ಸಿಯನ್ನು ನಡೆಸುತ್ತಿದ್ದು, ಅತೀ ಕಡಿಮೆ ದರಕ್ಕೆ ಉಮ್ರಾ ಯಾತ್ರೆ ವ್ಯವಸ್ಥೆ ಮಾಡಿಸುವುದಾಗಿ ಹೇಳಿಕೊಂಡು ದ.ಕ., ಹಾಸನ, ಕೊಡಗು ಜಿಲ್ಲೆಯ 160 ಮಂದಿಯನ್ನು ಡಿ.14ಕ್ಕೆ ಮಕ್ಕಾಕ್ಕೆ ಕರೆದೊಯ್ದಿರುವುದಾಗಿ ಹೇಳಲಾಗಿದೆ. ಆದರೆ ಮಕ್ಕಾದಲ್ಲಿ ಉಮ್ರಾ ವಿಧಿ ಪೂರೈಸಿ ಮದೀನಾಕ್ಕೆ ಬಂದ ಬಳಿಕ ಈ ವ್ಯಕ್ತಿಯು ಯಾತ್ರಾರ್ಥಿಗಳನ್ನು ಅರ್ಧದಲ್ಲೇ ಬಿಟ್ಟಿರುವುದಾಗಿ ತಿಳಿದುಬಂದಿದೆ.
ಇದೀಗ ಭಾರತೀಯ ರಾಯಭಾರಿ ಕಚೇರಿ, ಸೌದಿ ಅರೇಬಿಯಾದ ಹಜ್ ಸಚಿವಾಲಯ, ಮಂದೂಬು ಕಂಪೆನಿ ಮತ್ತು ಕೆಸಿಎಫ್ ಸಂಘಟನೆಯ ಕಾರ್ಯಕರ್ತರು ಯಾತ್ರಾರ್ಥಿಗಳ ನೆರವಿಗೆ ಬಂದಿದ್ದಾರೆ. ಕೆಸಿಎಫ್ ವತಿಯಿಂದ ಕಳೆದ ಮೂರ್ನಾಲ್ಕು ದಿನದಿಂದ ಆಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ಪುತ್ತೂರು ತಾಲೂಕಿನ ಕಬಕದಲ್ಲಿ ಕಚೇರಿಯನ್ನು ಹೊಂದಿರುವ ಈ ಟ್ರಾವೆಲ್ಸ್‌ನ ಅಶ್ರಫ್ ಸಖಾಫಿ ಪರ್ಪುಂಜ ಇತರ ಸಹ ಏಜೆನ್ಸಿಗಳ ಮೂಲಕ 160 ಮಂದಿಯನ್ನು ಸುಮಾರು 60-65 ಸಾವಿರ ರೂ.ನಲ್ಲಿ ಉಮ್ರಾ ಯಾತ್ರೆಯ ವ್ಯವಸ್ಥೆ ಕಲ್ಪಿಸುವು ದಾಗಿ ಹೇಳಿ ಮಕ್ಕಾದಿಂದ ಮದೀನಾಕ್ಕೆ ಕರೆದೊಯ್ದು ಬಳಿಕ ವಂಚಿಸಿರುವುದಾಗಿ ದೂರಲಾಗಿದೆ. ಈ ವ್ಯಕ್ತಿಯಿಂದ ಯಾತ್ರಾರ್ಥಿಗಳು ಮಾತ್ರವಲ್ಲ ಸಹ ಏಜೆನ್ಸಿಗಳು ಕೂಡ ಮೋಸ ಹೋಗಿದ್ದು, ತಮ್ಮ ಅಧೀನದಲ್ಲಿರುವ ಯಾತ್ರಾರ್ಥಿಗಳಿಗೆ ಉತ್ತರಿಸಲಾಗದೆ ಪರಿತಪಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಾಧಾರಣವಾಗಿ ಉಮ್ರಾ ಯಾತ್ರೆಗೆ 80-85 ಸಾವಿರ ರೂ. ಬೇಕು. ಅಶ್ರಫ್ ಸಖಾಫಿ ಪರ್ಪುಂಜ ಎಂಬ ವ್ಯಕ್ತಿಯು ಕಡಿಮೆ ಪ್ಯಾಕೇಜ್‌ನಲ್ಲಿ ಉಮ್ರಾ ಯಾತ್ರೆಯ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದಾಗ ಅದನ್ನು ನಂಬಿದ ನಾವು ಹಣ ಪಾವತಿಸಿದೆವು. ಹಾಗೇ ಡಿಸೆಂಬರ್ 14ರಂದು ಮಕ್ಕಾ ತಲುಪಿದೆವು. ಅಲ್ಲಿ ಉಮ್ರಾ ವಿಧಿ ಪೂರೈಸಿ ಮದೀನಾ ತಲುಪಿದೆವು. ಅಲ್ಲೂ ಉಮ್ರಾ ವಿಧಿ ಪೂರೈಸಿ ಇನ್ನೇನೋ ನಾವು ಊರಿಗೆ ಮರಳಬೇಕು ಎನ್ನುವಷ್ಟರಲ್ಲಿ ಅಶ್ರಫ್ ಸಖಾಫಿ ನಾಪತ್ತೆಯಾಗಿದ್ದಾನೆ. ನಮಗೆ ಊರಿಗೆ ಮರಳಲು ಟಿಕೆಟ್ ವ್ಯವಸ್ಥೆ ಮಾಡಿಲ್ಲ, ಊಟ, ತಿಂಡಿ, ವಸತಿಯ ವ್ಯವಸ್ಥೆಯೂ ಇಲ್ಲ. ನಮ್ಮಲ್ಲಿ ರೋಗಿ ಗಳು, ವೃದ್ಧರು, ಮಹಿಳೆಯರು, ಗರ್ಭಿಣಿಯರು, ಮಕ್ಕಳೂ ಕೂಡ ಇದ್ದು, ಎಲ್ಲರೂ ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಮದೀನಾ ಮತ್ತು ದಮ್ಮಾಮ್‌ನಲ್ಲಿ ಪರದಾಡುವಂತಾಗಿದೆ ಎಂದು ಯಾತ್ರಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ನಾವು ಬೇರೆ ಬೇರೆ ಮೂಲಗಳ ಮೂಲಕ ಅಶ್ರಫ್ ಸಖಾಫಿಯನ್ನು ಸಂಪರ್ಕಿಸಲು ಪ್ರಯತ್ನಿಸಿದೆವು. ಆ ವ್ಯಕ್ತಿ ಕೋಝಿಕ್ಕೋಡ್‌ಗೆ ತಲುಪಿರುವ ಮಾಹಿತಿ ಇದೆ. ಯಾತ್ರಾರ್ಥಿಗಳಿಗಾದ ಅನ್ಯಾಯವನ್ನು ಆ ವ್ಯಕ್ತಿಯ ಬಳಿ ಹೇಳಲು ಪ್ರಯತ್ನಿಸಿದಾಗ ಆತ ಉಡಾಫೆಯಿಂದ ಉತ್ತರಿಸಿದ್ದಾನೆ ಎಂದು ಯಾತ್ರಾರ್ಥಿಗಳ ನೆರವಿಗೆ ಧಾವಿಸಿರುವ ವಿವಿಧ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ನೀವು ಏನು ಮಾಡುತ್ತೀರೋ ಮಾಡಿ, ಜನವರಿ 21 ಮತ್ತು 24ರಂದು ಮತ್ತೆ ಉಮ್ರಾಕ್ಕೆ ಯಾತ್ರಾರ್ಥಿಗಳನ್ನು ಕಳುಹಿಸಿ ಕೊಡುವೆ ಎಂದು ಹೇಳಿರುವ ಧ್ವನಿ ಇದೀಗ ವೈರಲ್ ಆಗಿದೆ. ಅಲ್ಲದೆ ಅಶ್ರಫ್ ಸಖಾಫಿಯ ಈ ಉಡಾಫೆಯ ಉತ್ತರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
*ಮೋಸ ಹೋಗದಿರಿ: ಕೇರಳದ ಕಣ್ಣೂರು, ಕಲ್ಲಿಕೋಟೆ ವಿಮಾನ ನಿಲ್ದಾಣಗಳ ಮೂಲಕ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಿದ್ದ ಈ ಯಾತ್ರಾರ್ಥಿಗಳಲ್ಲಿ ದ.ಕ., ಹಾಸನ, ಕೊಡಗು ಜಿಲ್ಲೆಯವರೂ ಇದ್ದಾರೆ ಎಂದು ತಿಳಿದು ಬಂದಿದೆ. ಕಡಿಮೆ ದರದ ಉಮ್ರಾ ಪ್ಯಾಕೇಜ್ ಆಸೆಗೆ ಬಿದ್ದ ಯಾತ್ರಾರ್ಥಿಗಳು ಇದೀಗ ಮೋಸ ಹೋಗಿದ್ದು, ಇನ್ನೆಂದೂ ಇಂತಹ ಏಜೆನ್ಸಿಯ ಬಳಿ ಸುಳಿದಾಡಬೇಡಿ, ಮೋಸ ಹೋಗಬೇಡಿ ಎಂದು ವೀಡಿಯೋ ಮೂಲಕ ಯಾತ್ರಾರ್ಥಿಗಳು ಮನವಿ ಮಾಡಿದ್ದಾರೆ.
ಊರಿಗೆ ತಲುಪಿದ ಮೂವರು ಯಾತ್ರಾರ್ಥಿಗಳು
ಮದೀನಾದಿಂದ ದಮ್ಮಾಮ್ ವಿಮಾನ ನಿಲ್ದಾಣ ತಲುಪಲು 1250 ಕಿ.ಮೀ. ಕ್ರಮಿಸಬೇಕಿದೆ. ದಮ್ಮಾಮ್‌ನಿಂದ ಕೋಝಿಕ್ಕೋಡ್ ಹೊರಡುವ ವಿಮಾನದ ಸಮಯವನ್ನು ಸರಿಯಾಗಿ ಅರಿತುಕೊಳ್ಳದ ಕಾರಣ ಮದೀನಾದಿಂದ ಹೊರಟ ಬಹುತೇಕ ಯಾತ್ರಾರ್ಥಿಗಳು ದಮ್ಮಾಮ್ ವಿಮಾನ ನಿಲ್ದಾಣದಲ್ಲಿ ಬಾಕಿಯಾಗಿದ್ದಾರೆ. ಬುಧವಾರ ಮೂವರಿಗೆ ಮಾತ್ರ ಊರಿಗೆ ಮರಳಲು ಅವಕಾಶ ಲಭಿಸಿದೆ. ಬುಧವಾರ ರಾತ್ರಿ ಸುಮಾರು 50 ಮಂದಿಗೆ ವಿಮಾನ ಏರುವ ಎಲ್ಲಾ ಸಿದ್ಧತೆ ನಡೆಸಿದ್ದರೂ ಕೂಡ ಹವಾಮಾನ ವೈಪರಿತ್ಯದಿಂದಾಗಿ ವಿಮಾನ ಹಾರಾಟ ನಡೆಸಲಿಲ್ಲ. ಹಾಗಾಗಿ ಬಾಕಿಯುಳಿದವರನ್ನು ಗುರುವಾರ ತವರೂರು ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.