ಸ್ವಾತಂತ್ರ್ಯ ನಮಗೆ ಯಾರೂ ದಯಪಾಲಿಸುವುದು ಅಲ್ಲ: ಪ್ರೊ. ನಿತ್ಯಾನಂದ ಶೆಟ್ಟಿ
ಸಂತ ಅಲೋಶಿಯಸ್ ವಿವಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
ಮಂಗಳೂರು: ಸ್ವಾತಂತ್ರ ನಮಗೆ ಯಾರೂ ದಯಪಾಲಿಸುವುದು ಅಲ್ಲ. ಅದನ್ನು ಹೋರಾಟ ಮತ್ತು ಹಕ್ಕೊತ್ತಾಯದ ಮೂಲಕ ನಾವು ಕಂಡು ಕೊಳ್ಳುವುದಾಗಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಅಧ್ಯಕ್ಷರಾದ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಹೇಳಿದ್ದಾರೆ.
ಸಂತ ಅಲೋಶಿಯಸ್ (ಪರಿಗಣಿತ ವಿವಿ) ಕನ್ನಡ ವಿಭಾಗದ ಆಶ್ರಯದಲ್ಲಿ ವಿವಿಯ ಸಾನ್ನಿಧ್ಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ‘ಪ್ರಜಾ ತಂತ್ರ: ಜಗತ್ತು. ದೇಶ ಮತ್ತು ಪ್ರದೇಶ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಜಾತಾಂತ್ರಿಕ ಮೌಲ್ಯ: ಆಧುನಿಕ ಕನ್ನಡ ಸಾಹಿತ್ಯ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಪ್ರಜಾತಂತ್ರವೆ ನಮ್ಮ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ ಎನ್ನುವುದಕ್ಕಿಂತ ಪ್ರಜಾತಂತ್ರವೇ ನಮ್ಮ ಸಂಸ್ಕೃತಿ ಎನ್ನುವುದು ಹೆಚ್ಚು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಆಧುನಿಕ ಕನ್ನಡ ಸಾಹಿತ್ಯದ ಆರಂಭದ ಧೀಮಂತರಾದ ಬಿಎಂಶ್ರಿ ಮತ್ತು ಗೋವಿಂದ ಪೈ ಅವರಿಂದ ತೊಡಗಿ ಮಧ್ಯಭಾಗದಲ್ಲಿ ಕುವೆಂಪು, ಕಾರಂತ, ಬೇಂದ್ರೆ ಅವರಲ್ಲಿ ಮುಂದುವರಿದು, ಇತ್ತೀಚಿನ ದಿನಗಳಲ್ಲಿ ನಮ್ಮ ಕಣ್ಣ ಮುಂದೆ ಇರುವ ವೈದೇಹಿ, ದೇವನೂರ ಮಹಾದೇವ, ಸಾರಾ ಅಬೂಬಕರ್,ಜಾಹ್ನವಿ ಮೊದಲಾದವರ ವರೆಗಿ ಬಹುತೇಕ ಪ್ರಮುಖ ಕನ್ನಡ ಸಾಹಿತಿಗಳು ತಮ್ಮ ಸಾಹಿತ್ಯದಲ್ಲಿ ಪ್ರಜಾತಾಂತ್ರಿಕ ವೌಲ್ಯಗಳಾದ ಸ್ವಾತಂತ್ರ, ಸಮಾನತೆ, ಬಂಧುತ್ವ , ಬಹುತ್ವ, ಅಹಿಂಸೆ, ಸಾಮಾಜಿಕ ನ್ಯಾಯ, ಲಿಂಗೀಯ ನ್ಯಾಯ, ಸೆಕ್ಯುಲರ್ ವಾದ ಇತ್ಯಾದಿಗಳನ್ನು ಕೇವಲ ಘೋಷಣೆಯ ಮಟ್ಟಕ್ಕೆ ಇಳಿಸದೆ ಬಹಳ ಕಲಾತ್ಮಕವಾಗಿ ಮಂಡಿಸಿದ್ದಾರೆ. ಅಂದರೆ ಅವರ ಕೆಲವು ಕೃತಿಗಳನ್ನು ಓದಿದಾಗ ಸಮಕಾಲಿನ ರಾಜಕೀಯಕ್ಕೆ, ರಾಜಕೀಯ ತತ್ವಜ್ಞಾನಕ್ಕೆ ಸಂಬಂಧಿಸಿ ಆನೇಕ ವಿಷಯಗಳು ಮಿಂಚಿ ಮರೆಯಾಗುತ್ತದೆ. ಹೀಗೆ ಮಿಂಚಿ ಮರೆಯಾಗುವ ಎಲ್ಲ ಅಂಶಗಳನ್ನು ಒಟ್ಟು ಮಾಡಿ ಅದರ ಮೂಲಕ ಕನ್ನಡ ಸಾಹಿತ್ಯ ಮತ್ತು ರಾಜ್ಯಶಾಸ್ತ್ರ ಎರಡೂ ಶಿಸ್ತುಗಳನ್ನು ಸಮೀಕರಿಸಿ ಅಧ್ಯಯನ ನಡೆಸಬೇಕಾಗಿದೆ.
ಕುವೆಂಪು ಅವರ ರಾಮಾಯಣ ದರ್ಶನವು ವಾಲ್ಮೀಕಿಯ ರಾಮಾಯಣಕ್ಕಿಂತ ಭಿನ್ನವಾಗಿದೆ. ರಾಮಾಯಣ ದರ್ಶನದಲ್ಲಿ ನೋಡಿದರೆ ವಾಲಿ, ಮಂಥರೆ, ರಾವಣ ಇವರಿಗೆ ಬರುವುದು ಸಾವಲ್ಲ ಅದು ವಿಮುಕ್ತಿಯಾಗಿದೆ. ಸಾವು ಆಧ್ಯಾತ್ಮಿಕ ಪರಿಭಾಷೆಯಲ್ಲಿ ವಿಮುಕ್ತಿಯಾಗುತ್ತದೆ. ಅದೇ ವಿಮುಕ್ತಿ ರಾಜಕೀಯ ಪರಿಭಾಷೆಯಲ್ಲಿ ಸ್ವಾತಂತ್ರವಾಗುತ್ತದೆ ಎಂದು ಹೇಳಿದರು. ಕಾರಂತರ ‘ಚೋಮನ ದುಡಿ’ಯಲ್ಲಿ ಸಂಕಪ್ಪಯ್ಯ ಎಂಬ ಧಣಿಯ ಆಳು ಮಗನಾಗಿರುವ ಚೋಮನಿಗೆ ಸ್ವಂತಕ್ಕೆ ಒಂದು ತುಂಡು ಭೂಮಿ ಬೇಕು ಎಂಬ ಆಸೆ ಹುಟ್ಟುತ್ತದೆ. ಅದು ಯಾವಾಗ ಎಂದರೆ ಅದು ದೇಶದ ಸ್ವಾತಂತ್ರಕ್ಕಾಗಿ ನಡೆಯುತ್ತಿದ್ದ ಹೋರಾಟದ ಆ ಕಾಲದಲ್ಲಿ ಆಗಿತ್ತು. ಚೋಮನ ಭೂಮಿಯ ಬಯಕೆ ಆತನ ಸ್ವಾತಂತ್ರದ ಬಯಕೆಯೂ ಆಗಿತ್ತು ಎಂದು ಹೇಳಿದರು.
ವಸಾಹತುಶಕ್ತಿಯಿಂದ ದೇಶವನ್ನು ಮುಕ್ತಿಗೊಳಿಸುವುದು ಮಾತ್ರ ಸ್ವಾತಂತ್ರವಲ್ಲ. ನಮ್ಮಲ್ಲಿ ನಡೆದುಕೊಂಡು ಬಂದ ಶ್ರೇಣಿಕೃತ ಸಮಾಜದ ತಾರತಮ್ಯವನ್ನು ಮುರಿಯುವುದು, ಇನ್ನೊಬ್ಬರ ಅವಲಂಬನೆಯಿಂದ ಹೊರಬರುವುದು ಸ್ವಾತಂತ್ರ ಆಗಿದೆ ಎಂದು ನುಡಿದರು.
ಚೋಮನ ಆಸೆಯೆ 1970ರ ದಶಕದಲ್ಲಿ ಕರ್ನಾಟಕದಲ್ಲಿ ಭೂಮಸೂದೆಯಾಗಿ ಕಾಣಿಸುತ್ತದೆ. ಚೋಮ ತುಳಿತಕ್ಕೊಳಗಾದ ಎಲ್ಲರಲ್ಲೂ ಇದ್ದಾನೆ. ಭೂ ಮಸೂದೆಯಿಂದ ಜಾಗ ಪಡೆದ ಕರ್ನಾಟಕದಲ್ಲಿ ಅಥವಾ ಅವಿಭಜಿತ ದ.ಕ. ಜಿಲ್ಲೆಯಲ್ಲಿರುವ ನಮ್ಮ ಹಿಂದಿನ ತಲೆಮಾರು ಈಗಿನ ತಲೆಮಾರು ಚೋಮನ ಮಕ್ಕಳು ಅಥವಾ ಮೊಮ್ಮಕ್ಕಳು ಆಗಿದ್ದಾರೆ. ಆದರೆ ದುರಂತವೆಂದರೆ ಈ ಚೋಮನ ಮಕ್ಕಳು, ಮೊಮ್ಮಕ್ಕಳು ರಾಮನ ಸೈನಿಕರಾಗಿ ರೂಪಾಂತರಗೊಂಡಿದ್ದಾರೆ ಎಂದು ಹೇಳಿದರು.
ಸಮಾನತೆ ಎಲ್ಲರಿಗೂ ದೊರೆಯಬೇಕು: ಪ್ರಜಾತಂತ್ರದಲ್ಲಿ ಪ್ರಜೆಗಳು ಎಂಬ ವಿಷಯದಲ್ಲಿ ಮಾತನಾಡಿದ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಐವನ್ ಫ್ರಾನ್ಸಿಸ್ ಲೋಬೊ ಅವರು.ಪ್ರಜಾತಂತ್ರ ಕಳಚುತ್ತಿದೆ.ಅಧಿಕಾರ ಏಕಮುಖ ವಾಗುತ್ತದೆ.ಇದು ಬದಲಾಗಬೇಕು. ತಾರತಮ್ಯ ನಿವಾರಣೆಯಾಬೇಕು.ಅವಕಾಶ, ಸಮಾನತೆಗಳು ಎಲ್ಲರಿಗೂ ದೊರೆಯಬೇಕು ಎಂದು ಲೋಬೊ ಅಭಿಪ್ರಾಯಪಟ್ಟರು.
ಇಂದಿನ ವ್ಯವಸ್ಥೆಯಲ್ಲಿ ಖರೀದಿಸುವವರು ಮತ್ತು ಕೊಳ್ಳುವವರು ಒಂದೇ ಆಗಿದ್ದಾರೆ. ಲಾಭ ತೆರಿಗೆಯನ್ನು ಸೋಲಿಸಿ ಆಧುನಿಕತೆ ಪ್ರಾರಂಭವಾಗಿದೆ. ಏಕಸ್ವಾಮ್ಯ ವ್ಯವಸ್ಥೆಯನ್ನು ಸಾಧಿಸಿದವರು ಈಗ ಲಾಭ ಹಾಗೂ ಬಾಡಿಗೆಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಒಂದೊಮ್ಮೆ ಬಾಡಿಗೆಯನ್ನು ಲಾಭ ಸೋಲಿಸಿತ್ತು. ಈಗ ಲಾಭ ಮತ್ತು ಬಾಡಿಗೆ ಅಥವಾ ತೆರಿಗೆ ಒಂದಾಗಿದೆ .ಒಂದು ರೀತಿಯಲ್ಲಿ ಊಳಿಗಮಾನ್ಯ ವ್ಯವಸ್ಥೆಗೆ ಹೋಗುತ್ತಿದ್ದೆವೆ. ತೆರಿಗೆ ಪ್ರಧಾನ ವ್ಯವಸ್ಥೆ ನಿರ್ಮಾಣವಾಗಿದೆ.ಚೀನಾದ ಮಹಾಗೋಡೆ ಕಟ್ಟಿದ್ದು ಹೊರಗಿನವರು ಒಳಗೆಬಾರದು ಎಂದಷ್ಟೇ ಅಲ್ಲ. ಒಳಗಿನವರು ಹೊರಗೆ ಹೋಗಬಾರದು ಎಂದೂ ಕೂಡಾ ಎಂದು ನಾವು ತಿಳಿದಿರಬೇಕಾಗಿದೆ. ಇಂದು ಜನರು ನಮ್ಮಲ್ಲೇ ಇರಬೇಕು ಎಂಬ ಉದ್ದೇಶಕ್ಕೆ ಬಹುರಾಷ್ಟ್ರೀಯ ಕಂಪೆನಿಗಳು ಗೋಡೆಗಳನ್ನು ನಿರ್ಮಿಸುವ ಬದಲಾಗಿ ಕಂದಕಗಳನ್ನು ನಿರ್ಮಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ಎಂದರೆ ಲೋಕನೀತಿ: ಪ್ರಜಾತಂತ್ರ-ಭಾರತದ ಕಥೆ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಮಂಗಳೂರು ವಿವಿಯ ವಿಶ್ರಾಂತ ರಾಜಕೀಯ ಶಾಸ್ತ್ರ ಪ್ರಾಧ್ಯಾಪಕ ಪ್ರೊ. ರಾಜಾರಾಮ ತೋಳ್ಪಾಡಿ ಉಪನ್ಯಾಸ ನೀಡಿಪ್ರಜಾಪ್ರಭುತ್ವ ಎಂದರೆ ಲೋಕನೀತಿಯಾಗಿದೆ. ಸ್ವಾತಂತ್ರ, ಸಾಮಾಜಿಕ ನ್ಯಾಯ, ಸಹೋದರತೆ ಸಮಾನತೆ ಎಲ್ಲವೂ ಪ್ರಜಾತಂತ್ರದ ಒಳಗೆ ಇದೆ.ಇವೆಲ್ಲವನ್ನು ಸಾಧಿಸಲು ಮನುಷ್ಯ ಸೃಷ್ಠಿ ಮಾಡಿದ ವಿಧಾನ ಪ್ರಜಾತಂತ್ರವಾಗಿದೆ. ಪ್ರಜಾತಂತ್ರದಲ್ಲಿ ಸತ್ಯದ ಹುಡುಕುವ ವ್ಯವಸ್ಥೆ ಇದೆ. ಸತ್ಯವನ್ನು ವಾಸ್ತವೀಕರಿಸಲು ಕೆಲವೊಂದು ರೀತಿ ನೀತಿಗಳನ್ನು ರೂಪಿಸಿದೆ. ಅದು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿ ಇದೆ ಎಂದರು.
ಪ್ರಜಾತಂತ್ರದ ಇತಿಹಾಸವನ್ನು ಮೂರು ರೀತಿಯಲ್ಲಿ ಗುರುತಿಸಬಹುದು. ಇತಿಹಾಸವಿದೆ. ಅವುಗಳೆಂದರೆ ಪ್ರಾಚೀನ ಗ್ರೀಕ್ ಕಾಲದ ಪ್ರಜಾತಂತ್ರ, ಆಧುನಿಕ ಯುರೋಪಿನ ಪ್ರಜಾತಂತ್ರ ಮತ್ತು ಭಾರತದಂತಹ ವಸಾಹತುಶಾಹಿ ದೇಶಗಳು ಕಂಡುಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆ ಆಗಿದೆ ಎಂದು ಹೇಳಿದರು.
ಸಂತ ಅಲೋಶಿಯಸ್ ಪರಿಗಣಿತ ವಿವಿಯ ಕುಲಪತಿ ರೆ.ಡಾ.ಪ್ರವೀಣ್ ಮಾರ್ಟಿಸ್. ಎಸ್.ಜೆ ಅಧ್ಯಕ್ಷತೆಯಲ್ಲಿ ನಡೆದ ವಿಚಾರ ಸಂಕಿರಣವನ್ನು ದ.ಕ. ನಿರ್ಮಿತಿ ಕೇಂದ್ರ ಎನ್‌ಐಟಿಕೆ ಸುರತ್ಕಲ್ ಇದರ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಉದ್ಘಾಟಿಸಿದರು. ಹೈದರಾಬಾದ್ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಶಿವರಾಮ ಪಡಿಕ್ಕಲ್ ಆನ್‌ಲೈನ್ ಮೂಲಕ ಆಶಯ ನುಡಿಗಳನ್ನಾಡಿದರು.
ಸ್ವಾಯತ್ತ ಕಾಲೇಜಿನ ಕುಲಸಚಿವ ಡಾ.ಅಲ್ವೀನ್ ಡೆಸಾ, ಪರಿಗಣಿತ ವಿವಿ ಕುಲಸಚಿವ ಡಾ.ರೊನಾಲ್ಡ್ ನಜರತ್ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನ ಸ್ವಾಗತಿಸಿದರು, ಸಹಾಯಕ ಪ್ರಾಧ್ಯಾಪಕ ಡಾ.ದಿನೇಶ್ ನಾಯಕ್ ಕಾರ್ಯಕ್ರಮ ಸಂಯೋಜಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಡಾ.ಮಹಾಲಿಂಗ ಭಟ್ ವಂದಿಸಿದರು. ಡಾ. ಪ್ರಭುಕುಮಾರ್ ಪಿ. ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮ ನಿರೂಪಿಸಿದರು. ವಿಚಾರ ಸಂಕಿರಣದ ನಂತರ ಫೋಟೊ ಸಿನಿಮಾ ಪ್ರದರ್ಶನ ನಡೆಯಿತು.