ರಾಜ್ಯಪಾಲ, ಸಿಎಂ, ಡಿಸಿಎಂ ಭೇಟಿ ಹಿನ್ನೆಲೆ: ಮೇ 25, 26 ರಂದು ಮಂಗಳೂರಿನ ರಸ್ತೆ ಸಂಚಾರದಲ್ಲಿ ಬದಲಾವಣೆ
ಸಾಂದರ್ಭಿಕ ಚಿತ್ರ
ಮಂಗಳೂರು: ರಾಜ್ಯಪಾಲರು, ಮುಖ್ಯಮಂತ್ರಿ ಮತ್ತಿತರ ಗಣ್ಯ ವ್ಯಕ್ತಿಗಳು ಮೇ 25,26ರಂದು ಮಂಗಳೂರಿನ ಟಿ.ಎಂ.ಎ.ಪೈ ಹಾಲ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲಿ ವಾಹನ ದಟ್ಟಣೆ ಅಧಿಕವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನವಭಾರತ ಸರ್ಕಲ್ನಿಂದ ಪಿವಿಎಸ್ ಮೂಲಕ ಲೇಡಿಹಿಲ್ ಸರ್ಕಲ್ ಕಡೆಗೆ ಹೋಗುವ ಎಂಜಿ ರಸ್ತೆಯಲ್ಲಿನ ಎಲ್ಲಾ ಮೀಡಿಯನ್ಗಳನ್ನು ಮುಚ್ಚಲಾಗುತ್ತದೆ. ಅಂದರೆ ಬೆಸೆಂಟ್ ಜಂಕ್ಷನ್, ಕೋಡಿಯಾಲ್ಗುತ್ತು ಕ್ರಾಸ್, ಬಲ್ಲಾಳ್ಬಾಗ್ ಜಂಕ್ಷನ್, ನೆಹರೂ ಅವೆನ್ಯೂ ಜಂಕ್ಷನ್ನಲ್ಲಿ ಸಂಚರಿಸುವ ಎಲ್ಲಾ ವಾಹನ ಚಾಲಕರಿಗೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ಪೊಲೀಸ್ ಇಲಾಖೆಯು ಸೂಚಿಸಿದೆ.
► ಕೊಟ್ಟಾರ ಚೌಕಿ, ಕುಂಟಿಕಾನ, ಕೆಪಿಟಿ, ನಂತೂರು, ಬಿಜೈ, ಬಂಟ್ಸ್ ಹಾಸ್ಟೆಲ್, ಡಾ. ಅಂಬೇಡ್ಕರ್ ಸರ್ಕಲ್, ಹಾರ್ಟಿಕಲ್ಚರ್ ಜಂಕ್ಷನ್, ಬಲ್ಮಠ, ಹಂಪನಕಟ್ಟೆ, ಕರಾವಳಿ ಸರ್ಕಲ್, ಕಂಕನಾಡಿ, ಪಂಪ್ವೆಲ್, ತೊಕ್ಕೊಟ್ಟು ಈ ಸ್ಥಳಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿವೆ.
► ಹಂಪನಕಟ್ಟೆಯಿಂದ ಬಂಟ್ಸ್ ಹಾಸ್ಟೆಲ್ ಮೂಲಕ ಲೇಡಿಹಿಲ್ಗೆ ಹೋಗುವ ಎಲ್ಲಾ ವಾಹನಗಳು ಕರಂಗಲ್ಪಾಡಿ ಅಥವಾ ಭಾರತ್ ಬೀಡಿ ಜಂಕ್ಷನ್ ಮೂಲಕ ಚಲಿಸುವುದು.
► ಪಿವಿಎಸ್ ಜಂಕ್ಷನ್ನಿಂದ ಲೇಡಿಹಿಲ್ ಸರ್ಕಲ್ವರೆಗಿನ ಎಂಜಿ ರಸ್ತೆಗೆ ಬಂದು ಸೇರುವ ಎಲ್ಲಾ ಕೂಡು ರಸ್ತೆಗಳನ್ನು ಉಪಯೋಗಿಸುವ ವಾಹನ ಸವಾರರು ಬಿಜೈ ಚರ್ಚ್ ರೋಡ್/ಕುದ್ರೋಳಿ ರಸ್ತೆಯನ್ನು ಉಪಯೋಗಿಸುವುದು.
► ಬಸ್ಗಳ ಸಂಚಾರಕ್ಕೆ ನಿಗದಿಪಡಿಸಿದ ರಸ್ತೆಗಳು: ಕೆ.ಎಸ್.ರಾವ್ ರಸ್ತೆ, ಎಂ.ಜಿ. ರಸ್ತೆ, ಬಂಟ್ಸ್ ಹಾಸ್ಟೆಲ್ ಮೂಲಕ ಸಂಚರಿಸುವ ಎಲ್ಲಾ ಸಿಟಿ, ಎಕ್ಸ್ಪ್ರೆಸ್ ಹಾಗೂ ಸರಕಾರಿ ಬಸ್ಗಳು ಹಂಪನಕಟ್ಟ, ಡಾ.ಅಂಬೇಡ್ಕರ್ ವೃತ್ತ, ಬಲ್ಮಠ, ಹಾರ್ಟಿಕಲ್ಚರ್ ಜಂಕ್ಷನ್, ಕದ್ರಿ ಜಂಕ್ಷನ್, ನಂತೂರು ಮೂಲಕ ಸಂಚರಿಸಲು ಸೂಚಿಸಿದೆ.
► ಕೊಟ್ಟಾರ ಚೌಕಿ ಮೂಲಕ ಸ್ಟೇಟ್ಬ್ಯಾಂಕ್ ಕಡೆಗೆ ಬರುವ ಎಲ್ಲಾ ಸಿಟಿ, ಎಕ್ಸ್ಪ್ರೆಸ್ ಹಾಗೂ ಸರಕಾರಿ ಬಸ್ಗಳು ನಂತೂರು ಮುಖಾಂತರ ಸಂಚರಿಸಲು ಸೂಚಿಸಿದೆ.
► ಬಿಜೈ ಸರಕಾರಿ ಬಸ್ ನಿಲ್ದಾಣದಿಂದ ಹೊರಹೋಗುವ ಹಾಗೂ ಒಳಬರುವ ಎಲ್ಲಾ ಬಸ್ಗಳು ರಾಷ್ಟ್ರೀಯ ಹೆದ್ದಾರಿಯ ಕುಂಟಿಕಾನ ಜಂಕ್ಷನ್ ಮೂಲಕ ಒಳ ಬರಲು ಹಾಗೂ ಹೊರ ಹೋಗಲು ಸೂಚಿಸಿದೆ.
► ವಾಹನ ಪಾರ್ಕಿಂಗ್ ನಿಷೇಧಿತ ಸ್ಥಳಗಳು: ಪಿವಿಎಸ್ ಜಂಕ್ಷನ್ನಿಂದ ಲಾಲ್ಭಾಗ್ ಜಂಕ್ಷನ್ವರೆಗಿನ ಎಂಜಿ ರಸ್ತೆಯಲ್ಲಿ, ಪಿವಿಎಸ್ ಜಂಕ್ಷನ್ನಿಂದ ಬಂಟ್ಸ್ ಹಾಸ್ಟೆಲ್ ಜಂಕ್ಷನ್ವರೆಗೆ ಹಾಗೂ ಲಾಲ್ಬಾಗ್ ಜಂಕ್ಷನ್ನಿಂದ ಕೆಪಿಟಿ ಜಂಕ್ಷನ್ವರೆಗಿನ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.